Advertisement
ನಾವಿಂದು ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ಪುಸ್ತಕ ಜ್ಞಾನದ ವರ್ಗಾವಣೆ ಮಾಡಿದರೆ ವಿದ್ಯಾರ್ಥಿಯು ಬದುಕು ಕಟ್ಟಿಕೊಳ್ಳುವ ಎಲ್ಲ ಕಲೆಗಳನ್ನು ಕಲಿಯಲು ಸಾಧ್ಯವಿಲ್ಲ. ಕೇವಲ ಪದವಿ ಪ್ರಮಾಣಪತ್ರದಲ್ಲಿ ಇರುವ ಶಿಕ್ಷಣದ ಮಟ್ಟ ನೈಜ ಜೀವನದ ಸಮ ಸ್ಯೆಗಳನ್ನು ಎದುರಿಸುವ ಅಂತಃಶಕ್ತಿ ಯನ್ನು ಕೊಡಲಾರದು. ಅದರಲ್ಲೂ ಸತತವಾಗಿ 2 ವರ್ಷಗಳಿಂದ ಕೊರೊನಾ ತಂದಿಟ್ಟ ಲಾಕ್‌ಡೌನ್ ಎಲ್ಲ ಕ್ಷೇತ್ರಗಳಿಗೂ ಗದಾಪ್ರಹಾರ ಮಾಡಿದಂತೆ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಕೊಡಲಿ ಏಟು ಹಾಕಿರುವುದಂತೂ ದಿಟ. ಈ ಹೊತ್ತಲ್ಲಿ ಶಾಲಾ ಶಿಕ್ಷಣದ ಭವಿಷ್ಯದ ಬಗೆಗೆ ಹತ್ತು ಹಲವು ಯೋಚನೆ ಮತ್ತು ಯೋಜನೆಗಳನ್ನು ನಾವು ಮಾಡಿಕೊಳ್ಳಬೇಕಿದೆ.
ಬೇಕಿದೆ. ಕಳೆದ ಎರಡು ಲಾಕ್‌ಡೌನ್‌ಗಳ ಅವಧಿ ಯಲ್ಲಿ ಕೆಲವು ಮಕ್ಕಳು ಮೊಬೈಲ್ ಗೀಳು, ಖನ್ನತೆಯಂತಹ ಸಮಸ್ಯೆಗಳಿಗೆ ಒಳಗಾಗಿರುವುದನ್ನು ಗಮನದಲ್ಲಿಟ್ಟು ಕೊಂಡು ಮನೆಯಲ್ಲಿಯೇ ಹೆತ್ತವರು ಯಾ ಪೋಷಕರ ಮಾರ್ಗದರ್ಶನದಲ್ಲಿ ಹಲವು ಕ್ರಿಯಾಶೀಲ ಚಟುವಟಿಕೆಗಳನ್ನು ಮಾಡುವಂತಾಗಬೇಕಿದೆ.
Related Articles
Advertisement
ಗ್ರಾಮೀಣ ಭಾಗಗಳಲ್ಲಿ ಸುಮಾರು 90ರ ದಶಕಕ್ಕಿಂತ ಮೊದಲು ಅರ್ಥಾತ್ ದೂರ ದರ್ಶನವು ಮನೆಮನೆಗೂ ಲಗ್ಗೆ ಇಡುವ ಮೊದಲು ಮುಸ್ಸಂಜೆ ವೇಳೆಯಲ್ಲಿ ತಾಯಿ ತನ್ನ ದೈನಂದಿನ ಕೆಲಸಗಳನ್ನು ಮಾಡುತ್ತಲೇ ಪುಟಾಣಿಗಳಿಗೆ ಶಿಕ್ಷಣದ ಅಡಿಪಾಯ ಹಾಕಲೆಂಬಂತೆ ಕೆಲವು ಕಂಠ ಪಾಠಗಳನ್ನು ಮಾಡಿಸುತ್ತಿದ್ದರು. ತಿಥಿ, ವಾರ, ನಕ್ಷತ್ರ, ಅಂಕಿಗಳು, ಮಗ್ಗಿಗಳು ಇತ್ಯಾದಿ ದೈನಂದಿನ ಕಂಠಪಾಠದಿಂದ ಮಕ್ಕಳಲ್ಲಿ ದೃಢಗೊಳ್ಳುತ್ತಿದ್ದವು. ಜತೆಯಲ್ಲಿ ಶಿಶು ಗೀತೆ, ಭಜನೆಗಳು ಕೂಡ ಮಕ್ಕಳಿಗೆ ಮೌಖೀಕ ಸಾಮರ್ಥ್ಯವನ್ನು ಬಲಗೊಳಿಸುತ್ತಿದ್ದವು. ಈ ಎಲ್ಲ ಚಟುವಟಿಕೆಗಳ ಮೂಲಕ ಕಲಿಕೆಗೆ ಪ್ರೇರಣೆ ದೊರೆಯುತ್ತಿತ್ತು. “ಇತಿಹಾಸ ಮರುಕಳಿಸುತ್ತದೆ’ ಎಂಬಂತೆ ಕೊರೊನಾ ಸಂದಿಗ್ಧತೆಯಲ್ಲಿ ಪುಟಾಣಿ ಮಕ್ಕಳು ಮನೆಯಲ್ಲಿಯೇ ಇರುವ ಅನಿವಾರ್ಯತೆ ಉಂಟಾದಲ್ಲಿ ಇಂತಹ ಮೌಖೀಕ ಅಭ್ಯಾಸಗಳಿಗೆ ಇಂಬು ತುಂಬುವಂತಾಗಬೇಕಿದೆ.
ಪ್ರಕೃತಿಗಿಂತ ದೊಡ್ಡ ಪಾಠಶಾಲೆ ಬೇರೊಂದಿಲ್ಲ. ಮನೆಯ ಸುತ್ತಲಿನ ಗಿಡ ಮರಗಳ ಕುರಿತು ತಿಳಿದು, ಅವುಗಳ ಆರೈಕೆಯ ಅವಕಾಶ ನೀಡುವ ಪ್ರಾಯೋಗಿಕ ಕಲಿಕೆಯ ಸದವಕಾಶ ಮಕ್ಕಳಿಗೆ ಈ ಸಮಯದಲ್ಲಿ ದೊರೆಯುವಂತಾಗಬೇಕಿದೆ.
ಶೈಕ್ಷಣಿಕ ಚಟುವಟಿಕೆಯ ಕಲಿಕಾ ನಿರಂತರತೆಗೆ ಕೊರೊನಾ ತೊಡಕು ಮಾಡಿ ದರೂ ಅದನ್ನು ಮಕ್ಕಳ ಮೇಲೆ ನಕಾರಾತ್ಮಕ ವಾಗಿ ಹೇರದೆ, ಒಂದಿಷ್ಟು ಧನಾತ್ಮಕ ಚಿಂತನೆಗಳ ಮೂಲಕ ಪಠ್ಯಪುಸ್ತಕದಿಂದಾಚೆಗೂ ಕಲಿಕೆ ಇದೆ ಎಂಬ ಸಾಧ್ಯತೆಗಳನ್ನು ಒದಗಿಸುವ ಮೂಲಕ ಆತ್ಮವಿಶ್ವಾಸ ಮೂಡಿಸಬೇಕಿದೆ. ಆ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪಾಲಕರು ಮಕ್ಕಳ ಶಿಕ್ಷಣದ ಬೆನ್ನೆಲುಬಾಗಿ ನಿಲ್ಲಲು ಅಣಿಗೊಳ್ಳಬೇಕು.
-ಭಾರತಿ ಎ., ಕೊಪ್ಪ