ಮಂಗಳೂರು ನಗರದಲ್ಲಿ ವಾಹನಗಳ ವೇಗ ಮಿತಿ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ನಗರದೊಳಗೆ ವಾಹನಗಳ ವೇಗ ಅತಿಯಾಗಿದೆ. ಟ್ರಾಫಿಕ್ ಜಾಮ್ ಇದ್ದಾಗ ಮಾತ್ರವೇ ವಾಹನಗಳು ನಿಧಾನವಾಗಿ ಹೋಗುತ್ತವೆ. ಇನ್ನು ಕೆಲವು ಕಡೆ ವೇಗ ತಡೆ(ಹಂಪ್ಸ್)ಗಳಿರುವುದರಿಂದ ವೇಗವನ್ನು ತಗ್ಗಿಸಲಾಗುತ್ತದೆ.
ಆದರೆ ಹೆಚ್ಚಿನ ಕಡೆಗಳಲ್ಲಿ ವಾಹನಗಳನ್ನು ಅತಿಯಾದ ವೇಗದಲ್ಲಿಯೇ ಓಡಿಸಲಾಗುತ್ತದೆ. ಇದು ಆಗಾಗ್ಗೆ ವಾಹನಗಳ ನಡುವೆ ಅಪಘಾತಕ್ಕೆ ಕಾರಣವಾಗುತ್ತಿರುವ ಜತೆಗೆ ರಸ್ತೆ ಬದಿ ನಡೆದುಕೊಂಡು ಹೋಗುವವರಿಗೆ, ರಸ್ತೆ ದಾಟುವವರಿಗೆ ಅಪಾಯವನ್ನು ತಂದೊಡ್ಡುತ್ತಿವೆ.
ಸಾಮಾನ್ಯವಾಗಿ ಸಂಚಾರ ನಿಯಮ ಉಲ್ಲಂ ಸಿದರೆ ಪೊಲೀಸರು ದಂಡ ಹಾಕುತ್ತಾರೆ. ಇದರಲ್ಲಿ ಅತಿ ವೇಗದ ಚಾಲನೆಯ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕರಣಗಳ ಸಂಖ್ಯೆ ತೀರ ಕಡಿಮೆ. ಉತ್ತಮ ರಸ್ತೆ, ಫುಟ್‌ಪಾತ್ ವ್ಯವಸ್ಥೆ ಇರುವ ಪ್ರದೇಶಗಳಲ್ಲಿ ಒಂದಷ್ಟು ವೇಗವಾಗಿ ಸಾಗಿದರೂ ಅಂತಹ ಅಪಾಯ ಉಂಟಾಗದು. ಆದರೆ ಕಿರಿದಾದ, ಇಕ್ಕಟ್ಟಿನ ರಸ್ತೆಯಲ್ಲಿಯೂ ಮನಬಂದಂತೆ ವಾಹನ ಓಡಿಸುವುದರಿಂದ ಅಪಾಯ ಖಂಡಿತ. ಅನೇಕ ಮಂದಿ ದ್ವಿಚಕ್ರ ವಾಹನ ಸವಾರರು ಥ್ರಿಲ್‌ಗಾಗಿ ಅತಿ ವೇಗದಿಂದ ವಾಹನ ಓಡಿಸುತ್ತಾರೆ. ಇಂತಹ ವಾಹನಗಳನ್ನು ಕಂಡರೂ ಅವುಗಳ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಾಗದ ಸಂಚಾರಿ ಪೊಲೀಸರು ಅಸಹಾಯಕರಾಗುತ್ತಿದ್ದಾರೆ. ದಂಡ ಅಥವಾ ಶಿಕ್ಷೆಯ ಭಯ ಇಲ್ಲದ ಪರಿಣಾಮವಾಗಿ ಉಲ್ಲಂಘನೆಯೂ ಹೆಚ್ಚುತ್ತಿದೆ. ಸುಗಮ-ಸುರಕ್ಷತೆಯ ಸಂಚಾರ ಸಾಧ್ಯವಾಗಬೇಕಾದರೆ ವಾಹನಗಳ ಅತಿಯಾದ ವೇಗಕ್ಕೆ ಕಡಿವಾಣ ಹಾಕುವುದು ಕೂಡ ಅತ್ಯಗತ್ಯ.