Advertisement

ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಗುಣ ನಮ್ಮದಾಗಲಿ

01:21 PM Jul 30, 2019 | Suhan S |

ಥಾಣೆ, ಜು. 29: ಶೈಕ್ಷಣಿಕ ಸಹಾಯವನ್ನು ಪಡೆದ ಮಕ್ಕಳು ಇದು ನಮಗೆ ದೊರೆತ ದೇವರ ಪ್ರಸಾದ ಎಂದು ಶ್ರದ್ಧೆಯಿಂದ ಸ್ವೀಕರಿಸಿ ಮುಂದೆ ನಾವು ಇತರರಿಗೂ ಸಹಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ದೃಷ್ಟಿಯಿಂದ ಥಾಣೆ ಬಂಟ್ಸ್‌ ಅಸೋಸಿಯೇಶನ್‌ ಮಾಡುತ್ತಿರುವ ಕಾರ್ಯ ಅಭಿನಂದನೀಯವಾಗಿದೆ ಎಂದು ಭವಾನಿ ಶಿಪ್ಪಿಂಗ್‌ ಸರ್ವಿಸ್‌ ಪ್ರೈವೇಟ್ ಲಿಮಿಟೆಡ್‌ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೆ. ಡಿ. ಶೆಟ್ಟಿ ನುಡಿದರು.

Advertisement

ಜು. 27ರಂದು ಅಪರಾಹ್ನ 4ರಿಂದ ಥಾಣೆ ಪಶ್ಚಿಮದ ಮುಲುಂಡ್‌ ಚೆಕ್‌ನಾಕಾ ಸಮೀಪದ ರೆಹಜಾ ಗಾರ್ಡನ್‌ ಎದುರುಗಡೆಯ ಹೊಟೇಲ್ ವುಡ್‌ಲ್ಯಾಂಡ್‌ ರಿಟ್ರೀಟ್ ಸಭಾಗೃಹದಲ್ಲಿ ಥಾಣೆ ಬಂಟ್ಸ್‌ ಅಸೋಸಿಯೇಶನ್‌ ವತಿಯಿಂದ‌ ನಡೆದ ಆರ್ಥಿಕವಾಗಿ ಹಿಂದುಳಿದ ಸದಸ್ಯ ಬಾಂಧವರ ಮಕ್ಕಳ ಶೈಕ್ಷಣಿಕ ದತ್ತು ಸ್ವೀಕಾರ ಹಾಗೂ ಶೈಕ್ಷಣಿಕ ನೆರವು ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ನಮಗೆ ಕಣ್ಣಿಗೆ ಕಾಣುವ ದೇವರೆಂದರೆ ತಂದೆ-ತಾಯಿ. ಅವರಿಗೆ ಸದಾ ಗೌರವ ನೀಡುವ ಕಾರ್ಯ ನಮ್ಮಿಂದಾಗಬೇಕು. ನಮಗೆ ಜೀವನದಲ್ಲಿ ಉತ್ತಮ ಸ್ಥಾನಮಾನ ದೊರೆತು ದಾರಿ ತೋರಿಸುವವರು ಅವರು. ನಾವು ಜೀವನದಲ್ಲಿ ಯಶಸ್ಸನ್ನು ಸಾಧಿಸಿದರು ಬಂದ ದಾರಿಯನ್ನು ಮರೆಯಬಾರದು. ಸದಾ ಇನ್ನೊಬ್ಬರಿಗೆ ಸಹಾಯ ಮಾಡುವ ಕಾರ್ಯದಲ್ಲಿ ತೊಡಗಬೇಕು ಎಂದು ಹೇಳಿದರು.

ಪ್ರತಿಭೆಯನ್ನು ಪ್ರೋತ್ಸಾಹಿಸಿ:

ಗೌರವ ಅತಿಥಿಗಳಾಗಿ ಬಂಟರ ಸಂಘದ ಎಸ್‌ಎಂ ಶೆಟ್ಟಿ ಕಾಲೇಜಿನ ಪ್ರಾಂಶುಪಾಲ ಡಾ| ಶ್ರೀಧರ ಶೆಟ್ಟಿ ಅವರು ಮಾತನಾಡಿ, ಮಕ್ಕಳಿಗೆ ಗುರಿ ಮುಟ್ಟುವ ಕನಸು ಬೇಕು. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆಯಿದ್ದು, ಅದನ್ನು ಪ್ರೋತ್ಸಾಹಿಸಿ, ಬೆಳೆಸುವ ಕಾರ್ಯ ನಮ್ಮಿಂದಾಗಬೇಕು. ಬಡನದಲ್ಲಿ ಹುಟ್ಟುವುದು ನಮ್ಮ ತಪ್ಪಲ್ಲ. ಆದರೆ ಬಡತನದಲ್ಲೇ ಜೀವಿಸುವುದು ದೊಡ್ಡ ತಪ್ಪು. ನಮ್ಮ ಸಮಾಜದಲ್ಲಿ ಅನೇಕ ಪ್ರತಿಷ್ಠಿತ ವ್ಯಕ್ತಿಗಳು, ಸಾಧಕರಿದ್ದು ಅವರು ನಮಗೆ ಪ್ರೇರಣೆಯಾಗಬೇಕು ಎಂದು ನುಡಿದರು.

ಇನ್ನೋರ್ವ ಗೌರವ ಅತಿಥಿ ಬಂಟರ ಸಂಘ ಮುಂಬಯಿ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಅಪ್ಪಣ್ಣ ಶೆಟ್ಟಿ ಅವರು ಮಾತನಾಡಿ, ಹೆತ್ತವರಿಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು ಎಂಬ ಆಸೆ ಇರುತ್ತದೆ. ಆದರೆ ಆರ್ಥಿಕ ಅಡಚಣೆಯಿಂದ ಕೆಲವೊಮ್ಮೆ ಇದು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ದಾನಿಗಳು, ಸಂಘ-ಸಂಸ್ಥೆಗಳು ಮಾಡುತ್ತಿರುವ ಇಂತಹ ಕೆಲಸಗಳು ಮಕ್ಕಳಿಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದರು.

Advertisement

ಗೌರವ ಅತಿಥಿಯಾಗಿ ಆಗಮಿಸಿದ ಬಂಟರ ಸಂಘ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್‌ ಎನ್‌. ಶೆಟ್ಟಿ ಅವರು ಮಾತನಾಡಿ, ಸಮಾಜ ಬಾಂಧವರ ಮಕ್ಕಳಿಗೆ ಆರ್ಥಿಕ ಸಹಕರಿಸುವುದರ ಮೂಲಕ, ಅವರ ಬದುಕನ್ನು ಬೆಳಗಿಸುವಲ್ಲಿ ಥಾಣೆ ಬಂಟ್ಸ್‌ ಮಾಡುತ್ತಿರುವ ಕಾರ್ಯ ಅಭಿನಂದನೀಯ. ಈ ಪುಣ್ಯದ ಕಾರ್ಯಕ್ಕೆ ಎಲ್ಲರ ಪ್ರೋತ್ಸಾಹ ಸದಾಯಿರಲಿ ಎಂದರು.

ಥಾಣೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಕುಶಲ್ ಸಿ. ಭಂಡಾರಿ ಅವರ ಅಧ್ಯಕ್ಷತೆಯಲ್ಲಿ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರುಗಳಾದ ಸೀತಾರಾಮ್‌ ಜೆ. ಶೆಟ್ಟಿ ಮತ್ತು ಸುನಿಲ್ ಆಳ್ವ ಅವರ ಮುಂದಾಳತ್ವದಲ್ಲಿ ಜರಗಿದ ಸಮಾರಂಭದ ವೇದಿಕೆಯಲ್ಲಿ ಥಾಣೆ ಬಂಟ್ಸ್‌ನ ಉಪಾಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸುನೀಲ್ ಜೆ. ಶೆಟ್ಟಿ, ಗೌರವ ಕೋಶಾಧಿಕಾರಿ ಭಾಸ್ಕರ್‌ ಎನ್‌. ಶೆಟ್ಟಿ, ಜತೆ ಕಾರ್ಯದರ್ಶಿ ಅಶೋಕ್‌ ಎಂ. ಶೆಟ್ಟಿ, ಜತೆ ಕೋಶಾಧಿಕಾರಿ ಚಂದ್ರಶೇಖರ ಎಸ್‌. ಶೆಟ್ಟಿ, ಶಿಕ್ಷಣ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಕೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರಂಜನ್‌ ಆರ್‌. ಶೆಟ್ಟಿ ಅವರು ಉಪಸ್ಥಿತರಿದ್ದರು.

ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರುಗಳಾದ ಸೀತಾರಾಮ್‌ ಜೆ. ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘವು ಮಕ್ಕಳ ಶೈಕ್ಷಣಿಕ ನೆರವಿಗಾಗಿ ಲಕ್ಷಾಂತರ ರೂ. ಗಳನ್ನು ವಿನಿಯೋಗಿಸುತ್ತಿದೆ. ಮಕ್ಕಳು ಶಿಕ್ಷಣವನ್ನು ಆರ್ಥಿಕ ಸಮಸ್ಯೆಯಿಂದ ಅರ್ಧಕ್ಕೆ ನಿಲ್ಲಿಸಬಾರದೆಂಬ ಉದ್ದೇಶದಿಂದ ಈ ಯೋಜನೆಗೆ ಮುಂದಾಗಿದೆ. ವಿದ್ಯಾರ್ಥಿ ವೇತನವನ್ನು ಯಾವುದೇ ಮುಜುಗರ ಇಲ್ಲದೆ ಮಕ್ಕಳು ಪಡೆದು ಆದರ್ಶ ಪ್ರಜೆಗಳಾಗಿ ಬಾಳಬೇಕು. ಸಂಸ್ಥೆಯಿಂದ ನೆರವು ಪಡೆದ ಮಕ್ಕಳು ಉನ್ನತ ಹುದ್ಧೆಯನ್ನು ತಲುಪಿ ಪ್ರಸ್ತುತ ಇತರ ಮಕ್ಕಳಿಗೆ ಶೈಕ್ಷಣಿಕವಾಗಿ ನೆರವಾಗುತ್ತಿರುವುದು ಸಂತೋಷದ ಸಂಗತಿಯಾಗಿದೆ. ಈ ಆದರ್ಶ ಎಲ್ಲಾ ಮಕ್ಕಳು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕೋಶಾಧಿಕಾರಿ ಭಾಸ್ಕರ್‌ ಶೆಟ್ಟಿ, ಜತೆ ಕೋಶಾಧಿಕಾರಿ ಚಂದ್ರಶೇಖರ್‌ ಎಸ್‌. ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಪ್ರಮೋದಾ ಮಾಡಾ, ಮೋಹಿನಿ ಆರ್‌. ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ವೇತನ ಪಡೆದ ಮಕ್ಕಳ ಯಾದಿಯನ್ನು ರಂಜನ್‌ ಆರ್‌. ಶೆಟ್ಟಿ, ತಾರಾ ಪಿ. ಶೆಟ್ಟಿ ಅವರು ವಾಚಿಸಿದರು. ಕಾರ್ಯಕ್ರಮಕ್ಕೆ ಆರ್ಥಿಕವಾಗಿ ಸಹಕರಿಸಿದ ದಾನಿಗಳ ಹೆಸರನ್ನು ಸುಲೋಚನಾ ಬಿ. ಶೆಟ್ಟಿ, ಆರತಿ ವೈ. ಶೆಟ್ಟಿ, ರೇವತಿ ಎಸ್‌. ಶೆಟ್ಟಿ, ಶರ್ಮಿಳಾ ಎಸ್‌. ಶೆಟ್ಟಿ, ಶಕುಂತಳಾ ಎಸ್‌. ಶೆಟ್ಟಿ ಅವರು ಓದಿದರು. ಅತಿಥಿ-ಗಣ್ಯರುಗಳನ್ನು ಅಧ್ಯಕ್ಷ ಕುಶಲ್ ಸಿ. ಭಂಡಾರಿ, ಉಪಾಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸೀತಾರಾಮ ಜೆ. ಶೆಟ್ಟಿ ಮೊದಲಾದವರು ಗೌರವಿಸಿದರು.

ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ಸುನೀಲ್ ಜೆ. ಶೆಟ್ಟಿ ನಿರ್ವಹಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಕೆ. ಶೆಟ್ಟಿ ವಂದಿಸಿದರು. ಸಂಸ್ಥೆಯ ಸ್ಥಾಪಕರು, ಮಾಜಿ ಆಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು, ವಿದ್ಯಾರ್ಥಿಗಳು, ಪಾಲಕರು, ಹಿತೈಷಿಗಳು, ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭದ ಯಶಸ್ಸಿಗೆ ಸಹಕರಿಸಿದರು.ಕಾರ್ಯಕ್ರಮದಲ್ಲಿ ನೂರಾರು ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಅಲ್ಲದೆ ಅರ್ಹ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಲಾಯಿತು.

ಸಮಾಜದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣಕ್ಕೆ ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳು ಎದುರಾಗಬಾರದೆಂಬ ಕಾಳಜಿ ನಮ್ಮದಾಗಿದೆ. ಹಿರಿಯರು ಸದುದ್ದೇಶದಿಂದ ಸ್ಥಾಪಿಸಿದ ಈ ಸಂಸ್ಥೆಯು ಶೈಕ್ಷಣಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ. ಸಮಾಜ ಸೇವೆಯು ಎಲ್ಲರಿಗೂ ಒಲಿಯುವುದಿಲ್ಲ. ಅದಕ್ಕೂ ಯೋಗ-ಭಾಗ್ಯ ಬೇಕು. ಹದಿನೈದು ವರ್ಷಗಳ ಹಿಂದೆ ಸಮಾಜದ ಹಿರಿಯರು ಸ್ಥಾಪಿಸಿದ ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸದವಕಾಶ ದೊರಕಿರುವುದು ನನ್ನ ಭಾಗ್ಯ. ಮಕ್ಕಳಿಗೆ ಶಿಕ್ಷಣದೊಂದಿಗೆ ಸಾಮಾನ್ಯ ಜ್ಞಾನ, ಸಂಸ್ಕಾರದ ಅರಿವು ಮೂಡಿಸಬೇಕು. ಥಾಣೆ ಬಂಟ್ಸ್‌ ಪ್ರತಿಭಾವಂತ ಮಕ್ಕಳ ಪೋಷಣೆಗಾಗಿ ಹಲವಾರು ಯೋಜನೆಗಳನ್ನು ಹೊಂದಿದೆ. ವಿದ್ಯಾರ್ಥಿಗಳು ಸಂಘದಲ್ಲಿ ಸಕ್ರಿಯಗೊಂಡು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಸಂಸ್ಥೆಯ ಸಮಾಜಪರ, ಶೈಕ್ಷಣಿಕ ಕಾರ್ಯಯೋಜನೆಗಳಿಗೆ ದಾನಿಗಳ ಪ್ರೋತ್ಸಾಹ ಸದಾಯಿರಲಿ– ಕುಶಲ್ ಸಿ. ಭಂಡಾರಿ, ಅಧ್ಯಕ್ಷರು, ಥಾಣೆ ಬಂಟ್ಸ್‌ ಅಸೋಸಿಯೇಶನ್‌

 

ಚಿತ್ರ-ವರದಿ : ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next