ಚಿಕ್ಕಮಗಳೂರು: ಮೂಡಿಗೆರೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಜೆಡಿಎಸ್ ಗೆ ನಿನ್ನೆಯಷ್ಟೆ ಬಂದಿದ್ದಾರೆ ಅವರಿಗೆ ಸ್ವಾಗತ ಆದರೆ ಅವರು ಮೊದಲು ಜೆಡಿಎಸ್ ಪಕ್ಷದಲ್ಲಿ ದುಡಿಯಲಿ ಪಕ್ಷದ ಸಿದ್ಧಾಂತವನ್ನು ತಿಳಿದುಕೊಳ್ಳಬೇಕು ಎಂದು ಮೂಡಿಗೆರೆ ಜೆಡಿಎಸ್ ಘೋಷಿತ ಅಭ್ಯರ್ಥಿ ಬಿ.ಬಿ.ನಿಂಗಯ್ಯ ಹೇಳಿದ್ದಾರೆ.
ಪಕ್ಷಕ್ಕೆ ಬಂದ ಕೂಡಲೇ ಮಣೆ ಹಾಕುವುದು ಸೂಕ್ತವಲ್ಲ. ಜೆಡಿಎಸ್ ಬಿ ಫಾರಂ ನನಗೇ ನೀಡಬೇಕೆಂದು ಇಡೀ ಮೂಡಿಗೆರೆ ಜೆಡಿಎಸ್ ಕಾರ್ಯಕರ್ತರ ಅಭಿಪ್ರಾಯವೂ ಅದೇ ಆಗಿದೆ ಎಂದು ಬಿ.ಬಿ.ನಿಂಗಯ್ಯ ಹೇಳಿದರು.
ಮೂಡಿಗೆರೆಯಲ್ಲಿ ಯಶಸ್ವಿಯಾಗಿ ಪಂಚರತ್ನ ಯಾತ್ರೆ ಮಾಡಿದ್ದೆವು .ಡಿಸೆಂಬರ್ ನಲ್ಲಿ 93 ಜನರ ಪಟ್ಟಿಯಲ್ಲಿ ನನ್ನ ಹೆಸರಿತ್ತು.ನನಗೆ ಬಿ ಫಾರಂ ನೀಡುತ್ತಾರೆಂದು ನನಗೆ ನಂಬಿಕೆ ಇದೆ.
ಈಗಾಗಲೇ ಕಷ್ಟಪಟ್ಟು ಕೊಟ್ಯಾಂತರ ರೂಪಾಯಿ ಖರ್ಚು ಮಾಡಿದ್ದೇನೆ ನನಗೇ ಬಿ ಫಾರಂ ನೀಡಬೇಕೆಂದು ಕುಮಾರಸ್ವಾಮಿಗೆ ಬಿ.ಬಿ.ನಿಂಗಯ್ಯ ಮನವಿ ಮಾಡಿದ್ದಾರೆ.
ಈಗ ಕುಮಾರಸ್ವಾಮಿಗೆ ಟಿಕೆಟ್ ಎಂಬ ಮಾತುಗಳು ಕೇಳಿ ಬರುತ್ತಿದೆ. ಹಾಗಾಗುವುದಿಲ್ಲ ಎಂದು ಭಾವಿಸಿದ್ದೇನೆ, ಕುಮಾರಸ್ವಾಮಿ ನನಗೆ ಬಿ ಫಾರಂ ನೀಡುತ್ತಾರೆ ನಾನು ಪಕ್ಷಕ್ಕಾಗಿ ದುಡಿದಿದ್ದೇನೆ ನಾನು ಗೆಲ್ಲುತ್ತೇನೆ, ನನಗೆ ಟಿಕೆಟ್ ನೀಡಬೇಕು ಎಂದರು.