Advertisement
ಇಂದ್ರಾಳಿ: ಸುಮಾರು ಮೂವತ್ತು ದಿನಗಳ “ಮರೆತೇ ಹೋದ ಇಂದ್ರಾಣಿ ಕಥೆ’ ಅಧ್ಯಯನಪೂರ್ಣ “ಸುದಿನ ಸರಣಿ’ಗೆ ಇಂದು ಅಲ್ಪವಿರಾಮ ನೀಡುತ್ತಿದ್ದೇವೆ. ಅದರರ್ಥ ಸರಣಿ ಮುಗಿದಿಲ್ಲ. ಸರಣಿಯ ವಿವಿಧ ಲೇಖನಗಳಿಗೆ ಶಾಸಕರು, ನಗರಸಭೆ ಅಧಿಕಾರಿಗಳು ಒಂದಿಷ್ಟು ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಇಂದ್ರಾಣಿ ಶುದ್ಧೀಕರಣವೇ ನಮ್ಮ ಮೊದಲ ಆದ್ಯತೆ ಎಂದು ಒಪ್ಪಿಕೊಂಡಿದ್ದ ಶಾಸಕ ಕೆ. ರಘುಪತಿ ಭಟ್, ಒಳಚರಂಡಿ ವ್ಯವಸ್ಥೆ ಸರಿಪಡಿಸುವ ಮೂಲಕ ಇಂದ್ರಾಣಿ ಅಶುದ್ಧಗೊಳ್ಳುವುದನ್ನು ತಡೆಯುವುದಾಗಿ “ಉದಯವಾಣಿ’ ಪ್ರಶ್ನೋತ್ತರದಲ್ಲಿ ತಿಳಿಸಿದ್ದಾರೆ. ಮೂರು ತಿಂಗಳೊಳಗೆ ಈ ಒಳಚರಂಡಿ ವ್ಯವಸ್ಥೆ ಸರಿಪಡಿಸುವ ಕುರಿತಾದ ಡಿಪಿಆರ್ (ಯೋಜನೆ ವಿವರ) ಸಿದ್ಧವಾಗುತ್ತದೆ ಎಂದಿದ್ದಾರೆ.
Related Articles
Advertisement
ಈ ಹೊತ್ತಿನಲ್ಲಿ ಆಗಲೇಬೇಕಾದ ಕೆಲಸಗಳು ಬಹಳಷ್ಟಿವೆ. ವೆಟ್‌ವೆಲ್, ಎಸ್‌ಟಿಪಿ ನಿರ್ವಹಣೆಯಿಂದ ಹಿಡಿದು ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು ಒಂದು ಬಗೆಯ ಪರಿಹಾರವಾದರೆ, ಈಗಾಗಲೇ ಸಮಸ್ಯೆ ಅನುಭವಿಸುತ್ತಿರುವ ಸಂತ್ರಸ್ತರಿಗೆ ಬೇರೆಯದೇ ರೀತಿಯಾದ ಪರಿಹಾರ ಕಾರ್ಯಗಳು ಆಗಬೇಕಿದೆ. ಹಾಗಾಗಿ ಒಂದಷ್ಟು ಸಮಯದ ಬಳಿಕ ಮತ್ತೆ ಇಂದ್ರಾಣಿಯ ಸ್ಥಿತಿ-ಗತಿ ತಿಳಿಸಲು ಓದುಗರ ಎದುರು ಹಾಜರಾಗುತ್ತೇವೆ.
ಈಗ ಪರಿಹಾರವನ್ನು ಕಲ್ಪಿಸಲು ತಯಾರಾಗಬೇಕಾದ ಕಾಲ. ಇಲ್ಲಿ ಆಗಬೇಕಾದ ಕೆಲಸಗಳ ಪಟ್ಟಿ ನೀಡಲಾಗಿದೆ. ನಗರಸಭೆ ಅಧಿಕಾರಿಗಳ, ಶಾಸಕರ, ಸಂಸದರ, ಜನಪ್ರತಿನಿಧಿಗಳ, ನಾಗರಿಕ ಸಂಘಟನೆಗಳು ಹಾಗೂ ನಾಗರಿಕರ ಪ್ರಯತ್ನ ನಿರಂತರವಾಗಿ ಶಾಶ್ವತ ಪರಿಹಾರದತ್ತ ನಡೆಯಲಿ.
ಜನರ ಸ್ಪಂದನೆ ಅವರ್ಣನೀಯಇಡೀ ಅಧ್ಯಯನಪೂರ್ಣ ಸರಣಿಗೆ ಜನರು ಸ್ಪಂದಿಸಿದ ರೀತಿ ಅನನ್ಯ. ತಂಡವು ಹೋದಲ್ಲೆಲ್ಲ ಸಂಪೂರ್ಣ ಮಾಹಿತಿ ನೀಡಿ, ತಮ್ಮಲ್ಲಿರುವ ದಾಖಲೆಗಳನ್ನು ನೀಡಿ ಸಹಕರಿಸಿದ ರೀತಿ ಅದ್ಭುತ. ಒಂದು ರಚನಾತ್ಮಕ ಕೆಲಸಕ್ಕೆ ಇಷ್ಟೊಂದು ಸಹಕಾರ ಸಿಕ್ಕಿದ್ದು ನಿಜಕ್ಕೂ ತಂಡವನ್ನೂ ಬೆರಗುಗೊಳಿಸಿದೆ. ಜನರ ಆಕಾಂಕ್ಷೆಯಂತೆ ಇಂದ್ರಾಣಿ ನದಿ ಶುದ್ಧೀಕರಣಗೊಳ್ಳಬೇಕು. ಅದಕ್ಕೆ ನಾಗರಿಕರಾದ ನಮ್ಮ ಪಾಲ್ಗೊಳ್ಳುವಿಕೆ ಮತ್ತು ಸಹಕಾರವೂ ಬೇಕು. ತ್ಯಾಜ್ಯವನ್ನು ಎಸೆಯುವುದರಿಂದ ಹಿಡಿದು ಎಲ್ಲ ರೀತಿಯ ಸಹಕಾರವನ್ನೂ ನಾವೂ ಒದಗಿಸಬೇಕು. ನದಿ ಉಳಿಸುವುದೆಂದರೆ ಒಂದು ಆಂದೋಲನ, ಅದರಲ್ಲಿ ಎಲ್ಲರೂ ಭಾಗಿಯಾಗಬೇಕು. ನಗರಾಡಳಿತ
– ನಗರಸಭೆಯು ವೆಟ್‌ವೆಲ್‌ಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಅಲ್ಲಿ ಜನರೇಟರ್ ಇಲ್ಲದ್ದಕ್ಕೋ, ವಿದ್ಯುತ್ ಕಡಿತವಾಯಿತೆಂದೋ ತ್ಯಾಜ್ಯ ನೀರನ್ನು ನೇರವಾಗಿ ನದಿಗೆ ಅಥವಾ ಮಳೆನೀರು ಹರಿಯುವ ತೋಡಿಗೆ ಬಿಡಬಾರದು. ಅಂಥ ಪರಿಸ್ಥಿತಿ ಬಾರದಂತೆ ಪರ್ಯಾಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಜನರೇಟರ್ ಇಲ್ಲದ ಕಡೆ ಜನರೇಟರ್ ಒದಗಿಸಬೇಕು. ಇನ್ನಷ್ಟು ಮೂಲ ಸೌಕರ್ಯ ಕಲ್ಪಿಸಬೇಕು. – ಎಸ್‌ಟಿಪಿಯಲ್ಲಿನ ಎಲ್ಲ ಸಮಸ್ಯೆಗಳನ್ನು ಹೋಗಲಾಡಿಸಿ, ಸಂಪೂರ್ಣವಾಗಿ ತ್ಯಾಜ್ಯ ನೀರನ್ನು ಶುದ್ಧೀಕರಿಸಿಯೇ ಬಿಡುವಂತಾಗಬೇಕು. ಒಂದುವೇಳೆ ಜನರಿಂದ, ನದಿ ಪ್ರದೇಶದ ಸಂತ್ರಸ್ತರಿಂದ ಈ ಸಂಬಂಧ ದೂರು ಬಂದರೆ ಕೂಡಲೇ ಗಮನಹರಿಸಿ ಕ್ರಮಕೈಗೊಳ್ಳಬೇಕು. – ಪ್ರತಿ ಮೂರು ತಿಂಗಳಿಗೊಮ್ಮೆ ನಗರಸಭೆಯ ಉನ್ನತ ಅಧಿಕಾರಿಗಳು ವೆಟ್‌ವೆಲ್‌ಗಳು ಹಾಗೂ ಎಸ್‌ಟಿಪಿಗೆ ಭೇಟಿ ನೀಡಿ ಕಾರ್ಯ ನಿರ್ವಹಣೆಯನ್ನು ಪರಿಶೀಲಿಸಬೇಕು. ಈ ಸಂಬಂಧ ವಾರ್ಷಿಕ ನಿರ್ವಹಣೆ ಪದ್ಧತಿ ಜಾರಿಗೆ ತಂದರೂ ಅಧಿ ಕಾರಿಗಳ ಪರಿಶೀಲನೆ ಕಡ್ಡಾಯವಾಗಬೇಕು. – ಇಂದ್ರಾಣಿಗೆ ಕೊಳಚೆ ಸೇರುವ ಕಡೆಯಲ್ಲೆಲ್ಲ ನದಿ ಬದಿಯ ಮನೆ, ಕಟ್ಟಡಗಳಿಗೆಲ್ಲ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಆಗ ನದಿಗೆ ಕೊಳಚೆ ಸೇರುವುದನ್ನು ತಪ್ಪಿಸ ಬಹುದು. ಅದುವವರಿಗೆ ಪಿಟ್ ಮಾಡಿಸುವುದು ಸೂಕ್ತ. – ಪ್ರತಿ ವೆಟ್‌ವೆಲ್ ಹಾಗೂ ಎಸ್‌ಟಿಪಿ ನಿರ್ವಹಣೆ ಸರಿಯಾಗುತ್ತಿದೆಯೇ, ಇಲ್ಲವೇ ಎಂಬುದಕ್ಕೆ ಸ್ಥಳೀಯ ನಾಗರಿಕರನ್ನು ಒಳಗೊಂಡ ನಿಗಾ ಸಮಿತಿ ರಚಿಸಬೇಕು. ಆ ಮೂಲಕ ನ್ಯೂನತೆಗಳನ್ನು ನಗರಸಭೆ ಹಾಗೂ ಜಿಲ್ಲಾಡಳಿತ ಗಮನಕ್ಕೆ ತಂದು ಸರಿಮಾಡಿಸುವಂತಾಗಬೇಕು. – ನದಿಯನ್ನು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಶುಚಿ ಗೊಳಿಸಬೇಕು. ಮಳೆ-ಗಾಳಿ ಮತ್ತಿತರ ಕಾರಣಗಳಿಂದ ಮರ-ಗಿಡಗಳು ಉರುಳಿರಬಹುದು, ಇತ್ಯಾದಿ ಕಸಗಳು ಸೇರಿರಬಹುದು. ಇದನ್ನು ತೆಗೆದು, ಹೂಳು ತುಂಬದಂತೆ ಡ್ರೆಜ್ಜಿಂಗ್ ಮಾಡಬೇಕು. – ಪ್ರತಿ ಆಯವ್ಯಯದಲ್ಲೂ ಇಂದ್ರಾಣಿ ಶುದ್ಧೀಕರಣ ಹಾಗೂ ಅದರ ಪೂರಕ ಕೆಲಸಗಳಿಗೆ ಹಣ ಮೀಸಲಿಡ ಬೇಕು. ಅದರಿಂದ ಅನಗತ್ಯ ವಿಳಂಬವನ್ನು ತಡೆಯಬಹುದು. – ಈಗಾಗಲೇ ಇಂದ್ರಾಣಿ ನದಿಯ ಮಾಲಿನ್ಯದಿಂದ ಹಾಳಾಗಿರುವ ಬಾವಿಗಳ ಮನೆಗಳಿಗೆ ನಗರಸಭೆ ಕೂಡಲೇ ನಳ್ಳಿ ನೀರು ಸಂಪರ್ಕವನ್ನು ಕಲ್ಪಿಸಬೇಕು. ನಾಗರಿಕರು ಮತ್ತು ಸಂಘಟನೆಗಳು
– ನದಿಗೆ ತ್ಯಾಜ್ಯನೀರು ಬಿಡಬಾರದು. ಒಳಚರಂಡಿ ವ್ಯವಸ್ಥೆಯನ್ನು ಕೇಳಿ ಪಡೆಯಬೇಕು. ಅದು ಬರುವವರೆಗೆ ಪಿಟ್ ಮಾಡಿಕೊಂಡು ನಿರ್ವಹಿಸಬೇಕು. ಆ ಮೂಲಕ ನದಿ ಸ್ವಚ್ಛತೆಯಲ್ಲಿ ಭಾಗಿಯಾಗಬೇಕು. – ನದಿಗೆ ಕಸ ಎಸೆಯುವವರನ್ನು, ಕೊಳಚೆ ಬಿಡುವವರ ವಿರುದ್ಧ ಜಾಗೃತಿ ಮೂಡಿಸಬೇಕು. ನಗರಾಡಳಿತಕ್ಕೆ ದೂರು ನೀಡಬೇಕು. – ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಆಂದೋಲನ ತೀರಾ ಅನಿವಾರ್ಯ. ಹಾಗಾಗಿ ಹೋರಾಟವನ್ನು ಸದಾ ಜೀವಂತ ದಲ್ಲಿಡಬೇಕು. – ವಿವಿಧ ರೀತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ ಇಂದ್ರಾಣಿ ನದಿ ಹಾಳಾಗದಂತೆ ತಡೆಯಬೇಕು. ಜನಪ್ರತಿನಿಧಿಗಳು
– ಸಮಸ್ಯೆ ಇರುವ ಪ್ರದೇಶಗಳ ಜನಪ್ರತಿನಿಧಿಗಳು ಆಯಾ ಪ್ರದೇಶಗಳಲ್ಲಿ ಮೊದಲು ನದಿ ಪ್ರದೇಶದ ಸಂತ್ರಸ್ತರಿಗೆಂದೇ ಉಚಿತ ಆರೋಗ್ಯ ಶಿಬಿರಗಳನ್ನು ಮಾಡಬೇಕು. ಕನಿಷ್ಠ 6 ತಿಂಗಳಿಗೊಮ್ಮೆ ಕಡ್ಡಾಯವಾಗಿ ಆರೋಗ್ಯ ಶಿಬಿರಗಳನ್ನು ಸಂಘಟಿಸಬೇಕು. – ನದಿ ಸುತ್ತಲಿನ ಪ್ರದೇಶದ ಬಾವಿಗಳ ನೀರು ಕುಡಿ ಯಲು ಯೋಗ್ಯವೇ ಎಂಬುದನ್ನು 4 ತಿಂಗಳಿಗೊಮ್ಮೆ ಪ್ರಯೋಗಾಲಯಕ್ಕೆ ಕೊಟ್ಟು ಪರಿಶೀಲಿಸಬೇಕು. ಇದರಿಂದ ಇನ್ನಷ್ಟು ಸಮಸ್ಯೆಗಳನ್ನು ತಪ್ಪಿಸಬಹುದು. – ಸಂತ್ರಸ್ತರಿಗೆ ನಳ್ಳಿ ನೀರು ಸಂಪರ್ಕವನ್ನು ಮುತುವರ್ಜಿ ವಹಿಸಿ ನಗರಸಭೆಯಿಂದ ಕೊಡಿಸಬೇಕು. – ನಗರಸಭೆಯ ಪ್ರತಿ ಸಭೆಯಲ್ಲೂ ಸಮಸ್ಯೆ ಬಗೆಹರಿ ಯುವವರೆಗೆ ಸರದಿಯಂತೆ ಆಯಾ ಪ್ರದೇಶದ ಜನ ಪ್ರತಿನಿಧಿಗಳು ಸಮಸ್ಯೆಯನ್ನು ಪ್ರಸ್ತಾವಿಸಬೇಕು. ಅದ ರತ್ತ ಅಧಿಕಾರಿಗಳು ಕಿವಿಗೊಡುವಂತೆ ಮಾಡಬೇಕು. – ಪ್ರಗತಿ ಪರಿಶೀಲನೆ ಸಭೆಯ ಸಂದರ್ಭದಲ್ಲಿಯೂ ವಿಷಯ ಪ್ರಸ್ತಾವಿಸಬೇಕು. – ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸ ಕರು ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ಸಮಸ್ಯೆಯನ್ನು ಪ್ರಸ್ತಾವಿಸಿ ಅವರ ಗಮನ ಸೆಳೆಯಬೇಕು. – ಇಂದ್ರಾಣಿ ಶುದ್ಧೀಕರಣ ಸಂಬಂಧ ನದಿ ಬದಿಯ ನಿವಾಸಿಗಳಲ್ಲಿ ನದಿಗೆ ಕೊಳಚೆ ಬಿಡದಂತೆ ಜಾಗೃತಿ ಮೂಡಿಸಬೇಕು. ಅಗತ್ಯವಿದ್ದಲ್ಲಿ ಆಂದೋಲನ ರೂಪಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು. – ಇಂದ್ರಾಣಿಯನ್ನು ನಗರಸಭೆಯ ಕಡತದಲ್ಲಿ ತೋಡೆಂದು ದಾಖಲಿಸದೆ ನದಿಯೆಂದೇ ಉಳಿಸಲು ಹೋರಾಡಬೇಕು. – ಈಗಾಗಲೇ ತಿಳಿಸಿರುವಂತೆ ಒಳಚರಂಡಿ ವ್ಯವಸ್ಥೆ ಜಾರಿಗೊಳಿಸಲು ಆದ್ಯತೆ ನೀಡಬೇಕು. ಇಂದ್ರಾಣಿ ಶುದ್ಧೀಕರಣಕ್ಕೂ ಶಾಸಕರು ಗಮನ ಕೊಡಬೇಕು. – ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಲ್ಲೂ ಇದಕ್ಕೆ ಹಣ ನೀಡುವ ಹಾಗೂ ರಾಜ್ಯ ಸರಕಾರ, ಕೇಂದ್ರ ಸರ ಕಾರದ ನಗರಾಭಿವೃದ್ಧಿ ಅನುದಾನದಲ್ಲಿ ವಿಶೇಷ ಅನು ದಾನ ತರಿಸಲು ಪ್ರಯತ್ನಿಸಬೇಕು. ಪ್ರಮುಖ ಪ್ರವಾ ಸೋದ್ಯಮ ತಾಣವಾಗಿ ಬೆಳೆಯುತ್ತಿರುವ ಉಡುಪಿಗೆ ಈ ನದಿ ಶುದ್ಧಗೊಳ್ಳುವುದು ಅತ್ಯಂತ ಅವಶ್ಯ. – ಒಳಚರಂಡಿ ಯೋಜನೆಯ ಡಿಪಿಆರ್ ಮುಗಿದ ಕೂಡಲೇ, ಕ್ಷಿಪ್ರ ಗತಿಯಲ್ಲಿ ಜಾರಿಗೆ ಪ್ರಯತ್ನಿಸಬೇಕು. – ನದಿ ಕಲುಷಿತಗೊಳ್ಳುವುದನ್ನು ತಡೆಯುವಲ್ಲಿ ಮತ್ತು ವೆಟ್‌ವೆಲ್, ಎಸ್‌ಟಿಪಿ ನಿರ್ವಹಣೆಯಲ್ಲಿ ನಗರಾಡಳಿತ ವಿಫಲವಾಗದಂತೆ ಎಚ್ಚರಿಕೆ ವಹಿಸಬೇಕು. – ಇದು ಕ್ಷೇತ್ರದ ಪ್ರಮುಖ ಸಮಸ್ಯೆಯಾಗಿರುವುದರಿಂದ ಸಂಸದರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. – ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಅಗತ್ಯವಿರುವ ಎಲ್ಲ ಪ್ರಯತ್ನ ಮಾಡಬೇಕು ಹಾಗೂ ಸ್ಥಳೀಯಾಡ ಳಿತಕ್ಕೆ ಎಲ್ಲ ಬೆಂಬಲ ನೀಡಬೇಕು. ಬೇರೆ ಬೇರೆ ನಿಧಿಯಡಿ ಹಣ ತಂದು ಯೋಜನೆ ಜಾರಿಗೊಳಿಸ ಬೇಕಾದ ಸಂದರ್ಭದಲ್ಲಿ ಬೆಂಬಲಿಸಬೇಕು. – ಜಿಲ್ಲಾ ಉಸ್ತುವಾರಿ ಸಚಿವರು, ಕೇಂದ್ರ ನಗರಾಭಿವೃದ್ಧಿ ಇಲಾಖೆ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸಬೇಕು. – ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಒಂದಷ್ಟು ಹಣ ವನ್ನು ಈ ಯೋಜನೆಗೆ ಪೂರಕವಾದ ಸೌಲಭ್ಯಗಳನ್ನು ಕಲ್ಪಿಸಲು ಮೀಸಲಿಡಬೇಕು. ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗಳು
– ಜಿಲ್ಲಾಧಿಕಾರಿ ಸಹಿತ ಜಿಲ್ಲಾಡಳಿತ ಈ ಸಮಸ್ಯೆಗೆ ಆದ್ಯತೆ ನೀಡಿ ಪರಿಹರಿಸಬೇಕು. ಇದೊಂದು ಹಳೆಯ ಸಮಸ್ಯೆ. ಇದನ್ನು ಬಗೆಹರಿಸಿದರೆ ಇಡೀ ಜಿಲ್ಲೆಗೆ ಮಾದರಿ ಕೆಲಸ ಮಾಡಿದಂತೆ. ಹಾಗಾಗಿ ಇದರ ಮಹತ್ವವನ್ನು ಅರಿತು ಸಮ ರೋಪಾದಿಯಲ್ಲಿ ಕೆಲಸ ಮಾಡಬೇಕು. – ಮೊದಲು ಸಮಸ್ಯೆ ಪೀಡಿತ ಸ್ಥಳಕ್ಕೆ ಭೇಟಿ ನೀಡಿ ಜನರ ಕಷ್ಟವನ್ನು ಆಲಿಸಬೇಕು. ಆಗ ಸಮಸ್ಯೆಯ ನೈಜ ಸ್ವರೂಪ ಅರಿವಾಗುತ್ತದೆ. – ನಗರಸಭೆ ಅಧಿಕಾರಿಗಳನ್ನು ಇಂದ್ರಾಣಿಗೆ ತ್ಯಾಜ್ಯ ಬಿಡದಂತೆ ಎಚ್ಚರಿಸಬೇಕು. ಅದಕ್ಕೆ ಪೂರಕ ಸೌಲಭ್ಯಗಳನ್ನು ಕಲ್ಪಿಸಬೇಕು. ನಗರಸಭೆ ಆಡಳಿತದ ಮೇಲೆ ಈ ಸಂಬಂಧ ನಿಗಾ ವಹಿಸಬೇಕು. – ಇಂದ್ರಾಣಿ ಶುದ್ಧೀಕರಣದಲ್ಲಿ ವಿವಿಧ ಇಲಾಖೆಗಳ ಪಾತ್ರ ಅತ್ಯವಶ್ಯ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹಿಡಿದು ಎಲ್ಲ ಇಲಾಖೆಗಳು ಭವಿಷ್ಯದ ಹಿತದೃಷ್ಟಿಯಿಂದ ಇಂದ್ರಾಣಿ ಶುದ್ಧೀ ಕರಣಕ್ಕೆ ನಗರಸಭೆಯ ಮೇಲೆ ಒತ್ತಡ ಹೇರುತ್ತಲೇ ಇರಬೇಕು. ಯಾವುದೇ ಕಾರಣಕ್ಕೂ ಇಂದ್ರಾಣಿ ನದಿ ಹಾಳಾಗದಂತೆ ಎಚ್ಚರವಹಿಸಬೇಕು.