ಮಸ್ಕಿ: ಹೇಮರೆಡ್ಡಿ ಮಲ್ಲಮ್ಮನ ಆದರ್ಶಗಳು ಪ್ರತಿಯೊಂದು ಮನೆ-ಮನೆಗೂ ಮುಟ್ಟಿಸುವ ಕೆಲಸವಾಗಬೇಕು ಎಂದು ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ಪಟ್ಟಣದ ಭ್ರಮರಾಂಬಾ ದೇವಸ್ಥಾನದಲ್ಲಿ ನಡೆದ ಹೇಮರೆಡ್ಡಿ ಮಲ್ಲಮ್ಮರ ಜಯಂತಿ ಉದ್ಘಾಟಿಸಿ ಮಾತನಾಡಿ, ಪರಸ್ಪರ ಸ್ನೇಹ ಹಾಗೂ ವಿಶ್ವಾಸದಿಂದ ಸದೃಢ ಬದುಕು ಕಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ರೆಡ್ಡಿ ಸಮಾಜದವರು ಒಂದಾಗುವ ಮೂಲಕ ಸಮಾಜದಲ್ಲಿ ಒಗ್ಗಟ್ಟು ಮೆರೆಯಬೇಕು ಎಂದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಹೇಮರೆಡ್ಡಿ ಮಲ್ಲಮ್ಮನ ದೇವಸ್ಥಾನ ನಿರ್ಮಾಣಕ್ಕೆ 1 ಕೋಟಿ ಮುಂಜೂರು ಮಾಡಿದ್ದರು ಎಂದರು. ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಅಪ್ಪಾಜಿಗೌಡ ಪಾಟೀಲ್ ಸೇರಿದಂತೆ ಮುಖಂಡರು ಮಾತನಾಡಿದರು.
ವರರುದ್ರಮುನಿ ಸ್ವಾಮೀಜಿ, ಶಾಂತಮಲ್ಲ ಸ್ವಾಮೀಜಿ, ರೆಡ್ಡಿ ಸಮಾಜದ ಅಧ್ಯಕ್ಷ ಅಯ್ಯಣ್ಣ ನಾಗರಬೆಂಚಿ, ದೇವಸ್ಥಾನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕುಮಾರೆಪ್ಪ ಕಮತರ, ಅಧ್ಯಕ್ಷ ನಕ್ಕುಂದಿ ಶರಣೇಗೌಡ, ಧರ್ಮನಗೌಡ ಇದ್ದರು.
ಅದ್ದೂರಿ ಮೆರವಣಿಗೆ: ಹೇಮರೆಡ್ಡಿ ಮಲ್ಲಮ್ಮ ಜಯಂತಿ ನಿಮಿತ್ತ ಪಟ್ಟಣದಲ್ಲಿ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಭ್ರಮರಾಂಬಾ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ವಿವಿಧ ರಸ್ತೆಗಳಲ್ಲಿ ಸಂಚರಿಸಿತು. ಜಾನಪದ ಕಲಾ ತಂಡಗಳು ಗಮನ ಸೆಳೆದವು. ವಿಪ ಸದಸ್ಯ ಶರಣಗೌಡ ಪಾಟೀಲ್ ಬಯ್ನಾಪೂರ ಸೇರಿದಂತೆ ರೆಡ್ಡಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ದೇವಸ್ಥಾನಕ್ಕೆ ಭೂಮಿಪೂಜೆ: ಇದಕ್ಕೂ ಮುಂಚೆ ಪಟ್ಟಣದ ಪರಾಪೂರ ರಸ್ತೆಯ ವೀರೇಶ್ವರ ಲೇಔಟ್‌ನಲ್ಲಿ ಸರ್ಕಾರದ 1 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಕುಮಾರೆಪ್ಪ ಕಮತರ ನೇತೃತ್ವದಲ್ಲಿ ಭೂಮಿಪೂಜೆ ನೆರವೇರಿಸಲಾಯಿತು. ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ರೆಡ್ಡಿ ಸಮಾಜದ ಶಾಂತಮಲ್ಲ ಸ್ವಾಮೀಜಿ, ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ್, ಬಸನಗೌಡ ಬ್ಯಾಗವಟ್ ಇತರರಿದ್ದರು.