Advertisement

ವಿಜ್ಞಾನ-ತಂತ್ರಜ್ಞಾನ ಉತ್ತಮ ಕಾರ್ಯಕ್ಕೆ ಬಳಕೆಯಾಗಲಿ; ಡಾ|ಪಿ.ವಿ. ಕೃಷ್ಣ ಭಟ್‌

05:54 PM Mar 25, 2022 | Team Udayavani |

ದಾವಣಗೆರೆ: ವಿಜ್ಞಾನ ಮತ್ತು ತಂತ್ರಜ್ಞಾನ ಎರಡು ಅಲಗಿನ ಕತ್ತಿಯಂತೆ. ಅದು ಜಗತ್ತಿಗೆ ತಾರಕ ಆಗಬಲ್ಲದು. ದುಷ್ಟ ವ್ಯಕ್ತಿಗಳ ಕೈಗೆ ಸಿಕ್ಕಾಗ ಮಾರಕವೂ ಆಗಬಲ್ಲದು. ಇದು ಕಲ್ಯಾಣಕಾರಿಯಾಗಬೇಕಾದರೆ ಆ ರೀತಿಯ ಜೀವನಮೌಲ್ಯ ಅರಳಿಸುವುದು ಅತ್ಯಗತ್ಯ ಎಂದು ಒರಿಸ್ಸಾ ಕೇಂದ್ರೀಯ ವಿಶ್ವವಿದ್ಯಾನಿಲಯದ ಮಾಜಿ ಕುಲಾಧಿಪತಿ ಡಾ| ಪಿ.ವಿ. ಕೃಷ್ಣ ಭಟ್‌ ಹೇಳಿದರು.

Advertisement

ದಾವಣಗೆರೆ ವಿಶ್ವವಿದ್ಯಾನಿಲಯದ ಆವರಣದಲ್ಲಿ ಗುರುವಾರ ನಡೆದ ಒಂಭತ್ತನೇ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಜಗತ್ತಿನ ಹಲವು ರಾಷ್ಟ್ರಗಳು ವಿಜ್ಞಾನ, ತಂತ್ರಜ್ಞಾನದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದ್ದರೂ, ಆ ಪ್ರಗತಿ ಮನುಕುಲಕ್ಕೆ ಕಲ್ಯಾಣಕಾರಿಯಾಗುವ ಬದಲಿಗೆ ಹಾನಿಕಾರಕವಾಗುವ ಸಂಭವವನ್ನೇ ಸೂಚಿಸುತ್ತಿವೆ. ಕೋವಿಡ್‌ ಸೂಕ್ಷ್ಮಾಣುಗಳನ್ನು ಚೀನಾ ದೇಶದ ಪ್ರಯೋಗ ಶಾಲೆಯಲ್ಲಿ ನಿರ್ಮಾಣ ಮಾಡಲಾಯಿತೆಂಬ ಸಂಗತಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಇತ್ತೀಚಿನ ಯುಕ್ರೇನ್‌ ಮೇಲಿನ ರಷ್ಯಾ ದಾಳಿ ಮತ್ತು ಅದರಿಂದಾಗಿರುವ ಅಪಾರ ಸಾವು-ನೋವುಗಳು ಸಂಭವನೀಯ ದುರಂತದ ಮುನ್ಸೂಚನೆಯಾಗಿದೆ ಎಂದರು.

ದೃಷ್ಟಿಕೋನ ಬದಲಾಗಲಿ: ವಿಶ್ವ ಇಂದು ಎದುರಿಸುತ್ತಿರುವ ಮತ್ತೂಂದು ಸಮಸ್ಯೆ ಎಂದರೆ ಪರಿಸರ ಮಾಲಿನ್ಯದ ಸಮಸ್ಯೆ. ಮುಂದುವರೆದ ದೇಶಗಳೆಂದು ಕರೆಸಿಕೊಳ್ಳುವ ದೇಶಗಳೇ ಇಂದು ಈ ಸಮಸ್ಯೆಯ ಉತ್ಕಟಾವಸ್ಥೆ ತಲುಪಿದೆ. ಪರಿಸರ ಮಾಲಿನ್ಯ ಸಮಸ್ಯೆ ಕುರಿತು ಚರ್ಚಿಸಲು ಅಂತಾರಾಷ್ಟ್ರೀಯ ಸಮ್ಮೇಳನಗಳು ನಡೆಯುತ್ತಿವೆ. ಆದರೆ ಪರಿಹಾರ ಮಾತ್ರ ದೂರದ ಮಾತಾಗಿದೆ. ಇದಕ್ಕೆ ಪರಿಹಾರ ಸಿಗಬೇಕಾದರೆ ಜೀವನದ ಅವಶ್ಯಕತೆಗಳ ಕುರಿತ ನಮ್ಮ ದೃಷ್ಟಿಕೋನ ಬದಲಾಗಬೇಕು ಎಂದು ಡಾ| ಕೃಷ್ಣ ಭಟ್‌ ಪ್ರತಿಪಾದಿಸಿದರು.

ಪಾಶ್ಚಿಮಾತ್ಯರ ಚಿಂತನೆ ಪ್ರಕಾರ ಪ್ರಕೃತಿ ಶೋಷಣೆ ಮೂಲಕವೇ ನಾವು ಆರ್ಥಿಕ ಅಭಿವೃದ್ಧಿ ಸಾಧಿಸಲು ಸಾಧ್ಯ. ಆದರೆ ಭಾರತದ ದೃಷ್ಟಿ ಪ್ರಕೃತಿಯ ಶೋಷಣೆಯದಲ್ಲ. ಹಸುವಿನಿಂದ ಹಾಲು ಕರೆದು ನಾವು ನಮ್ಮನ್ನು ಪೋಷಣೆ ಮಾಡಿಕೊಳ್ಳುವಂತೆ ಪ್ರಕೃತಿಗೆ ಹಾನಿಯಾಗದಂತೆ ಪ್ರಕೃತಿಯಿಂದ ನಾವು ನಮಗೆ ಅಗತ್ಯವಾದ ಪೋಷಕ ದ್ರವ್ಯ ಪಡೆಯುವುದಾಗಿದೆ. ಪ್ರಕೃತಿ ವಿನಾಶದ ದುರಂತದಿಂದ ಜಗತ್ತು ತನ್ನನ್ನು ರಕ್ಷಿಸಿಕೊಳ್ಳಬೇಕಾದರೆ ಪ್ರಕೃತಿ ಕುರಿತ ಭಾರತೀಯ ದೃಷ್ಟಿಕೋನ ಅಳವಡಿಸಿಕೊಳ್ಳುವುದು ಅಗತ್ಯ ಎಂದರು.

ದೇಶದಲ್ಲಿ ಸುಮಾರು 800ಕ್ಕೂ ಹೆಚ್ಚು ವಿವಿಗಳಿವೆ ಎಂದು ಹೇಳಿಕೊಂಡರೂ ವಿಶ್ವ ಸ್ತರದಲ್ಲಿ ಎಣಿಕೆಯಾಗಬಲ್ಲ ವಿವಿಗಳು ಬೆರಳೆಣಿಕೆಯಷ್ಟೂ ಇಲ್ಲ . ಜತೆಗೆ ವಿವಿಗಳಿಂದ ಹೊರ ಬರುತ್ತಿರುವ ವಿದ್ಯಾರ್ಥಿಗಳು ರಾಷ್ಟ್ರ ಕಟ್ಟುವ, ಭಾರತವನ್ನು ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗಿಸುವಲ್ಲಿ ಮಾಡುವ ಕನಸು ಹೊತ್ತು ಸಹ ಬರುತ್ತಿಲ್ಲ ಎಂಬುದು ವಿಷಾದದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಧರ್ಮದ ಅರ್ಥ ತಿಳಿಯದ್ದರಿಂದ ಅನರ್ಥ
ಭಾರತೀಯ ಪರಂಪರೆಯಲ್ಲಿ ಜೀವನಮೌಲ್ಯಗಳ ಸಮುತ್ಛಯವನ್ನೇ “ಧರ್ಮ’ ಎಂದು ಕರೆಯಲಾಗಿದೆ. ಧರ್ಮ ಶಬ್ದದ ಅರ್ಥ ವ್ಯಾಪ್ತಿಯನ್ನು ಸರಿಯಾಗಿ ತಿಳಿಯದೆ ಅದನ್ನು “ರಿಲೀಜನ್‌’ ಶಬ್ದಕ್ಕೆ ಪರ್ಯಾಯವಾಗಿ ಪರಿಗಣಿಸಿರುವುದು ಬಹಳಷ್ಟು ಅನರ್ಥಗಳಿಗೆ ಕಾರಣವಾಗಿದೆ ಎಂದು ಒರಿಸ್ಸಾ ಕೇಂದ್ರೀಯ ವಿಶ್ವವಿದ್ಯಾನಿಲಯದ ಮಾಜಿ ಕುಲಾಧಿಪತಿ ಡಾ| ಪಿ.ವಿ. ಕೃಷ್ಣ ಭಟ್‌ಅಭಿಪ್ರಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next