Advertisement

KASSIA; ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ ರೂಪಿಸಲಿ: ಕಾಸಿಯಾ

03:38 PM Sep 15, 2023 | Team Udayavani |

ಕಲಬುರಗಿ: ಸಣ್ಣ ಕೈಗಾರಿಕೆಗಳ ಉದ್ಯಮ‌ ಬೆಳವಣಿಗೆಗಾಗಿ ಸರಳೀಕರಣ ನಿಯಮಗಳನ್ನು ರೂಪಿಸುವುದರ ಜತೆಗೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ ರೂಪಿಸುವಂತೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಆಗ್ರಹಿಸಿದೆ.

Advertisement

ಸಣ್ಣ ಉದ್ದಿಮೆ ಪ್ರೋತ್ಸಾಹಕ್ಕೆ ಸರ್ಕಾರದ ಇನ್ನೂ ಹೆಚ್ಚಿನ ನಿಟ್ಟಿನಲ್ಲಿ ಪ್ರೋತ್ಸಾಹ ಅಗತ್ಯವಾಗಿದೆ.‌ ಪ್ರಮುಖವಾಗಿ ಸಣ್ಣ ಕೈಗಾರಿಕೆಗೆ ಸಚಿವರಿದ್ದಾರೆ. ಆದರೆ ಪ್ರತ್ಯೇಕ ಇಲಾಖೆ ಇಲ್ಲ. ಹೀಗಾಗಿ ಪ್ರಧಾನ ಕಾರ್ಯದರ್ಶಿ ಒಳಗೊಂಡ ಪ್ರತ್ಯೇಕ ಇಲಾಖೆ ಅಸ್ತಿತ್ವಕ್ಕೆ ಬಂದಲ್ಲಿ ಸಣ್ಣ ಉದ್ದಿಮೆಗಳ ಕೆಲಸ ಕಾರ್ಯಗಳು ಬೇಗ ಆಗುವುದರ ಜತೆಗೆ ಅನುದಾನವೂ ಹೆಚ್ಚಿನ ಪ್ರಮಾಣದಲ್ಲಿ ದೊರಕಲು ಸಾಧ್ಯವಾಗುತ್ತದೆ ಎಂದು ಕಾಸಿಯಾ ಅಧ್ಯಕ್ಷ ಸಿಎ ಶಶಿಧರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಗಳ ಸವತ್ತುಗಳು ಹಾಗೂ ಹಣಕಾಸಿನ ನೆರವು ಕುರಿತ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಕ ಭಾಗಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಪ್ರತ್ಯೇಕ ಕೈಗಾರಿಕಾ ನೀತಿಗೆ ಕಾಸಿಯಾ ಬದ್ದವಾಗಿದೆ ಎಂದು ಹೇಳಿದರು.

ತೊಗರಿ ಆಗ್ರೋ ಇಂಡಸ್ಟ್ರೀಸ್ ಆಗಲಿ: ಈ ಭಾಗದ ವಾಣಿಜ್ಯ ಬೆಳೆ ತೊಗರಿ ಕೃಷಿಯನ್ನು ಅಗ್ರೋ ಇಂಡಸ್ಟ್ರಿಯನ್ನಾಗಿ ಪರಿಗಣಿಸುವಂತೆ ಒತ್ತಾಯಿಸುತ್ತಾ ಬರಲಾಗಿದೆ. ‌ಆದರೂ ಕಾರ್ಯ ಸಾಕಾರಗೊಂಡಿಲ್ಲ. ವನ್ ಡಿಸ್ಟ್ರಿಕ್ಟ್ ವನ್ ಪ್ರೊಡಕ್ಟ್ ಅಡಿ ಸಣ್ಣ ಉದ್ಯಮಕ್ಕೆ ಪ್ರೋ ಸಿಗಲಿ‌ ಎಂದು ಶಶಿಧರ ಶೆಟ್ಟಿ ವಿವರಣೆ ನೀಡಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ವು 1949 ರಲ್ಲಿ ಸ್ಥಾಪಿತವಾಗಿದ್ದು, 74 ವರ್ಷಗಳ ಇತಿಹಾಸ ಹೊಂದಿದೆ. ಸಣ್ಣ ಕೈಗಾರಿಕೆಗಳ ಏಳಿಗೆ ಮತ್ತು ಶ್ರೇಯೋಭಿವೃದ್ಧಿಗೆ ಪ್ರಾರಂಭವಾದ ಕಾಸಿಯಾ ಸಂಸ್ಥೆಯು ರಾಜ್ಯ ಮತ್ತು ದೇಶದ ಸಣ್ಣ ಕೈಗಾರಿಕೆಗಳ ಹಿತಾಶಕ್ತಿಯನ್ನು ಪ್ರತಿನಿಧಿಸುವ ರಾಜ್ಯ ವ್ಯಾಪ್ತಿಯನ್ನು ಹೊಂದಿರುವ ಏಕೈಕ ಸಂಸ್ಥೆಯಾಗಿದೆ. ರಾಜ್ಯಾದ್ಯಂತ ಇರುವ ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಕೈಗೊಳ್ಳುವಲ್ಲಿ ಕಾಸಿಯಾವು ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಾ ಬಂದಿರುತ್ತದೆ. ಹಾಗೂ ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿ ಕುರಿತಂತೆ ಕೈಗಾರಿಕೋದ್ಯಮಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ತಿಳಿಸಿದರು.

Advertisement

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಂಎಸ್‌ಎಂಇ ವಲಯದ ಉತ್ತೇಜನಕ್ಕಾಗಿ ಘೋಷಿಸಿರುವ ವಿವಿಧ ಯೋಜನೆಗಳು, ಮತ್ತು ರಿಯಾಯಿತಿಗಳ ಕುರಿತು ಉಪಕ್ರಮಗಳನ್ನು ಪ್ರಾರಂಭಿಸುತ್ತಿವೆಯಾದರು, ಸರಿಯಾದ ಮಾರ್ಗದರ್ಶನ ಮತ್ತು ಅರಿವಿನ ಕೊರತೆಯಿಂದಾಗಿ ಈ ಸೌಲಭ್ಯಗಳು ಸದ್ಭಳಕೆಯಾಗಿರುವುದಿಲ್ಲ. ಯಾವುದೇ ಯೋಜನೆಗಳ ಉಪಕ್ರಮಗಳ ಯಶಸ್ವಿ ಅನುಷ್ಠಾನವು ಮಾಹಿತಿಯು ಪೂರ್ಣಪ್ರಮಾಣದಲ್ಲಿ ಫಲಾನುಭವಿಗಳನ್ನು ತಲುಪಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕದಾದ್ಯಂತ ಎಂಎಸ್‌ಎಂಇಗಳನ್ನು ಸಬಲೀಕರಣಗೊಳಿಸುವ ಮೂಲ ಉದ್ದೇಶದಿಂದ “ಅವಕಾಶಗಳನ್ನು ಸೃಷ್ಟಿಸುವುದು, ಅಂತರವನ್ನು ನಿವಾರಿಸುವುದು” ಎಂಬ ಶೀರ್ಶಿಕೆಯಡಿ ಆರ್ಥಿಕ ಸಾಕ್ಷರತೆ ಹಾಗೂ ಕ್ರೆಡಿಟ್ ಲಿಂಕ್, ಮಾರುಕಟ್ಟೆಯ ಮಾನ್ಯತೆ, ಡಿಜಿಟಲ್ ಉಪಸ್ಥಿತಿಯ ಮೂಲಕ ತಮ್ಮ ಗ್ರಾಹಕರ ನೆಲೆಯನ್ನು ವಿಸ್ತರಿಸುವ ಮತ್ತು ನಿರ್ದಿಷ್ಟವಾಗಿ ಒ.ಎನ್.ಡಿ.ಸಿ., ಟ್ರೆಡ್ಸ್ ಪ್ಲಾಟ್‌ಫಾರ್ಮ್ ಸದುಪಯೋಗಪಡಿಸಿಕೊಳ್ಳುವ ಕುರಿತಂತೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕರ್ನಾಟಕ ಸರ್ಕಾರ, ಮತ್ತು ಸಣ್ಣ ಕೈಗಾರಿಕೆಗಳ ಅಬಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾ, ಇವುಗಳ ಸಹಯೋಗದಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲಿ, ಎಂ.ಎಸ್.ಎಂ.ಇ ಗಳ ಅನುಕೂಲಕ್ಕಾಗಿ ವಿವಿಧ ಯೋಜನೆಗಳು, ಪ್ರೋತ್ಸಾಹ, ಸಬ್ಸಿಡಿಗಳ ಕುರಿತು ಅರಿವು ಮೂಡಿಸುವ ಸಲುವಾಗಿ “ಆರ್ಥಿಕ ಸಾಕ್ಷರತೆ ಕುರಿತು ಕಾರ್ಯಗಾರ” ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು

ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳು ಜಾಗೃತಿ ಅಂಗವಾಗಿ ಕಾಸಿಯಾ ಸಂಸ್ಥೆಯ ಸಭಾಂಗಣದಲ್ಲಿ 30ನೇ ಆಗಸ್ಟ್, 2023 ರಂದು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಉಪ ಪ್ರಧಾನ ವ್ಯವಸ್ಥಾಪಕ ನಿರ್ದೇಶಕರಾದ ಸುದತ್ತರವರು ಉದ್ಘಾಟನೆಯನ್ನು ನೆರವೇರಿಸಿದರು ಹಾಗೂ 250ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.

ತದನಂತರ ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳ ಕೈಗಾರಿಕೋದ್ಯಮಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಸೆ.‌ 4 ಮತ್ತು 6ರಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಗಳ ಬಹುತೇಕ ಕೈಗಾರಿಕೋದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.‌ ಕಾರ್ಯಕ್ರಮದ ಮುಂದಿನ ಭಾಗವಾಗಿ ಕಲಬುರಗಿ ಜಿಲ್ಲೆಯ ಕೈಗಾರಿಕೋದ್ಯಮಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಶನಿವಾರ ಸೆಪ್ಟಂಬರ್ 16ರಂದು ಬೆಳಗ್ಗೆ, 10.30 ಗಂಟೆಗೆ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಸಣ್ಣ ಕೈಗಾರಿಕೆಗಳ ಸಚಿವರು ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪೂರ ಉದ್ಘಾಟಿಸಲಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next