ಕಳೆದ ಗುರುವಾರ ಆರಂಭವಾದ ಮುಂಗಾರು ಅಧಿವೇಶನದಲ್ಲಿ ಕೇವಲ ಗದ್ದಲವೇ ಸದ್ದು ಮಾಡುತ್ತಿದ್ದು, ಕಾರ್ಯ ಕಲಾಪಗಳು ನಡೆಯುತ್ತಿಲ್ಲ. ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆಗೆ ಆಗ್ರಹಿಸಿ, ಪ್ರಧಾನಿ ಉತ್ತರ ನೀಡಬೇಕೆಂದಿದ್ದರೆ, ಕೇಂದ್ರ ಸರಕಾರವು ಚರ್ಚೆಗೆ ಅವಕಾಶ ನೀಡಲಾಗುತ್ತದೆ, ಸದನ ಸುಸೂತ್ರವಾಗಿ ನಡೆಯಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತಿದೆ. ಆದರೆ ಉಭಯ ಕಡೆಯವರೂ ಪಟ್ಟು ಸಡಿಲಿಸದ ಕಾರಣದಿಂದಾಗಿ ಐದು ದಿನಗಳ ಕಲಾಪ ಕೇವಲ ಗದ್ದಲದಲ್ಲೇ ಮುಳುಗಿ ಹೋಗಿದೆ.
ಅಧಿವೇಶನ ಆರಂಭಕ್ಕೂ ಮುನ್ನವೇ ಮಣಿಪುರ ಹಿಂಸಾಚಾರದ ಬಗ್ಗೆ ಸುದೀರ್ಘ ಚರ್ಚೆಗೆ ಅವಕಾಶ ನೀಡಬೇಕು ಎಂದು ವಿಪಕ್ಷಗಳು ಒತ್ತಾಯ ಮಾಡಿದ್ದವು. ಅಲ್ಲದೆ ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಸ್ವಯಂ ಪ್ರೇರಿತರಾಗಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಉತ್ತರ ಕೊಡಬೇಕು ಎಂದು ವಿಪಕ್ಷಗಳು ಆಗ್ರಹಿಸಿದ್ದವು. ಆದರೆ ಕೇಂದ್ರ ಸರಕಾರ
ಮಾತ್ರ ಚರ್ಚೆಗೆ ಅವಕಾಶ ನೀಡುವ ಬಗ್ಗೆ ಒಪ್ಪಿಗೆ ನೀಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಡೆಯಿಂದ ಉತ್ತರ ಕೊಡಿಸುವುದಾಗಿ ಹೇಳಿದ್ದು, ಇದಕ್ಕೆ ವಿಪಕ್ಷಗಳು ಒಪ್ಪಿಗೆ ನೀಡಿಲ್ಲ. ಹೀಗಾಗಿ ಸದನ ನಡೆಯಲು ಸಾಧ್ಯವಾಗಿಲ್ಲ.
ಸದ್ಯದ ಮಟ್ಟಿಗ ಅವಲೋಕಿಸಿ ಹೇಳುವುದಾದರೆ ವಿಪಕ್ಷಗಳ ವಾದದಲ್ಲಿ ಅರ್ಥವಿದೆ. ಮೇ ತಿಂಗಳ ಆರಂಭದಲ್ಲಿ ಶುರುವಾಗಿರುವ ಮಣಿಪುರ ಹಿಂಸಾಚಾರ ಇನ್ನೂ ನಿಂತಿಲ್ಲ. ಮೊನ್ನೆಯಷ್ಟೇ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿದ್ದ ಅಮಾನವೀಯ ಘಟನೆಯ ವೀಡಿಯೋವೊಂದು ವೈರಲ್ ಆಗಿದ್ದು, ದೇಶದ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ಇಂಥ ಹೊತ್ತಲ್ಲಿ ಈ ವಿಚಾರ ಸಂಬಂಧ ಸುದೀರ್ಘ ಚರ್ಚೆ ಮಾಡಿ, ಇದಕ್ಕೊಂದು ತಾರ್ಕಿಕ ಅಂತ್ಯ ನೀಡುವುದು ಅತ್ಯಂತ ಮಹತ್ವದ್ದಾಗಿದೆ. ಅಲ್ಲದೆ ಮಣಿಪುರ ಸರಕಾರದ ಜತೆಗೂ ಮಾತನಾಡಿ ಅಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಇಲ್ಲಿ ಆಡಳಿತ ಪಕ್ಷವಾಗಲಿ ಅಥವಾ ವಿಪಕ್ಷವಾಗಲಿ ಪಟ್ಟು ಹಿಡಿದು ಕುಳಿತುಕೊಂಡರೆ ಅಧಿವೇಶನ ವ್ಯರ್ಥವಾಗುತ್ತದೆಯೇ ವಿನಃ ಸಾಧಿಸುವಂಥದ್ದು ಏನೂ ಆಗುವುದಿಲ್ಲ. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಕಾಂಗ್ರೆಸ್ ಮತ್ತು ಭಾರತ ರಾಷ್ಟ್ರೀಯ ಪಕ್ಷ (ಬಿಆರ್‌ಎಸ್) ಕೇಂದ್ರ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿವೆ. ಈ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಅವರು ಇದಕ್ಕೆ ಒಪ್ಪಿಗೆಯನ್ನೂ ನೀಡಿದ್ದಾರೆ. ಆದರೆ ದಿನಾಂಕ ಇನ್ನೂ ನಿಗದಿ ಮಾಡಿಲ್ಲ. ಸ್ಪೀಕರ್ ಅವರು ದಿನ ನಿಗದಿ ಮಾಡಿದ ಮೇಲೆ ಅವಿಶ್ವಾಸದ ಮೇಲೆ ಚರ್ಚೆ ಆರಂಭವಾಗಲಿದೆ. ಸದ್ಯ ಕೇವಲ ಮಣಿಪುರ ಹಿಂಸಾಚಾರವಷ್ಟೇ ಅಲ್ಲ, ಉತ್ತರ ಭಾರತವೂ ಸೇರಿದಂತೆ ದೇಶಾದ್ಯಂತ ಭಾರೀ ಪ್ರಮಾಣದ ಮಳೆಯಾಗಿದ್ದು, ಪ್ರವಾಹ ಸ್ಥಿತಿ ತಲೆದೋರಿದೆ. ಹಲವಾರು ರಾಜ್ಯಗಳು ಸಂಕಷ್ಟದಲ್ಲಿವೆ. ಇಂಥ ಹೊತ್ತಿನಲ್ಲಿ ಸಂಸತ್‌ನಲ್ಲಿ ಈ ಬಗ್ಗೆಯೂ ಚರ್ಚೆ ನಡೆಸಬೇಕಾಗಿದೆ. ಅಲ್ಲದೆ ನೆರೆ ಪೀಡಿತ ರಾಜ್ಯಗಳು ಸಂಸತ್‌ನಲ್ಲಿ ಈ ಬಗ್ಗೆ ಬೆಳಕು ಚೆಲ್ಲಬೇಕಾಗಿದೆ. ಕೇಂದ್ರ ಸರಕಾರ ಪ್ರವಾಹ ಪೀಡಿತ ರಾಜ್ಯಗಳ ನೆರವಿಗೆ ಹೋಗಬೇಕಾಗಿದೆ.
ಹಾಗೆಯೇ ಈಗಷ್ಟೇ ಟೊಮೇಟೊ ಬೆಲೆ ನಿಯಂತ್ರಣಕ್ಕೆ ಬರುತ್ತಿದ್ದು, ಉಳಿದ ತರಕಾರಿಗಳು, ಬೇಳೆಗಳು ಸಹಿತ ಅಗತ್ಯ ವಸ್ತುಗಳ ದರವೂ ಗಗನಮುಖೀಯಾಗಿದೆ. ದೇಶದ ಇಂಥ ಹಲವಾರು ವಿಚಾರಗಳ ಬಗ್ಗೆ ಚರ್ಚೆಗಾಗಿಯಾದರೂ ಆಡಳಿತ ಮತ್ತು ವಿಪಕ್ಷಗಳು ಪಟ್ಟು ಸಡಿಲಿಸಿ, ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತಾಗಬೇಕು.