ಕಲಬುರಗಿ: “ನಗರದಲ್ಲಿ 1200 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾದ ಇಎಸ್‌ಐ ಆಸ್ಪತ್ರೆ ಕಟ್ಟಡದಲ್ಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ಪಡೆದಿದ್ದಾರೆ ಎನ್ನಲಾದ ಕಮಿಷನ್ ಕುರಿತು ತನಿಖೆ ನಡೆಯಬೇಕು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕಲಬುರಗಿ ಲೋಕಸಭಾ ಚುನಾವಣೆ ಉಸ್ತುವಾರಿ ಎನ್. ರವಿಕುಮಾರ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಖರ್ಗೆ ಅವರು ತಮ್ಮ ಸುದೀರ್ಘ 50 ವರ್ಷಗಳ ರಾಜಕೀಯದಲ್ಲಿ ಅಭಿವೃದ್ಧಿ ಮಾಡಿದ್ದೇ ಆದರೆ ಈ ಭಾಗ ಏಕೆ ಹಿಂದುಳಿಯುತ್ತಿತ್ತು? ಕಮಿಷನ್ ಸಲುವಾಗಿ ಕಟ್ಟಡಗಳನ್ನು ಕಟ್ಟಲಾಗಿದೆ. ಇಎಸ್‌ಐ ಕಟ್ಟಡವನ್ನು ಮೇಲ್ಭಾಗದಿಂದ ನೋಡಿದರೆ ಖರ್ಗೆ ಎನ್ನುವ ವಿನ್ಯಾಸದಲ್ಲಿ ಕಟ್ಟಲಾಗಿದೆ.
ಇಎಸ್‌ಐ ಆಸ್ಪತ್ರೆ ಖರ್ಗೆ ಅವರ ಆಸ್ತಿ ಅಲ್ಲ. ಈ ಕುರಿತು ತನಿಖೆ ನಡೆದು ಸತ್ಯಾಂಶ ಹೊರ ಬರಲಿ’ ಎಂದರು. ಅದೇ ರೀತಿ ಬುದ್ಧ ವಿಹಾರಕ್ಕೂ ದೇಶ-ವಿದೇಶಗಳಿಂದ ಹಣದ ನೆರವು ಬಂದಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಆರು ಕೋಟಿ ರೂ. ನೀಡಲಾಗಿದೆ. ಹೀಗಾಗಿ ಬುದ್ಧ ವಿಹಾರಕ್ಕೆ ಸಂಬಂಧಪಟ್ಟಂತೆ ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದರು.
ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕರು. ಬೇರೆ ಕಡೆ ಪ್ರಚಾರಕ್ಕೆ ಹೋಗದೇ ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿದ್ದಾರೆ. ಎಲ್ಲ ಸಮುದಾಯದ ಮುಖಂಡರೂ ಕಲಬುರಗಿಗೆ ಬಂದಿದ್ದಾರೆ. ಎಲ್ಲ ಸಮುದಾಯಗಳ ಸಮಾವೇಶ ನಡೆಸಲಾಗಿದೆ. ಸೋಲಿನ ಭಯದಿಂದ ಹಳ್ಳಿ-ಹಳ್ಳಿ ಸುತ್ತುತ್ತಿದ್ದಾರೆ. ಇಷ್ಟೊಂದು ಗಂಭೀರವಾಗಿ ಈ ಹಿಂದೆ ಒಮ್ಮೆಯೂ ಚುನಾವಣೆ ಎದುರಿಸಿಲ್ಲ. ಮತದಾರರು ಸೋಲಿನ ರುಚಿ ತೋರಿಸಲಿದ್ದಾರೆ.
-ಎನ್. ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ