Advertisement

ಬದುಕು ಕಟ್ಟಿಕೊಳ್ಳುವ ಶಿಕ್ಷಣ ದೊರೆಯಲಿ

06:13 AM Feb 04, 2019 | Team Udayavani |

ದಾವಣಗೆರೆ: ಯುವ ಜನರಿಗೆ ಬದುಕು ಕಟ್ಟಿಕೊಳ್ಳುವ ಶಿಕ್ಷಣ ದೊರೆತಾಗ ಮಾತ್ರ ಬಹುತ್ವ ಭಾರತ ನಿರ್ಮಾಣ ಸಾಧ್ಯ ಎಂದು ಬೆಂಗಳೂರಿನ ವಿದ್ಯಾರ್ಥಿ ಬಂಧುತ್ವ ವೇದಿಕೆ ಸಂಚಾಲಕ ಅನಂತ್‌ನಾಯ್ಕ ಹೇಳಿದರು.ರೋಟರಿ ಬಾಲಭವನದಲ್ಲಿ ವಿದ್ಯಾರ್ಥಿ ಬಂಧುತ್ವ ವೇದಿಕೆ ಬಹುತ್ವ ಭಾರತ ಮತ್ತು ಶಿಕ್ಷಣ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

Advertisement

ದೇಶದೊಳಗೆ ಅಸಮಾನತೆಯ ಶಿಕ್ಷಣ ಕ್ರಮ ಇಂದಿಗೂ ಕೂಡ ಜೀವಂತವಾಗಿ ಬೇರೂರಿದೆ. ಶಿಕ್ಷಣವೆಂಬುದು ವ್ಯಾಪಾರದ ಸರಕಾಗಿದೆ. ಜನಸಾಮಾನ್ಯರ ಮಕ್ಕಳಿಗೆ ಶಿಕ್ಷಣ ಕೈಗೆಟುಕದಂತಾಗಿದೆ. ಈ ಧೋರಣೆ ಬದಲಾಗಬೇಕು. ಸರ್ಕಾರ ಸರ್ವರಿಗೂ ಸಮಾನ ಶಿಕ್ಷಣ ನೀಡುವ ಜೊತೆಗೆ ಇಂದಿನ ಯುವ ಪೀಳಿಗೆಗೆ ಬದುಕು ಕಟ್ಟಿಕೊಳ್ಳುವ ಮೌಲ್ಯಯುತ ಶಿಕ್ಷಣ ನೀಡುವಂತಾಗಬೇಕು ಎಂದರು.

ಸರ್ಕಾರ ಆರ್‌ಟಿಇ ಜಾರಿಗೆ ತಂದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹಣ ತುಂಬಿ, ಅಲ್ಲಿಗೆ ಬರುವ ಬಡ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತಾ ತಾರತಮ್ಯ ಉಂಟು ಮಾಡುತ್ತಿದೆ. ಅದರ ಬದಲು ಎಲ್ಲರಿಗೂ ಸಮಾನ ಶಿಕ್ಷಣ ದೊರಕುವಂತೆ ಮಾದರಿ ಸರ್ಕಾರಿ ಶಾಲೆಗಳನ್ನು ತೆರೆದು ಬಡವರ ಉದ್ಧಾರ ಮಾಡಬಹುದಾಗಿದೆ. ಆದರೆ, ಆಳುವ ಸರ್ಕಾರಗಳು ಈ ಕೆಲಸ ಮಾಡಲು ಸಿದ್ಧವಿಲ್ಲ. ಏಕೆಂದರೆ ಶಿಕ್ಷಣ ಸಂಸ್ಥೆಗಳೇ ಸರ್ಕಾರವನ್ನು ನಿಯಂತ್ರಿಸುವ ಶಕ್ತಿ ಹೊಂದುತ್ತಿವೆ. ಈ ವ್ಯವಸ್ಥೆ ನಿಜಕ್ಕೂ ದುರಂತ ಎಂದು ಆತಂಕ ವ್ಯಕ್ತಪಡಿಸಿದರು.

ದೇಶದ ಸಾಕಷ್ಟು ಹಳ್ಳಿಗಳಲ್ಲಿ ಪದವಿ ಪಡೆದ ನಿರುದ್ಯೋಗಿ ಯುವಕರು ಹೆಚ್ಚಾಗಿದ್ದಾರೆ. ಅವರನ್ನು ಸದ್ಬಳಕೆ ಮಾಡಿಕೊಂಡು ಉತ್ತಮವಾಗಿ ಈ ದೇಶ ಕಟ್ಟಬಹುದಾಗಿದೆ. ಹಳ್ಳಿಗಳ ಯುವಕರಿಗೆ ಸ್ವ ಉದ್ಯೋಗ, ಹೈನುಗಾರಿಕೆ, ಕೃಷಿ ಇತ್ಯಾದಿ ಕೆಲಸಕ್ಕೆ ಉತ್ತಮ ಯೋಜನೆಗಳನ್ನು ನೀಡಿದ್ದಾದರೆ, ಪ್ರಜ್ಞಾವಂತ ಯುವಕರು ಸ್ವಾವಲಂಬಿಗಳಾಗಬಹುದು. ಸಿಟಿಯತ್ತ ಕೆಲಸಕ್ಕಾಗಿ ಅಲೆಯುವುದನ್ನು ತಪ್ಪಿಸಬಹುದು ಎಂದರು.

ದೇಶದಲ್ಲಿ ಶೇ. 50 ರಷ್ಟು ಯುವಕರಿದ್ದು, ಅವರಲ್ಲಿ ವೈಚಾರಿಕ ಚಿಂತನೆ ಮೂಡಿಸುವ ಕೆಲಸವನ್ನು ಇಂದಿನ ಶಿಕ್ಷಣ ವ್ಯವಸ್ಥೆ ಮಾಡಬೇಕು. ಆದರೆ, ದೇವರು, ಧರ್ಮದ ಗಲಭೆಗಳಲ್ಲಿ ತೊಡಗುವಂತೆ ಪ್ರೇರಣೆ ನೀಡಿ ಅವರನ್ನು ಅಪರಾಧಿಗಳನ್ನಾಗಿ ಮಾಡುವಂತಹ ಸ್ಥಿತಿ ಉಂಟಾಗಿದೆ. ಇದಕ್ಕೆಲ್ಲಾ ಮೂಲ ಶಿಕ್ಷಣದ ಕೊರತೆ. ಶಿಕ್ಷಣದ ಕ್ರಮ ಸರಿಯಿದ್ದರೆ ಸಮಾಜದಲ್ಲಿ ನಿತ್ಯ ನಡೆಯುವ ಬಹುತೇಕ ಶೋಷಣೆ, ದೌರ್ಜನ್ಯಗಳನ್ನು ತಡೆಗಟ್ಟಬಹುದು ಎಂದು ಅಭಿಪ್ರಾಯಪಟ್ಟರು.

Advertisement

ದೇಶದಲ್ಲಿ ಮೊದಲು ಕಡ್ಡಾಯ ಉದ್ಯೋಗ ಕಾಯ್ದೆ ಜಾರಿಯಾಗಬೇಕು. ನಿರುದ್ಯೋಗ ಭತ್ಯೆ ನೀಡಬೇಕು. ಯುವಜನರ ಆಯೋಗ ಸ್ಥಾಪನೆ ಆಗಬೇಕು ಎಂದು ಆಗ್ರಹಿಸಿದರು. ಮಾನವ ಬಂಧುತ್ವ ವೇದಿಕೆ ಸಂಚಾಲಕ ರಾಘು ದೊಡ್ಮನಿ, ವಿದ್ಯಾರ್ಥಿ ವಿಭಾಗದ ಸಂಚಾಲಕ ಈಶ್ವರ್‌ ಅಭಿವ್ಯಕ್ತಿ, ಮಹಾಲಿಂಗಪ್ಪ ಅಲಬಾಳ, ಶಿವಕುಮಾರ್‌ ಮಾದಾಳ್‌, ರಾಮಕೃಷ್ಣ, ಭರಮಣ್ಣ ತೋಳಿ ಇತರರು ಇದ್ದರು.

ಹಳ್ಳಿ, ಪಟ್ಟಣಗಳಲ್ಲಿ ಪ್ರತಿಷ್ಠೆಗಾಗಿ ಆಡಂಬರದಿಂದ ಖರ್ಚು ಮಾಡಿ ಮಾಡುತ್ತಿರುವ ಮದುವೆ, ಬಾಡೂಟದ ಮಾರಿ ಹಬ್ಬಗಳು ಜನಸಾಮಾನ್ಯರನ್ನು ಮತ್ತಷ್ಟು ಸಾಲದ ಸುಳಿಯಲ್ಲಿ ಸಿಲುಕಿಸುತ್ತಿವೆ. ಮದುವೆ, ಜಾತ್ರೆಯ ಅಹಂ ಇನ್ನಷ್ಟು ಜನರ ಬದುಕನ್ನು ದಿವಾಳಿ ಮಾಡುತ್ತಿವೆ. ಜನರು ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು. ಸರಳ ಬದುಕು, ಆಚರಣೆ ರೂಢಿಸಿಕೊಳ್ಳಬೇಕು. ಆಗ ಮಾತ್ರ ಪ್ರತಿಯೊಬ್ಬರ ಬದುಕಿನಲ್ಲಿ ಪರಿವರ್ತನೆಯ ನೆಮ್ಮದಿಯ ಗಾಳಿ ಬೀಸಲು ಸಾಧ್ಯ.
•ಅನಂತ್‌ನಾಯ್ಕ ವಿದ್ಯಾರ್ಥಿ ಬಂಧುತ್ವ ವೇದಿಕೆ ಸಂಚಾಲಕ.

Advertisement

Udayavani is now on Telegram. Click here to join our channel and stay updated with the latest news.

Next