Advertisement

ಕಲಬುರಗಿ ಸಿಲಿಕಾನ್‌ಸಿಟಿ ಆಗಲಿ:ಮೊಯ್ಲಿ

11:36 AM Jan 08, 2018 | Team Udayavani |

ಕಲಬುರಗಿ: ಭವಿಷ್ಯದಲ್ಲಿ ತೊಗರಿ ಕಣಜ ಕಲಬುರಗಿ ಕೂಡ ಬೆಂಗಳೂರಿನ ಸಿಲಿಕಾನ್‌ ಸಿಟಿಯಂತೆ ಅಭಿವೃದ್ಧಿ ಹೊಂದಲು
ಕಾಂಗ್ರೆಸ್‌ ಸರಕಾರ ಪ್ರಯತ್ನಿಸಲಿದೆ. ಐಟಿ ಸಚಿವ ಪ್ರಿಯಾಂಕ್‌ ಖರ್ಗೆ ದಕ್ಷರು ಹಾಗೂ ಪ್ರಾಮಾಣಿಕ ಕೆಲಸಗಾರರಾಗಿದ್ದು, ಅವರ ನೇತೃತ್ವದಲ್ಲಿ ಈಗಿನಿಂದಲೇ ಕೆಲಸ ಆರಂಭವಾಗಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಎಂ. ವೀರಪ್ಪ ಮೋಯ್ಲಿ ಹೇಳಿದರು.

Advertisement

ಹೆಚ್‌ಕೆಸಿಸಿಐ ಸಭಾಂಗಣದಲ್ಲಿ ರವಿವಾರ ಮಧ್ಯಾಹ್ನ ಹೆಚ್‌ಕೆಸಿಸಿಐ ಮಧ್ಯಸ್ಥಿಕೆಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಚುನಾವಣೆ ಪ್ರಣಾಳಿಕೆ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ನಾನು ಐಟಿ ಮಂತ್ರಿಯಾಗಿದ್ದಾಗ ಬೆಂಗಳೂರು ಸಿಲಿಕಾನ್‌ ಸಿಟಿಯಾಗಲಿದೆ ಎಂದಾಗ ಆರಂಭದಲ್ಲಿ ಎಲ್ಲರೂ ನಗಾಡಿದ್ದರು. ಆದರೆ, ಈಗ ಜಗತ್ತಿನ ಎಲ್ಲ ದೇಶಗಳಿಗೆ ಬೆಂಗಳೂರು ಸಿಲಿಕಾನ್‌ ಸಿಟಿಯಾಗಿದೆ. ಅದರಂತೆ ಕಲಬುರಗಿಯೂ ಮುಂದೊಂದು ದಿನ ದೊಡ್ಡ ಸಿಲಿಕಾನ್‌ ಸಿಟಿಯಾಗಲಿದ್ದು, ಕೂಡಲೇ ತಂತ್ರಜ್ಞಾನ ಪಾರ್ಕ್‌ ಆರಂಭಿಸಿ ಯುವಕರಿಗೆ ಉದ್ಯೋಗ ಒದಗಿಸಲು ಮುಂದಾಗಬೇಕಾಗಿದೆ. ಐಟಿ ಸಚಿವ ಪ್ರಿಯಾಂಕ್‌ ತುಂಬಾ ಉತ್ಸಾಹಿಗಳಿದ್ದಾರೆ. ಅವರು ಕಾರ್ಯ ಆರಂಭಿಸಲಿ ಎಂದರು.

ಇದಕ್ಕೂ ಮುನ್ನ ದಾಲ್‌ಮಿಲ್‌ ಸಂಘದ ಅಧ್ಯಕ್ಷರು ಮಾತನಾಡಿ, ಮೋದಿ ಸರಕಾರ ಕಾರ್ಮಿಕ ವಿರೋಧಿಯಾಗಿದೆ. ದೇಶದಲ್ಲಿ ಹೆಚ್ಚು ತೊಗರಿ ಬೆಳೆಯುವ ಕಲಬುರಗಿಯಲ್ಲಿನ ದಾಲ್‌ಮಿಲ್‌ಗ‌ಳು ಸಂಕಷ್ಟಕ್ಕೆ ಸಿಲುಕಿವೆ. ನಷ್ಟದಿಂದ ಬಂದ್‌ ಆಗುತ್ತಿವೆ ಎಂದರು. 

ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಅಧ್ಯಕ್ಷ ಕಿರಣ ದೇಶಮುಖ ಮಾತನಾಡಿ, ಕಲಬುರಗಿ ಭಾಗದಲ್ಲಿ ಟ್ರಾಮಾ ಸೆಂಟರ್‌ ತೆರೆಯಬೇಕು. ಈಗಿರುವ 108ರ ಸೇವೆಯನ್ನು 30 ಕಿ.ಮೀ ಒಳಗೆ ಒದಗಿಸಲಾಗುತ್ತಿದೆ. ಆದರೆ, ಕಲಬುರಗಿಯಿಂದ ಬೆಂಗಳೂರು ಸೇರಿದಂತೆ ಇತರೆಡೆಗಳಲ್ಲಿ ರೋಗಿಗಳನ್ನು ಸಾಗಿಸಲು ಉಚಿತ ಸೇವೆ ನೀಡಬೇಕು. ಅಲ್ಲದೆ, ಹೆರಿಗೆ ಸಾವು ಹೆಚ್ಚಾಗುತ್ತಿದೆ. ಇದನ್ನು ಕಡಿಮೆ ಮಾಡಲು ಸೂಪರ್‌ಸ್ಪೆಶಾಲಿಟಿ ಆಸ್ಪತ್ರೆಗಳನ್ನು ತೆರೆಯಬೇಕು ಎಂದರು. 

ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿ, ಹಲವು ಪ್ರಥಮಗಳಿಗೆ ಹೆಸರಾಗಿರುವ ಕಲಬುರಗಿ ಭಾಗದಲ್ಲಿ ಸಂತರು, ಶರಣರು ಹಾಗೂ ದಾರ್ಶನಿಕರು ಆಗಿ ಹೋಗಿದ್ದಾರೆ. ಅವರ ಊರುಗಳನ್ನು ಸ್ಮಾರಕಗಳನ್ನು ನಿರ್ಮಾಣ ಮಾಡಬೇಕು. ಅವರ ಜೀವನಗಾಥೆಯನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಬೇಕು ಎಂದು ಹೇಳಿದರು.
 
ರಾಯಚೂರು ಕೃಷಿ ವಿವಿ ಸಿಂಡಿಕೇಟ್‌ ಸದಸ್ಯ ವೀರಣ್ಣಗೌಡ ಪರಸರೆಡ್ಡಿ ಮಾತನಾಡಿ, ಪಲ್ಸ್‌ ಮ್ಯಾಜಿಕ್‌(ಸಸ್ಯ ಪೋಷಕಾಂಶ) ನೀಡುವ ನಿಟ್ಟಿನಲ್ಲಿ 40ಲಕ್ಷ ರೂ.ಗಳನ್ನು ವಿವಿಗೆ ನೀಡಬೇಕು. ಅಲ್ಲದೆ, ಅದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್‌ ಮುಂದೆ ಬರಬೇಕು. ಜಿಲ್ಲಾ ಮಟ್ಟದಲ್ಲಿರುವ ಕೆವಿಕೆಗಳನ್ನು ಹಲವು ತಾಲೂಕುಗಳಲ್ಲಿ ಆರಂಭಿಸಲು ಯೋಜಿಸಬೇಕು. ಸಬ್ಸಿಡಿ ನೀಡುವುದಕ್ಕಿಂತ ರೈತರಿಗೆ ಅವರ ಉತ್ಪನ್ನಗಳಿಗೆ ತಕ್ಕ ಬೆಂಬಲ ಬೆಲೆ ನೀಡಬೇಕು ಎಂದರು. 

Advertisement

ರಾಜು ಜಾನೆ ಮಾತನಾಡಿ, ಕಲಬುರಗಿ ಭಾಗದಲ್ಲಿ ಕೆಎಎಸ್‌, ಐಎಎಸ್‌ ತರಬೇತಿ ಕೇಂದ್ರಗಳನ್ನು ತೆರೆಯುವ ಮೂಲಕ
ಯುವಕರಿಗೆ ಉತ್ತೇಜನ ನೀಡಲು ಕ್ರಮ ಕೈಗೊಳ್ಳಬೇಕು ಎಂದರು. ಎನ್‌ಎಸ್‌ಯುಐ ಅಧ್ಯಕ್ಷ ವಿಶಾಲ ಮಾತನಾಡಿ, ಹೈಕ ಭಾಗದಲ್ಲಿ ಕ್ರೀಡೆಗೆ ಉತ್ತೇಜನ ನೀಡಲು ಕ್ರೀಡಾಂಗಣ ಮತ್ತು ಕ್ರೀಡಾ ಅಕಾಡೆಮಿಯನ್ನು ಸ್ಥಾಪಿಸಬೇಕು ಎಂದರು.

ಹೆಚ್‌ಕೆಸಿಸಿಐ ಅಡತ ವಿಭಾಗದ ಕಾರ್ಯ ದರ್ಶಿ ಸಂತೋಷ ಲಂಗರ್‌ ಮಾತನಾಡಿ, ಇ ಟೆಂಡರ್‌ ಪ್ರಕ್ರಿಯೆ ಸರಳೀಕರಣ, ಕೃಷಿ ಆಧಾರಿತ ಉದ್ಯಮಗಳಿಗೆ ಪ್ರೋತ್ಸಾಹ, ತೊಗರಿ ಉದ್ಯಮ ನಷ್ಟದಿಂದ ಪಾರು ಮಾಡಲು ಆಮದು ನೀತಿಯಲ್ಲಿ ಬದಲಾವಣೆ ಮತ್ತು ದರ ಸ್ಥಿರತೆ ಕಾಯಲು ಹೊಸ ನೀತಿ ತರಬೇಕು ಎಂದರು. ಮಹಿಳಾ ಉದ್ಯಮಿ ಸರ್ವಮಂಗಳಾ ಪಾಟೀಲ ಮಾತನಾಡಿ, ಮಹಿಳಾ ಉದ್ಯಮಕ್ಕೆ ಉತ್ತೇಜನ ನೀಡುವಂತೆ ಮನವಿ ಮಾಡಿದರು.

ಪ್ರಶಂಸೆ: ರೈತರ ಸಾಲ ಮನ್ನಾ, ಹಾಲಿಗೆ ಪ್ರೋತ್ಸಾಹ ಧನ, ಸಹಾಯಧನದಲ್ಲಿ ತೊಗರಿ ಖರೀದಿ, 371 (ಜೆ) ಕಲಂ ಅಡಿಯಲ್ಲಿ ಕಳೆದ ನಾಲ್ಕು ವರ್ಷದಲ್ಲಿ 4500 ಕೋಟಿ ರೂ. ಗಳನ್ನು ವ್ಯಯ ಮಾಡಿದ್ದು, ಉದ್ಯೋಗ ಸೃಷ್ಟಿ ಮಾಡಿರುವುದು, ಮೀಸಲಾತಿ ಅಡಿಯಲ್ಲಿ ಮೆಡಿಕಲ್‌, ಇಂಜಿನಿಯರಿಂಗ್‌ ಸೀಟುಗಳು ಹಂಚಿದ್ದು, ಮೆಡಿಕಲ್‌ ಕಾಲೇಜು ಸ್ಥಾಪಿಸಿದ್ದು, ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹಸಿದವರಿಗೆ ಅನ್ನ ನೀಡಿರುವುದು, ಅಪೌಷ್ಟಿಕ ಮಕ್ಕಳಿಗಾಗಿ ಹಾಲು ವಿತರಣೆ ಮಾಡಿರುವುದು, ಲ್ಯಾಪ್‌ ಟ್ಯಾಪ್‌ ವಿತರಣೆ, ರೈಲು ವಿಸ್ತರಣೆ, ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡಿರುವುದು ಸೇರಿದಂತೆ ಹಲವು ಸಾಧನೆಗಳನ್ನು ಹೇಳಿಕೊಂಡ ಅವರು, ಈ ಸಾಧನೆಗಳಿಗೆ, ಅಭಿವೃದ್ಧಿಗೆ ಸಂಸದ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವರಾದ ಶರಣಪ್ರಕಾಶ ಪಾಟೀಲ ಹಾಗೂ ಪ್ರಿಯಾಂಕ್‌ ಖರ್ಗೆ ಅವರ ಕೊಡುಗೆಯನ್ನು ವೀರಪ್ಪ ಮೊಯ್ಲಿ ಪ್ರಶಂಸಿಸಿದರು. 

ಸಚಿವರಾದ ಡಾ| ಶರಣಪ್ರಕಾಶ ಪಾಟೀಲ, ಪ್ರಿಯಾಂಕ್‌ ಖರ್ಗೆ, ಶಾಸಕ ಹಾಗೂ ಗಡಿಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಬಾಬುರಾವ್‌ ಚಿಂಚನಸೂರ, ಶಾಸಕ ಉಮೇಶ ಜಾಧವ್‌, ಹೆಚ್‌ಕೆಸಿಸಿಐ ಅಧ್ಯಕ್ಷ ಸೋಮಶೇಖರ ಟೆಂಗಳಿ, ಕಾರ್ಯದರ್ಶಿ ಪ್ರಶಾಂತ ಮಾನಕರ್‌ ಇದ್ದರು..

ರೈತರಿಗೆ ನ್ಯಾಯಯುತ ಬೆಂಬಲ ಬೆಲೆ ನೀಡುವುದು, ಸ್ವಾಮಿನಾಥನ್‌ ಆಯೋಗ ವರದಿ ಜಾರಿಗೆ ತರಲು ಯೋಜಿಸುವುದು, ಈ ಭಾಗದಲ್ಲಿನ ಸಾಹಿತಿಗಳು, ಸಂತರು ಹಾಗೂ ದಾರ್ಶನೀಕರ ಜನ್ಮಸ್ಥಳವನ್ನು ಸ್ಮಾರಕವನ್ನಾಗಿಸುವ ಕೆಲಸವೂ ಆರಂಭವಾಗಬೇಕು. ಈ ಎಲ್ಲ ಅಂಶ ಗಳು ಪ್ರಣಾಳಿಕೆಯಲ್ಲಿ ಇರಲಿವೆ.  

Advertisement

Udayavani is now on Telegram. Click here to join our channel and stay updated with the latest news.

Next