ಟಿಪ್ಪರ್, ಲಾರಿಗಳಲ್ಲಿ ದೂರದೂರುಗಳಿಗೆ ಮರಳು ಸಾಗಿಸಲಾಗುತ್ತದೆ. ಕಾನೂನು ಪ್ರಕಾರ ವಾಹನಗಳಲ್ಲಿ ಮರಳು ಸಾಗಿಸುವಾಗ ಮೇಲಿನಿಂದ ಅದನ್ನು ಮುಚ್ಚಿ ಮರಳು ಚೆಲ್ಲಿ ಹೋಗದಂತೆ ನೋಡಿಕೊಳ್ಳಬೇಕಾದುದು ಸಂಬಂಧಪಟ್ಟವರ ಕರ್ತವ್ಯ.
ಆದರೆ, ನಗರದಲ್ಲಿ ಮರಳು ಕೊಂಡೊಯ್ಯುವ ಕೆಲವು ಲಾರಿ, ಟಿಪ್ಪರ್‌ಗಳಲ್ಲಿ ಮೇಲ್ಭಾಗವನ್ನು ಮುಚ್ಚದೇ, ತೆರೆದ ರೀತಿ ಯಲ್ಲಿ ಸಾಗಿಸಲಾಗುತ್ತದೆ. ಇದರಿಂದ ವಾಹನಗಳು ಹೋದ ರಸ್ತೆಯುದ್ದಕ್ಕೂ ಮರಳು ಚೆಲ್ಲಲ್ಪಟ್ಟು ದ್ವಿಚಕ್ರ ವಾಹನ ಸವಾರರು ಹಾಗೂ ಕಾರು ಚಾಲಕರುಗಳಿಗೆ ಸಮಸ್ಯೆ ಉಂಟಾಗುತ್ತದೆ.
ವಿಶೇಷವಾಗಿ ದ್ವಿಚಕ್ರ ವಾಹನಗಳು ಈ ಮರಳಿನ ಮೇಲೆ ಸಾಗಿ ವಾಹನದ ವಾಹನ ಸ್ಕಿಡ್ ಆಗಿ ಬೀಳುವ ಅಪಾಯ ಹೆಚ್ಚಾಗಿ ರುತ್ತದೆ. ಈಗಾಗಲೇ ಹಲವೆಡೆ ಇಂಥ ಪ್ರಕರಣಗಳು ನಡೆದಿವೆ.
ಸಾಮಾನ್ಯ ರಸ್ತೆಗಳಲ್ಲಿ ಮಾತ್ರವಲ್ಲದೆ, ಹೆದ್ದಾರಿಗಳಲ್ಲಿಯೂ ಮರಳು ಸಾಗಿಸುವ ವಾಹನಗಳು ತೆರೆದ ಸ್ಥಿತಿಯಲ್ಲಿ ಮರಳನ್ನು ಸಾಗಿಸುತ್ತಿರುತ್ತವೆ. ಹೀಗಾಗಿ ಸಂಬಂಧಪಟ್ಟವರು ಈ ಬಗ್ಗೆ ತತ್‌ಕ್ಷಣ ಗಮನ ಹರಿಸಿ ತೆರೆದ ಸ್ಥಿತಿಯಲ್ಲಿ ಮರಳು ಸಾಗಿಸುವ ವಾಹನಗಳ ಮಾಲಕರಿಗೆ, ಚಾಲಕರಿಗೆ ಎಚ್ಚರಿಕೆ ನೀಡಬೇಕಿದೆ.
– ಧನ್ಯಾ ಬಾಳೆಕಜೆ