Advertisement
ಕುಡುಪು ಪಾಲ್ದನೆಯಲ್ಲಿ ಲಿಯೋನೆಲ್ ಎವ್‌ಲಿನ್ ಸೆರಾವೋ ಅವರು ಎರಡು ವಾರಗಳ ಹಿಂದೆ ತಮ್ಮ ಮನೆಯಲ್ಲಿ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಮನೆಯ ಛಾವಣಿ ನೀರನ್ನು ಡ್ರಮ್‌ಗೆ ಬಿಟ್ಟು ಅಲ್ಲಿಂದ ಫಿಲ್ಟರಿಂಗ್ ಮಾಡಿ ಶುದ್ಧ ನೀರನ್ನು ಬಾವಿಗೆ ಬೀಳುವಂತೆ ನೋಡಿಕೊಂಡಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಪಾಲ್ದನೆಯಲ್ಲಿ ವಾಸ ಮಾಡುತ್ತಿರುವ ಅವರು, ಮುಂದೆ ನೀರಿನ ಅಭಾವ ಉಂಟಾಗದಂತೆ ತಡೆಯಲು ಈ ಸರಳ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.
“ಸುದಿನ’ದಲ್ಲಿ ಮಳೆ ಕೊಯ್ಲು ವ್ಯವಸ್ಥೆ ಬಗ್ಗೆ ಬಂದ ಮಾಹಿತಿಯೂ ಸಹಕಾರಿಯಾಯಿತು’ ಎನ್ನುತ್ತಾರೆ ಎವ್‌ಲಿನ್. ಮಳೆಕೊಯ್ಲು ಅಳವಡಿಸಲು 17 ಕರೆ
ಡಾ| ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನವು ನಾಲ್ಕು ವರ್ಷಗಳಿಂದ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿಕೊಡುವಲ್ಲಿ ಸಕ್ರಿಯವಾಗಿದ್ದು, ಈಗ ಹಲವರು ಪ್ರತಿಷ್ಠಾನದ ಸದಸ್ಯರನ್ನು ಸಂಪರ್ಕಿಸಿ ತಮ್ಮ ಮನೆ, ಅಪಾರ್ಟ್‌ಮೆಂಟ್‌ಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಡುವಂತೆ ವಿನಂತಿಸುತ್ತಿದ್ದಾರೆ. ವಾರದಿಂದೀಚೆಗೆ ಸುಮಾರು 17ಕ್ಕೂ ಹೆಚ್ಚು ಮಂದಿ ತಮ್ಮನ್ನು ಸಂಪರ್ಕಿಸಿರುವುದಾಗಿ ಪ್ರತಿಷ್ಠಾನದ ಸದಸ್ಯರು ಹೇಳುತ್ತಾರೆ. ಮಳೆಕೊಯ್ಲು ವ್ಯವಸ್ಥೆ ಅಳವಡಿಸಬೇಕಾದವರಿಗೆ ಉಚಿತವಾಗಿಯೇ ಮಾಡಿಕೊಡುತ್ತೇವೆ. ಆದರೆ, ಅದಕ್ಕೆ ಬೇಕಾದ ಸಲಕರಣೆಗಳನ್ನು ಅವರೇ ಹೊಂದಿಸಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಪ್ರತಿಷ್ಠಾನದ ಸದಸ್ಯರು. ಪ್ರತಿಷ್ಠಾನದಲ್ಲಿ ವಿವಿಧ ಉದ್ಯೋಗದಲ್ಲಿರುವ ಸದಸ್ಯರಿದ್ದು, ತಮ್ಮ ಉದ್ಯೋಗದ ನಡುವೆಯೂ ಬಿಡುವಿನ ವೇಳೆಯಲ್ಲಿ ಈ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ.
Related Articles
ಕೋಟೆಕಾರ್‌ನ ಸತ್ಯನಾರಾಯಣ ನಗರ ನಿವಾಸಿ ಎಂ.ಎಸ್. ವೆಂಕಟೇಶ್ ಗಟ್ಟಿ ಅವರು ತಮ್ಮ ಮನೆಯಲ್ಲಿ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ವೆಂಕಟೇಶ್ ಅವರು ಸರಳ ಮಾದರಿಯಲ್ಲೇ ಮಳೆಕೊಯ್ಲು ಅಳವಡಿಕೆ ಮಾಡಿದ್ದು, ಮನೆಯ ಛಾವಣಿ ನೀರನ್ನು ಪೈಪ್ ಮುಖಾಂತರ ಬಾವಿಯ ಸನಿಹದಲ್ಲಿ ಮೊದಲೇ ಇದ್ದ 6 ಅಡಿ ಅಗಲ, 3 ಅಡಿ ಉದ್ದದ ಸಸ್ಯಗುಂಡಿಗಳಿಗೆ ಬಿಟ್ಟಿದ್ದಾರೆ. ಸಸ್ಯ ಗುಂಡಿಗಳಿಗೆ ನೀರಿಂಗಿಸಿದರೆ ಸಸ್ಯದ ಬೇರುಗಳು ನೀರನ್ನು ಇಂಗಿಸಲು ಸಹಕರಿಸುತ್ತವೆ ಎಂದು ಮಳೆಕೊಯ್ಲು ತಜ್ಞ ಶ್ರೀ ಪಡ್ರೆಯವರು ಸಲಹೆ ನೀಡಿದ ಹಿನ್ನೆಲೆಯಲ್ಲಿ ವೆಂಕಟೇಶ್ ಅವರೂ ಇದೇ ಮಾದರಿಯಲ್ಲಿ ಮಳೆಕೊಯ್ಲು ಮಾಡಿದ್ದಾರೆ.
“ಉದಯವಾಣಿ’ ಮನೆಮನೆಗೆ ಮಳೆಕೊಯ್ಲು ಅಭಿಯಾನದಲ್ಲಿ ಭಾಗವಹಿಸಿದ್ದೆ. ಅಲ್ಲಿ ಸಿಕ್ಕಿದ ಮಾಹಿತಿಯನುಸಾರ ಮಳೆಕೊಯ್ಲು ಅಳವಡಿಸಿದ್ದೇನೆ. ನನ್ನ ಮನೆಯಲ್ಲಿ ಅಳವಡಿಸಿಕೊಳ್ಳಲು ಈ ಅಭಿಯಾನ ಪ್ರೇರಣೆಯಾಯಿತು’ ಎಂದು ಹೇಳುತ್ತಾರೆ ವೆಂಕಟೇಶ್.
Advertisement
ನೀವೂ ಅಳವಡಿಸಿ, ವಾಟ್ಸಪ್ ಮಾಡಿಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ. ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೊ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
9900567000