ಮಂಡ್ಯ: ಮೈಷುಗರ್ ಕಾರ್ಖಾನೆ ರೋಗಗ್ರಸ್ಥವಾಗಿ ಬದಲಾಗಲು ರಾಜಕಾರಣಿಗಳ ಹಸ್ತಕ್ಷೇಪ, ಒಳರಾಜಕೀಯ ಪ್ರಮುಖ ಕಾರಣವಾಗಿದೆ. ಕಾರ್ಖಾನೆ ಅಧಿಕಾರಿಗಳು, ಕಾರ್ಮಿಕರ ಮೇಲಿನ ಹಿಡಿತ ಸಾಧಿ ಸುವ ಪ್ರಯತ್ನಗಳಿಂದ ಅಧೋಗತಿಗೆ ಸಾಗಿದೆ.
ಕಾರ್ಖಾನೆಯಲ್ಲಿ ಕಾರ್ಮಿಕರು ಹಾಗೂ ಅಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯ, ರಾಜಕೀಯ ಬೆಂಬಲಿಗರ ಒತ್ತಡಗಳಿಂದ ಕಾರ್ಖಾನೆಯಲ್ಲಿ ಒಗ್ಗಟ್ಟಿನ ಮಂತ್ರ ಇಲ್ಲದಂತಾಗಿದೆ.
ಕಾರ್ಮಿಕರ ನಡುವೆ ಭಿನ್ನಾಭಿಪ್ರಾಯ: ರಾಜಕೀಯ ಪಕ್ಷಗಳ ಬೆಂಬಲಿಗರ ಒಳರಾಜಕೀಯದಿಂದ ಕಾರ್ಮಿಕರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿತ್ತು. ಇದರಿಂದ ಕಾರ್ಮಿಕರ ನಡುವೆ ವೈಮನಸ್ಸು ಉಂಟಾಗಿ ಕೆಲಸಗಳು ಸಾಗುತ್ತಿರಲಿಲ್ಲ. ಅಲ್ಲದೆ, ಜಾತಿಯೂ ಕಾರ್ಮಿಕರ ನಡುವೆ ಮೇಳೈಸಿದ್ದರಿಂದ ಕಾರ್ಮಿಕ ಮನಸ್ಸುಗಳು ಒಂದುಗೂಡಲು ಸಾಧ್ಯವಾಗಲೇ ಇಲ್ಲ. ಇದು ಸಹ ಕಾರ್ಖಾನೆ ಸ್ಥಗಿತಗೊಳ್ಳಲು ಕಾರಣವಾಯಿತು ಎನ್ನುತ್ತಾರೆ ನೌಕರರೊಬ್ಬರು.
ಅಧ್ಯಕ್ಷ ಸ್ಥಾನ ಹುದ್ದೆ ಅನಗತ್ಯ: ಹಿಂದೆ ದಕ್ಷ, ಪ್ರಾಮಾ ಣಿಕ ಅಧಿಕಾರಿಗಳಿಂದ ಕಾರ್ಖಾನೆ ಉತ್ತಮವಾಗಿ ನಡೆಯುತ್ತಿತ್ತು. ನಂತರ ಬಂದ ಆಡಳಿತ ಮಂಡಳಿ ರಚಿ ಸುವ ಪದ್ಧತಿ ಮೂಲಕ ರಾಜಕೀಯ ಕಾರ್ಖಾನೆಯನ್ನು ಹೊಕ್ಕಿತು. ಇದರಿಂದ ರಾಜಕೀಯ ಬೆಂಬಲಿಗರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವ ಸಂಪ್ರದಾಯ ಪ್ರಾರಂಭಿಸಿದ ನಂತರ ಕಾರ್ಖಾನೆ ಯಲ್ಲಿ ರಾಜಕೀಯ ಆರಂಭಗೊಂಡಿತು. ಇದರಿಂದ ಅಧಿಕಾರಿಗಳು ಕಾರ್ಮಿಕರ, ಸಿಬ್ಬಂದಿ ಮೇಲಿನ ಹಿಡಿತ ಕಳೆದುಕೊಳ್ಳುವಂತಾಯಿತು. ಯಾವುದೇ ವಿಚಾರದಲ್ಲೂ ಅಧಿಕಾರಿಗಳ ಮೇಲೆಯೇ ರಾಜಕೀಯ ಒತ್ತಡಗಳು ಹೆಚ್ಚಾಗುತ್ತಿದ್ದವು. ಆದ್ದರಿಂದ ಅಧ್ಯಕ್ಷ ಹುದ್ದೆಯನ್ನು ಕಿತ್ತು ಹಾಕಿ ದಕ್ಷ, ಪ್ರಾಮಾಣಿಕ ಅಧಿಕಾರಿಗಳ ನಿಯೋಜಿಸುವ ಮೂಲಕ ಕಾರ್ಖಾನೆ ಆರಂಭಿಸಬೇಕು ಎಂಬುದು ಹೋರಾಟಗಾರರ ಆಗ್ರಹವಾಗಿದೆ.
ವರ್ಗಾವಣೆಯಲ್ಲೂ ಹಸ್ತಾಕ್ಷೇಪ: ಕಾರ್ಖಾನೆಯಲ್ಲಿ ಅಧಿಕಾರಿಗಳ ನೇಮಕ ಮಾಡಿಕೊಳ್ಳಲು ಹಾಗೂ ವರ್ಗಾವಣೆ ಮಾಡಲು ರಾಜಕೀಯವೇ ಮೇಲಾಟವಾಯಿತು. ರಾಜಕೀಯ ನಾಯಕರು ತಮಗೆ ಬೇಕಾದ ಅಧಿಕಾರಿವರ್ಗ ನಿಯೋಜಿಸಿಕೊಳ್ಳಲು ಒತ್ತಡ, ಪ್ರಭಾವ, ಹಸ್ತಾಕ್ಷೇಪಗಳು ಪ್ರಾರಂಭಗೊಂಡವು. ಇದರಿಂದ ದಕ್ಷ, ಪ್ರಾಮಾಣಿಕರಿಗೆ ಕಾರ್ಖಾನೆಯಲ್ಲಿ ಬೆಲೆ ಇಲ್ಲದಂತಾಯಿತು. ನೌಕರರ ನೇಮಕಾತಿಯಲ್ಲೂ ಪ್ರಭಾವ: ಕಾರ್ಖಾನೆ ಅಧ್ಯಕ್ಷರಾದವರು ಅವರ ಅವಧಿಯಲ್ಲಿ ತಮಗೆ ಬೇಕಾದ ಸಿಬ್ಬಂದಿ ನೇಮಕ ಮಾಡಿಕೊಳ್ಳುತ್ತಿದ್ದರು. ಅಲ್ಲದೆ, ರಾಜಕೀಯ ಬೆಂಬಲಿಗರಿಗೆ ಹೆಚ್ಚು ಮಣೆ ಹಾಕಲಾಗುತ್ತಿತ್ತು. ಇದರಿಂದ ಕಾರ್ಖಾನೆಯಲ್ಲಿ ಸಮರ್ಪಕ, ಪಾರದರ್ಶಕ ಆಡಳಿತ ನೀಡಲು ಸಾಧ್ಯವಾಗದೆ ವೈಫಲ್ಯಕ್ಕೆ ಕಾರಣವಾಯಿತು.
ಗುಂಪುಗಾರಿಕೆ: ನೌಕರರು, ಅಧಿಕಾರಿಗಳ ವರ್ಗದ ನಡುವಿನ ಗುಂಪುಗಾರಿಕೆಯಿಂದ ಕಾರ್ಖಾನೆಯಲ್ಲಿ ಯಾವುದೇ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿರಲಿಲ್ಲ. ಇದರಿಂದ ಸಕ್ಕರೆ ಉತ್ಪಾದನೆ ಸೇರಿ ವಿವಿಧ ಉಪ ಉತ್ಪನ್ನಗಳ ಕುಸಿತಕ್ಕೂ ಕಾರಣವಾಯಿತು. ಉತ್ಪಾದನೆಯಲ್ಲಿ ಏರುಪೇರು ಮಾಡುವುದು. ಯಂತ್ರಗಳ ಸಮರ್ಪಕ ನಿರ್ವಹಣೆಗೂ ತೊಂದರೆ ಯಾಯಿತು. ಸಿಬ್ಬಂದಿ ಮೇಲೆ ಕ್ರಮಕೈಗೊಳ್ಳಲು ರಾಜಕೀಯ ಒತ್ತಡದಿಂದ ಸಾಧ್ಯವಾಗುತ್ತಿರಲಿಲ್ಲ. ಇದರಿಂದ ದಿನದಿಂದ ದಿನಕ್ಕೆ ರೋಗಗ್ರಸ್ಥ ಕಾರ್ಖಾನೆಯಾಗಿ ಬದಲಾಗುತ್ತ ಸಾಗಿತು ಎಂದು ನಿವೃತ್ತ ನೌಕರರು ಹೇಳುತ್ತಾರೆ.
ಅಧಿಕಾರಿಗಳಿಗೆ ಅಧಿಕಾರ ನೀಡಲಿ : ಪ್ರಸ್ತುತ ರಾಜ್ಯ ಸರ್ಕಾರ ಕಾರ್ಖಾನೆ ಆರಂಭಿಸಲು ಮುಂದಾಗಿದೆ. ಆದರೆ, ಸಂರ್ಪೂ ರಾಜಕೀಯ ಹಸ್ತಕ್ಷೇಪ ರಹಿತವಾಗಿ ಪಾರದರ್ಶಕ ಆಡಳಿತ ನೀಡಬೇಕಾದರೆ ಯಾವುದೇ ಆಡಳಿತ ಮಂಡಳಿಗೆ ಅಧ್ಯಕ್ಷರ ನೇಮಕ ಮಾಡದೆ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಿ ಕಾರ್ಖಾನೆ ಆರಂಭಿಸಿದರೆ ಕಾರ್ಖಾನೆಯು ಉಳಿಯಲಿದೆ. ಇದರಿಂದ ಕಾರ್ಖಾನೆಯ ವ್ಯಾಪ್ತಿಯ ರೈತರಿಗೆ ಅನುಕೂಲ ಒದಗಿಸಿದಂತಾಗಲಿದೆ ಎಂಬುದು ಹೋರಾಟಗಾರರ ಆಶಯವಾಗಿದೆ
–ಎಚ್.ಶಿವರಾಜು