Advertisement

ಮಾನವ ಬಂಡವಾಳ….ಜನಸಂಖ್ಯೆ ಅಭಿವೃದ್ಧಿಗೆ ಪೂರಕವಾಗಲಿ

03:03 PM Jul 13, 2021 | Team Udayavani |

ಜನಸಂಖ್ಯೆಯು ಭಾರತದ ಅಭಿವೃದ್ಧಿಗೆ ಪೂರಕವೇ? ಮಾರಕವೇ?ಎಂಬ ಜಿಜ್ಞಾಸೆ ಇಂದು ನಿನ್ನೆಯದ್ದಲ್ಲ. ಇದು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಜನಸಂಖ್ಯೆಯನ್ನು ಒಂದು ದೇಶದ “ಮಾನವ ಬಂಡವಾಳ’ ಎಂದು ವ್ಯಾಖ್ಯಾನಿಸಲಾಗುತ್ತದೆ. 4 ಉತ್ಪಾದನ ಅಂಗಗಳಲ್ಲಿ ಬಂಡವಾಳವೂ ಒಂದು. ಈ ಜನಸಂಖ್ಯೆಯನ್ನು ಮಾನವ ಸಂಪನ್ಮೂಲಗಳಾಗಿ ಶಕ್ತಗೊಳಿಸಿದಾಗಲೇ ಅದು “ಮಾನವ ಬಂಡವಾಳ’ವಾಗಲು ಸಾಧ್ಯ.

Advertisement

ಭಾರತದಂತಹ ರಾಷ್ಟ್ರಕ್ಕೆ ಜನಸಂಖ್ಯೆಯು ಪೂರಕವಾದ ಅಂಶವಾಗಬೇಕಾದರೆ ಜನತೆಗೆ ಕೌಶಲ ಮತ್ತು ಕುಶಲತೆಯ ಮಾಹಿತಿ ಲಭಿಸಬೇಕು. ಆಗ ಅವರಿಗೆ ದೇಶಕ್ಕಾಗಿ ಸೇವೆಗೈಯುವ ಅವಕಾಶ ಹೆಚ್ಚಾಗುತ್ತದೆ. ಚೀನ ತನ್ನ ಜನಸಂಖ್ಯೆಯನ್ನು “ಮಾನವ ಬಂಡವಾಳ’, “ಮಾನವ ಸಂಪನ್ಮೂಲ’ವಾಗಿ ಪರಿವರ್ತಿಸಿ ದೇಶದ ಔನ್ನತ್ಯಕ್ಕೆ ಕಾರಣವಾಗುವಂತೆ ಮಾಡಿರುವ ಕಾರ್ಯಗಳನ್ನು ಗಮನಿಸಬೇಕು. “ಭಾರತವು ಅನೇಕ ಜ್ಞಾನ, ಕೌಶಲಗಳ ನಾಡು’. ಈ ನಾಡಿನಲ್ಲಿಯೇ ವಿಜ್ಞಾನದ ಪ್ರತಿಯೊಂದು ಮೊದಲ ಹೆಜ್ಜೆಯು ಕಾಣಿಸಿದರೂ, ವಿಶ್ವವು ಅದನ್ನು ಗುರುತಿಸುವಲ್ಲಿ ವಿಫ‌ಲವಾಗಿತ್ತು. ಆದರೂ ಭಾರತವು ಯಾವತ್ತೂ ಸಾಧನೆಯನ್ನು ಮರೆತಿಲ್ಲ.

ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗಲು ಅನೇಕ ಕಾರಣಗಳಿವೆ. ಬಡತನ, ಆರ್ಥಿಕ ಅಸಮಾನತೆ, ನಿರುದ್ಯೋಗ, ಕಡ್ಡಾಯ ಸಾರ್ವತ್ರಿಕ ಮದುವೆ, ಬಹುಬೇಗ ಮದುವೆ, ಮೂಢನಂಬಿಕೆಗಳು, ಬಹುಪತ್ನಿತ್ವ, ಲೈಂಗಿಕ ಶಿಕ್ಷಣದ ಕೊರತೆ, ಅಸಮರ್ಪಕ ಕುಟುಂಬ ಕಲ್ಯಾಣ ಯೋಜನೆ, ಧಾರ್ಮಿಕ ಸೋಗಲಾಡಿತನ, ರಾಜಕೀಯ ಕಾರಣಗಳು ಹೀಗೆ ಈ ಎಲ್ಲ ಅಂಶಗಳಿಂದಾಗಿ ಭಾರತದಲ್ಲಿ  ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ರಾಷ್ಟ್ರದ ಬಗೆಗಿನ ಚಿಂತನೆ ಮೂಡಲಿ:

ಹೆಚ್ಚುತ್ತಿರುವ ಜನಸಂಖ್ಯೆಯಲ್ಲಿ ರಾಷ್ಟ್ರದ ಬಗೆಗಿನ ಚಿಂತನೆಗಳು ಕಂಡುಬಂದರೆ ಅದು ಅಭಿವೃದ್ಧಿಗೆ ಪೂರಕವಾಗುತ್ತದೆ. ಯಾಕೆಂದರೆ ಪ್ರತಿಯೊಂದು ರಾಷ್ಟ್ರವು ಬಲವಾಗಿ ನಿಂತಿರುವುದು ಕಟ್ಟಡಗಳಿಂದಲ್ಲ,  ಕೈಗಾರಿಕೆಗಳಿಂದಲ್ಲ. ಬದಲಾಗಿ ಅಲ್ಲಿನ ಜನಸಂಖ್ಯೆಯ ಬಲದಿಂದ. ಜನತೆ ಯಾವಾಗ ರಾಷ್ಟ್ರದ ಬಗೆಗಿನ ಚಿಂತನೆಯಿಂದ ದೂರು ಹೋಗುತ್ತದೆಯೋ ಆಗ ಆ ಜನಸಂಖ್ಯೆಯೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಕ್ಕೆ ಮಾರಕವಾಗಬಹುದು. ರಾಷ್ಟ್ರದ ಬಗೆಗಿನ ಚಿಂತನೆಗಳು ನಮ್ಮ ಹೃದಯದಲ್ಲಿ ಹಾಸು ಹೊಕ್ಕಾಗಲೇ ಮಾತೃ ದೇಶದ ಒಳಿತಾಗಿ ಶ್ರಮಿಸುವ ಒಳಗಣ್ಣು, ಹೃದಯ, ಮನಸ್ಸು ತೆರೆಯುತ್ತದೆ.

Advertisement

ಬಡತನ ಆವರಿಸಲ್ಪಟ್ಟ ಒಂದು ಕುಟುಂಬವು ಅನೇಕ ಮಕ್ಕಳಿಗೆ ಜನ್ಮ ನೀಡಲು ಹೊರಟಾಗ ಅಲ್ಲಿ ಪೌಷ್ಟಿಕಾಂಶ ಕೊರತೆ, ಅನಕ್ಷರತೆ, ಮೂಲಭೂತ ಸೌಕರ್ಯಗಳ ಕೊರತೆ ಕಾಣಿಸಿಕೊಳ್ಳಲಿದೆ. ಇದು ಶಿಶು ಮರಣದ ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ವಿವೇಕವಾಣಿ:

ವಿವೇಕಾನಂದರ ಮಾತು ಇಲ್ಲಿ  ಜ್ಞಾಪಕಕ್ಕೆ ಬರುತ್ತದೆ. “ನನಗೆ ಬೇಕಾಗಿರುವುದು ಕಬ್ಬಿಣದಂತಹ ಮಾಂಸ ಖಂಡಗಳು, ಉಕ್ಕಿನಂತಹ ನರಗಳು, ಅವುಗಳ ಅಂತರಾಳದಲ್ಲಿ  ಸಿಡಿಲಿನಲ್ಲಿರುವಂತಹ ಸಾಮಗ್ರಿಗಳಿಂದ ಮಾಡಿದ ಮಾನಸಿಕ ಶಕ್ತಿ ನೆಲೆಸಿರಬೇಕು’-ಎಂದು ವಿವೇಕಾನಂದರು ಯುವ ಜನತೆಯನ್ನು ಉದ್ದೇಶಿಸಿ ಹೇಳಿದ್ದರು. ಇಂತಹ ಜನತೆಯಿಂದ ಮಾತ್ರ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗಲು ಸಾಧ್ಯ. ಹೀಗಾಗಿ ಮಕ್ಕಳಲ್ಲಿ ಎಳವೆಯಲ್ಲೇ ರಾಷ್ಟ್ರದ ಬಗೆಗಿನ ಚಿಂತನೆ ಮೂಡಿಸಬೇಕಾಗಿದೆ.

ಭಾರತವನ್ನು ಇತರ ರಾಷ್ಟ್ರಗಳು ಗೌರವಿಸಲು ಇಲ್ಲಿನ ವೈವಿಧ್ಯದ ಜತೆಗೆ ಯುವಶಕ್ತಿ, ಜ್ಞಾನ ಕೌಶಲವೂ ಕಾರಣ. ಭಾರತದ ಜನಸಂಖ್ಯೆಯಲ್ಲಿ ಬಹುಪಾಲು ಯುವಜನತೆ ಇದ್ದು, ಅವರೊಳಗೆ ರಾಷ್ಟ್ರದ ಉನ್ನತಿಯ ಮಂತ್ರ ಹಾಗೂ ಧ್ಯೇಯ ಮೊಳಕೆಯೊಡೆಯಬೇಕು. ಆ ಮೂಲಕ ನವಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆಯುತ್ತಾ, ಜನಸಂಖ್ಯೆಯನ್ನು ನಿಯಂತ್ರಿಸುತ್ತಾ, ಮಾನವ ಸಂಪನ್ಮೂಲಗಳ ಸದ್ಬಳಕೆಯತ್ತ ಗಮನ ಹರಿಸಿದರೆ ಅಭಿವೃದ್ಧಿಯ ಕನಸು ನನಸಾಗಲು ಸಾಧ್ಯ.

ಜು. 11: ವಿಶ್ವ ಜನಸಂಖ್ಯಾ ದಿನ : ಪ್ರತೀ ವರ್ಷ ಜು. 11 ರಂದು ವಿಶ್ವ ಜನಸಂಖ್ಯಾ ದಿನ ಆಚರಿಸಲಾಗುತ್ತದೆ. ಜಾಗತಿಕವಾಗಿ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಉಂಟಾಗುತ್ತಿರುವ ಪರಿಣಾಮಗಳ ಕುರಿತು ಚರ್ಚಿಸುವ ಸಲುವಾಗಿ ವಿಶ್ವಸಂಸ್ಥೆ ಈ ದಿನವನ್ನು ಆಚರಣೆಗೆ ತಂದಿತು. 1987ರ ಜು. 11ರಂದು ವಿಶ್ವದ ಜನಸಂಖ್ಯೆ 500 ಕೋಟಿ ದಾಟಿತ್ತು. ಇದರ ನೆನಪಿಗಾಗಿ ವಿಶ್ವ ಜನಸಂಖ್ಯೆ ದಿನ ಆಚರಣೆಗೆ ಮುನ್ನುಡಿ ಬರೆಯಲಾಯಿತು. ಲಿಂಗ ಸಮಾನತೆ, ಬಡತನ, ಅನಕ್ಷರತೆ, ಮೂಲಭೂತ ಹಕ್ಕು ಮುಂತಾದ ವಿಷಯಗಳ ಕುರಿತು ಚರ್ಚಿಸಲು ಈ ದಿನವನ್ನು ಮೀಸಲಿಡಲಾಗುತ್ತದೆ.

 

ಗಿರೀಶ್‌ ಎಂ.

ಕೇಂದ್ರೀಯ ವಿವಿ, ಪೆರಿಯ, ಕಾಸರಗೋಡು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next