Advertisement

Drought: ಮಳೆ ಬರಲಿ, ಬರ ದೂರ ಇರಲಿ-ಸೌಪರ್ಣಿಕಾ ನದಿ:ಎರಡು ತಿಂಗಳ ಮೊದಲೇ ಹಲಗೆ ಹಾಕುವ ಸ್ಥಿತಿ

12:22 AM Sep 03, 2023 | Team Udayavani |

ಕುಂದಾಪುರ: ವಾರಾಹಿ ಅನಂತರದಲ್ಲಿ ಕುಂದಾಪುರ, ಬೈಂದೂರು ಭಾಗದ ಪ್ರಮಖ ನದಿಯಾದ, ಕೊಡಚಾದ್ರಿ ಬೆಟ್ಟದಲ್ಲಿ ಹುಟ್ಟಿ, ಕೊಲ್ಲೂರು ತಟದಿಂದ ಹರಿದು ಬರುವ ಸೌಪರ್ಣಿಕಾ ದಲ್ಲೂ ನೀರಿನ ಪ್ರಮಾಣ ಗಣನೀಯವಾಗಿ ಕುಸಿ ಯುತ್ತಿದೆ. ಡಿಸೆಂಬರ್‌ನಲ್ಲಿ ಹಲಗೆ ಹಾಕುತ್ತಿದ್ದ ಅಣೆ ಕಟ್ಟುಗಳಿಗೆ ಅಕ್ಟೋಬರ್‌ನಲ್ಲಿ ಹಾಕುವ ಪರಿಸ್ಥಿತಿ ಉದ್ಭವಿಸಿದೆ.

Advertisement

ಮಲೆನಾಡ ತಪ್ಪಲಿನ ಕೊಲ್ಲೂರಿನಿಂದ ಆರಂಭ ಗೊಂಡು ತ್ರಾಸಿ, ಮರವಂತೆ, ಹೊಸಾಡುವರೆಗಿನ ಸುಮಾರು 2,400 ಹೆಕ್ಟೇರ್‌ಗೂ ಮಿಕ್ಕಿ ಕೃಷಿ ಭೂಮಿ ಈ ನದಿ ನೀರನ್ನೇ ನಂಬಿಕೊಂಡಿದೆ. ಪ್ರಸಿದ್ಧ ಧಾರ್ಮಿಕ ಕೇಂದ್ರ ಕೊಲ್ಲೂರು ದೇಗುಲ, ಅಲ್ಲಿನ ಗ್ರಾ.ಪಂ. ವ್ಯಾಪ್ತಿಗೂ ಇಲ್ಲಿನ ನೀರೇ ಆಶ್ರಯ.

ಮಳೆ ಬಾರದೇ 15 ದಿನಗಳೇ ಕಳೆದಿದ್ದು, ಕಳೆದ ವರ್ಷ ಇಷ್ಟೊತ್ತಿಗೆ ತುಂಬಿ ಹರಿಯುತ್ತಿದ್ದ ನದಿ ಯಲ್ಲಿ ನೀರಿನ ಮಟ್ಟ ತಳ ಸೇರಿದೆ. ಕೊಲ್ಲೂರಿನ ಸ್ನಾನ ಘಟ್ಟದಲ್ಲೂ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಇಳಿಮುಖವಾಗಿದೆ. ಸೌಪರ್ಣಿಕಾ ನದಿಯ ಉಪ ನದಿಗಳಾದ ಕಾಶಿಹೊಳೆ, ಅಗ್ನಿತೀರ್ಥ ಹೊಳೆಯಲ್ಲೂ‌ ನೀರಿನ ಮಟ್ಟ ಇಳಿಮುಖಗೊಂಡಿರುವುದು ಕೃಷಿಕರಲ್ಲಿ ಆತಂಕ ಮೂಡಿಸಿದೆ.
ಕೊಲ್ಲೂರು ದೇವಸ್ಥಾನದ ವತಿಯಿಂದ ಕುಡಿಯುವ ನೀರು ಪೂರೈಕೆ ಯೋಜನೆಯಡಿ ನಿರ್ಮಿಸಲಾದ 7 ಕಿಂಡಿಯ 11 ಮೀ. ಎತ್ತರದ ಸ್ವಯಂಚಾಲಿತ ಯಾಂತ್ರೀಕೃತ ಗೇಟ್‌ ಹೊಂದಿರುವ ಡ್ಯಾಂನಲ್ಲಿ ಸದ್ಯ ಹಲಗೆ ಹಾಕಿಲ್ಲ. ಆದರೆ ನೀರಿನ ಮಟ್ಟ ತೀರಾ ಕಡಿಮೆಯಿದೆ. ಪ್ರತೀ ವರ್ಷ ಡಿಸೆಂಬರ್‌ ವೇಳೆಗೆ ಹಲಗೆ ಅಳವಡಿಸುತ್ತಿದ್ದೆವು. ಈ ಬಾರಿ ಕೆಲವೇ ದಿನಗಳಲ್ಲಿ ಅಳವಡಿಸ ಬೇಕಾದೀತು ಎನ್ನುತ್ತಾರೆ ದೇಗುಲದ ಎಂಜಿನಿಯರ್‌ ಪ್ರದೀಪ್‌.

ಆಲೂರಿನ ಗುಂಡೂರಿನಲ್ಲಿ ವಾರಾಹಿ ನೀರಾವರಿ ಯೋಜನೆ ಯಿಂದ 89.98 ಕೋ. ರೂ. ವೆಚ್ಚದಲ್ಲಿ ನಿರ್ಮಿಸಿರುವ 1.02 ಟಿಎಂಸಿ ನೀರು ಸಂಗ್ರಹ ಸಾಮ ರ್ಥ್ಯದ ಅಣೆಕಟ್ಟು ಸೌಪರ್ಣಿಕಾ ನದಿಯಲ್ಲಿನ ದೊಡ್ಡ ಅಣೆಕಟ್ಟು ಆಗಿದೆ. ಇದು ಆಲೂರು, ಕಾಲೊ¤à ಡು, ಹೇರಂಜಾಲು ಗ್ರಾ.ಪಂ. ವ್ಯಾಪ್ತಿಯ 1,730 ಹೆಕ್ಟೇರ್‌ (4500 ಎಕರೆ) ಕೃಷಿ ಭೂಮಿಗೆ ನೀರುಣಿಸುತ್ತಿದೆ. 7 ಬೃಹತ್‌ ಕಿಂಡಿಯ ಸ್ವಯಂಚಾಲಿತ ಯಂತ್ರವನ್ನೊಳಗೊಂಡ ಈ ಅಣೆಕಟ್ಟುವಿನಲ್ಲಿ 10 ಮೀ. ಎತ್ತರಕ್ಕೆ 0.33 ಮಿಲಿಯನ್‌ ಕ್ಯೂಬಿಕ್‌ ಮೀಟರ್‌ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಈಗ ಹಲಗೆ ಅಳವಡಿಸಿಲ್ಲ. ಹಿಂದೆ ನವೆಂಬರ್‌- ಡಿಸೆಂಬರ್‌ನಲ್ಲಿ ಹಲಗೆ ಅಳವಡಿಸುತ್ತಿದ್ದರೆ, ಈ ಬಾರಿ ಅಕ್ಟೋಬರ್‌ನಲ್ಲಿಯೇ ಈ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ ವಾರಾಹಿ ಎಂಜಿನಿಯರ್‌ ಪ್ರಸನ್ನ ಕಾಮತ್‌.

ಸೇನಾಪುರ ಗ್ರಾಮದ ಬಂಟ್ವಾಡಿಯಲ್ಲಿ 495 ಹೆಕ್ಟೇರ್‌ ಹಾಗೂ ಆಲೂರಿನ ಹುಂತನಗೋಳಿಯಲ್ಲಿ 205 ಹೆಕ್ಟೇರ್‌ ಕೃಷಿ ಭೂಮಿಗೆ ನೀರುಣಿಸುವ ಎರಡು ಕಿಂಡಿ ಅಣೆಕಟ್ಟುಗಳಿವೆ. ಈ ಬಾರಿ ಕೆಲ ದಿನಗಳಲ್ಲೇ ಹಲಗೆ ಹಾಕುವ ಪರಿಸ್ಥಿತಿಯಿದೆ. ಇಲ್ಲಿನ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಕುಸಿದಿದ್ದು, ಗದ್ದೆಗಳಿಗೆ ನೀರುಣಿಸಲು ರೈತರು ಪ್ರಯಾಸ ಪಡುವಂತಾಗಿದೆ. ಇನ್ನು ಕೆಲವು ದಿನ ಮಳೆ ಬಾರದಿದ್ದರೆ ಗದ್ದೆ ಎಲ್ಲ ಸುಟ್ಟು ಹೋಗಿ, ಭತ್ತದ ತೆನೆ ಸುಟ್ಟು ಹೋಗಲಿದೆ ಎನ್ನುತ್ತಾರೆ ಸೌಪರ್ಣಿಕಾ ನದಿ ತಟದ ನೆರೆ ಬಾಧಿತ ಪ್ರದೇಶವಾದ ನಾವುಂದದ ಸಾಲುºಡದ ಕೃಷಿಕ ಮಂಜುನಾಥ್‌.

Advertisement

ಕೊಲ್ಲೂರಿನಿಂದ ಗಂಗೊಳ್ಳಿಯ ವರೆಗಿನ ಸೌಪರ್ಣಿಕಾ ನದಿಯುದ್ದಕ್ಕೆ 3 ಪ್ರಮುಖ ಅಣೆಕಟ್ಟುಗಳು ಸೇರಿದಂತೆ ಒಟ್ಟಾರೆ 42 ಕಿಂಡಿ ಅಣೆಕಟ್ಟುಗಳಿವೆ. ಇದರಲ್ಲಿ 25 ವಾರಾಹಿ ನಿಗಮದ ಅಧೀನದಲ್ಲಿದ್ದರೆ, ಇನ್ನುಳಿದವು ಸಣ್ಣ ನೀರಾವರಿ ಇಲಾಖೆಯದ್ದಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರಿನ ಮಟ್ಟ ಭಾರೀ ಇಳಿಕೆಯಾಗಿದೆ. ಮಳೆ ಇಲ್ಲದಿದ್ದರಿಂದ ಈಗಾಗಲೇ ಸಣ್ಣ- ಸಣ್ಣ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಲಾಗಿದೆ. ಅಕ್ಟೋಬರ್‌ನಲ್ಲಿ ಇನ್ನುಳಿದ ಅಣೆಕಟ್ಟುಗಳಿಗೂ ಹಲಗೆ ಹಾಕಲಾಗುವುದು.
– ಅರುಣ್‌ ಭಂಡಾರಿ, ಸಹಾಯಕ ಎಂಜಿನಿಯರ್‌, ಸಣ್ಣ ನೀರಾವರಿ ಇಲಾಖೆ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next