Advertisement

ಪೋಷಕರು ಮಕ್ಕಳಿಗೆ ಜೀವನ ಪಾಠ ಹೇಳಲಿ

04:08 PM May 11, 2022 | Team Udayavani |

ದಾವಣಗೆರೆ: ಪಾಲಕರು ತಮ್ಮ ಜೀವನದಲ್ಲಿ ಪಟ್ಟ ಕಷ್ಟವನ್ನು ಮಕ್ಕಳಿಗೆ ಅರ್ಥ ಮಾಡಿಸುವ ಕೆಲಸ ಮಾಡಬೇಕು ಎಂದು ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್‌ ಹೇಳಿದರು.

Advertisement

ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಮಂಗಳವಾರ ಸಂಜೆ ಅನ್ವೇಷಕರು ಆರ್ಟ್‌ ಫೌಂಡೇಷನ್‌ನಿಂದ ಏರ್ಪಡಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ತಾವು ಪಟ್ಟ ಕಷ್ಟ ತಮ್ಮ ಮಕ್ಕಳು ಪಡಬಾರದೆಂದು ಅನೇಕ ಪಾಲಕರು ಮಕ್ಕಳಿಗೆ ಯಾವುದೇ ಕಷ್ಟದ ಅನುಭವ ಆಗದಂತೆ ನೋಡಿಕೊಳ್ಳುತ್ತಾರೆ. ಇದರಿಂದ ಮಕ್ಕಳು ಮುಂದೆ ಸೋಮಾರಿಗಳಾಗುವ ಜತೆಗೆ ತಮ್ಮ ಜೀವನದಲ್ಲಿ ಕಷ್ಟ ಬಂದಾಗ ಎದುರಿಸಲಾಗದೆ ಸಂಕಷ್ಟ ಪಡುತ್ತಾರೆ. ಆದ್ದರಿಂದ ಮಕ್ಕಳಿಗೆ ಜೀವನ ನಿರ್ವಹಣೆಯ ಕಷ್ಟ ಅರ್ಥ ಮಾಡಿಸುವುದು ಒಳಿತು ಎಂದರು.

ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುತ್ತಾರೆ. ಆದರೆ ಜೀವನ ಪಾಠ ತಿಳಿಯುವುದಿಲ್ಲ. ಮಕ್ಕಳ ನಗರಾಕರ್ಷಣೆ ಮನೋಭಾವದಿಂದಾಗಿ ಇಂದು ಕೃಷಿ ಸೇರಿದಂತೆ ನಾನಾ ಉದ್ಯೋಗ ಕ್ಷೇತ್ರಗಳಲ್ಲಿ ಕೆಲಸಕ್ಕೆ ಜನರೇ ಸಿಗುತ್ತಿಲ್ಲ. ಆದ್ದರಿಂದ ಶಿಕ್ಷಣದಲ್ಲಿಯೇ ಕೃಷಿ, ಹೈನುಗಾರಿಕೆ ಸೇರಿದಂತೆ ವಿವಿಧ ಉದ್ಯೋಗಾಧಾರಿತ ಶಿಕ್ಷಣಕ್ಕೂ ಒತ್ತು ನೀಡಬೇಕಾಗಿದೆ ಎಂದರು.

ಇದು ತಂತ್ರಜ್ಞಾನದ ಯುಗ. ವ್ಯಕ್ತಿ ಜನಪ್ರಿಯವಾಗಲು ಮೊಬೈಲ್‌, ಸಾಮಾಜಿಕ ಜಾಲತಾಣ ಸೇರಿದಂತೆ ನಾನಾ ದಾರಿಗಳಿವೆ. ಪೋಷಕರು, ಶಿಕ್ಷಕರು ಮಕ್ಕಳ ಪ್ರತಿಭೆ ಗುರುತಿಸಿ ಅದನ್ನು ಒಳ್ಳೆಯ ಮಾರ್ಗದಲ್ಲಿ ಪ್ರಚುರಪಡಿಸಬೇಕು. ಮಕ್ಕಳನ್ನು ವಿದ್ಯಾವಂತರನ್ನಾಗಿ, ಸಂಸ್ಕಾರವಂತರನ್ನಾಗಿ ಮಾಡುವ ಮೂಲಕ ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಎಲ್ಲ ಮಕ್ಕಳೂ ಪ್ರತಿಭಾವಂತರೇ ಆಗಿರುತ್ತಾರೆ. ಆದರೆ, ಅವರಲ್ಲಿನ ಪ್ರತಿಭೆಯನ್ನು ಹುಡುಕಿ ತೆಗೆಯುವ ಕೆಲಸ ಪೋಷಕರು, ಶಿಕ್ಷಕರು ಮಾಡಬೇಕು. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಹಾಗೂ ಪ್ರತಿಭೆ ಪ್ರದರ್ಶನಕ್ಕೆ ಬೇಸಿಗೆ ಶಿಬಿರಗಳು ಉತ್ತಮ ವೇದಿಕೆಯಾಗಿವೆ ಎಂದು ಅಭಿಪ್ರಾಯಪಟ್ಟರು.

ಜಾನಪದ ತಜ್ಞ ಡಾ| ಎಂ.ಜಿ. ಈಶ್ವರಪ್ಪ ಸಮಾರೋಪ ನುಡಿಗಳನ್ನಾಡಿದರು. ಹೆಗ್ಗೊಡು ನೀನಾಸಂ ರಂಗ ಶಿಕ್ಷಣ ಕೇಂದ್ರದ ವಿಶ್ರಾಂತ ಪ್ರಾಂಶುಪಾಲ ಕೆ.ಜಿ. ಮಹಾಬಲೇಶ್ವರ, ನಿರ್ದೇಶಕ, ಸಾಹಿತಿ ಎನ್.ಎಸ್. ಶಂಕರ್‌, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರವೀಂದ್ರ ಎಚ್‌. ಅರಳಗುಪ್ಪಿ, ರಂಗಕರ್ಮಿ ಬಾ.ಮ. ಬಸವರಾಜಯ್ಯ, ಬಿಇಎ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ.ಎಸ್. ರವಿ, ಶಿಬಿರ ನಿರ್ದೇಶಕ ಎಸ್.ಎಸ್. ಸಿದ್ದರಾಜ್‌ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next