Advertisement

ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರದಿರಲಿ

01:29 AM Nov 16, 2021 | Team Udayavani |

ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಆಡಳಿತರೂಢ ಬಿಜೆಪಿ ಹಾಗೂ ವಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದು ಸದ್ಯದ ಮಟ್ಟಿಗೆ ನಿಲ್ಲುವಂತೆ ಕಾಣುತ್ತಿಲ್ಲ. ಇದು ಆಡಳಿತ ಯಂತ್ರದ ಮೇಲೂ ಪರಿಣಾಮ ಬೀರುವಂತೆ ಕಾಣಿಸುತ್ತಿದ್ದು, ಹೀಗೆ ಆಗದಂತೆ ನೋಡಿಕೊಳ್ಳಬೇಕಿದೆ.

Advertisement

ಬಿಟ್‌ ಕಾಯಿನ್‌ ಪ್ರಕರಣ ಪ್ರಸ್ತಾವದ ಅನಂತರದ ವಿದ್ಯಮಾನಗಳು ರಾಜಕೀಯ ವಲಯದಲ್ಲೂ ಸಾಕಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಇದು ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರದಂತೆ ಹಾಗೂ ಸಡಿಲವಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ.

ಐಎಎಸ್‌-ಐಪಿಎಸ್‌ ಅಧಿಕಾರಿಗಳೂ ಹಗರಣದಲ್ಲಿ ಭಾಗಿಯಾಗಿದ್ದಾರೆ. ತನಿಖೆಯಲ್ಲಿ ಕೆಲವು ಪೊಲೀಸ್‌ ಅಧಿಕಾರಿಗಳ ವೈಫ‌ಲ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿರುವುದರಿಂದ ಇದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಡಳಿತ ಯಂತ್ರದ ಮೇಲೆಯೇ ಪರಿಣಾಮ ಬೀರುವ ಸಾಧ್ಯತೆಗಳು ಇಲ್ಲದಿಲ್ಲ. ಅದರಲ್ಲೂ ಮುಖ್ಯವಾಗಿ ಬಿಟ್‌ ಕಾಯಿನ್‌ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವಲಯದಲ್ಲೇ ಹರಿದಾಡು ತ್ತಿರುವ ವದಂತಿಗೆ ಕಡಿವಾಣ ಹಾಕಬೇಕಾಗಿದೆ.

ರಾಜಕೀಯ ಅಸ್ಥಿರತೆ ಅಥವಾ ಬದಲಾವಣೆ ಅನುಮಾನ ಅಧಿಕಾರಿ ವರ್ಗಕ್ಕೆ ಬಂದರೆ ಅದು ನೇರವಾಗಿ ಆಡಳಿತ ಯಂತ್ರದ ಮೇಲೆಯೇ ಪರಿಣಾಮ ಬೀರಲಿದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಈಗಾಗಲೇ ಎರಡು ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಿಂದಾಗಿ ಹೆಚ್ಚು ಕಡಿಮೆ ಆಡಳಿತ ಯಂತ್ರ ಬಹುತೇಕ ಸ್ಥಗಿತಗೊಂಡಿತ್ತು. ಈಗ ಮತ್ತೆ ಬಿಟ್‌ ಕಾಯಿನ್‌ ಆರೋಪ-ಪ್ರತ್ಯಾರೋಪಗಳಿಂದಾಗಿ ಮತ್ತೆ ಅಧಿಕಾರವರ್ಗ ಗೊಂದಲಕ್ಕೆ ಸಿಲುಕಿದೆ.

ಇದನ್ನೂ ಓದಿ:ಆಧುನಿಕ ತಂತ್ರಜ್ಞಾನ ಆಧಾರಿತ ಕೌಶಲ್ಯ ಅಳವಡಿಸಿಕೊಳ್ಳಿ: ವೆಂಕಯ್ಯ ನಾಯ್ಡು

Advertisement

ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳು ಒಂದು ಆರೋಪದ ಸುತ್ತವೇ ಬಿದ್ದುಕೊಂಡಿರದೆ, ತಮ್ಮ ತಮ್ಮ ಇಲಾಖೆಗಳಲ್ಲಿನ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ, ಯೋಜನೆಗಳ ಪ್ರಗತಿ ಕುರಿತು ಹೆಚ್ಚು ಗಮನ ಹರಿಸಬೇಕಾಗಿದೆ. ಅದು ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳದಂತೆ ಎಚ್ಚರಿಕೆ ವಹಿಸಬೇಕಾಗಿದೆ.ಈಗಾಗಲೇ ಅಕ್ಟೋಬರ್‌-ನವೆಂಬರ್‌ ತಿಂಗಳಲ್ಲಿ ಜಾರಿಗೆಬರಬೇಕಿದ್ದ ಕೆಲವು ಯೋಜನೆಗಳು ಸಕಾಲದಲ್ಲಿ ಜಾರಿಯಾಗದೆ ಸಮಸ್ಯೆಯಾಗಿದ್ದು ಎಲ್ಲರ ಗಮನಕ್ಕೂ ಬಂದಿದೆ. ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ, ನವೆಂಬರ್‌ ಒಂದರಿಂದ ಮನೆಮನೆಗೆ ಪಡಿತರ ಸಾಮಗ್ರಿ ಎಂಬ ಯೋಜನೆ ಜಾರಿಗೆ ಬರಬೇಕಿದ್ದು, ಅದು ಇದುವರೆಗೆ ಸಾಧ್ಯವಾಗಿಲ್ಲ.

ಉಪ ಚುನಾವಣೆ ನೀತಿ ಸಂಹಿತೆ ಅನಂತರ ಇದೀಗ ವಿಧಾನಪರಿಷತ್‌ ಚುನಾವಣೆ ನೀತಿ ಸಂಹಿತೆ ನೆಪ ತೋರಿಸಿ ಕಾರ್ಯಕ್ರಮಗಳ ಜಾರಿಗೆ ನಿರಾಸಕ್ತಿ ತೋರದಂತೆ ನೋಡಿಕೊಳ್ಳಬೇಕಾಗಿದೆ. ಸರಕಾರ ಎಂಬುದು ನಿಂತ ನೀರಲ್ಲ. ಆಡಳಿತ ಯಂತ್ರಕ್ಕೆ ರಾಜಕೀಯ ಸೋಂಕು ತಾಗಬಾರದು. ಆ ಬಗ್ಗೆ ಸರಕಾರ ನಡೆಸುವವರು ಎಚ್ಚರ ವಹಿಸಲೇಬೇಕು. ಅಧಿಕಾರಶಾಹಿ ಮೈ ಮರೆಯದಂತೆ ನೋಡಿಕೊಳ್ಳಬೇಕಿರುವುದು ಶಾಸಕಾಂಗದ ಕರ್ತವ್ಯ ಕೂಡ. ಆಗ ಮಾತ್ರ ಜನಪರ ಕಾರ್ಯಕ್ರಮಗಳು ಸಕಾಲದಲ್ಲಿ ಜಾರಿ ಯಾಗಲು ಸಾಧ್ಯವಾಗುತ್ತದೆ. ಇದು ಅಗತ್ಯವೂ ಹೌದು.

Advertisement

Udayavani is now on Telegram. Click here to join our channel and stay updated with the latest news.

Next