ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಇಸ್ಲಾಂ ಹಾಗೂ ಧರ್ಮಗುರು ಸೈಯದ್ ಮೊಹಮ್ಮದ್ ತನ್ವೀರ ಪೀರಾ ಹಾಶ್ಮಿ ವಿರೋಧಿ ನಡೆ ಅನುಸರಿಸುತ್ತಾ ಬಂದಿದ್ದಾರೆ. ತಾಕತ್ತಿದ್ದರೆ ಯತ್ನಾಳ ಎನ್ಐಎ ಮೂಲಕ ತನಿಖೆ ಮಾಡಿಸಲಿ. ಒಂದೊಮ್ಮೆ ತನ್ವೀರ ಪೀರಾ ವಿರುದ್ಧ ಆರೋಪ ಸಾಬೀತಾಗದಿದ್ದರೆ ಯತ್ನಾಳ ದೇಶ ತೊರೆಯಲಿ ಎಂದೇನೂ ನಾನು ಹೇಳಲಾರೆ. ಆದರೆ ಆರೋಪ ಮಾಡಿದ ಅವರು ಆಗ ಏನು ಮಾಡುತ್ತಾರೆಂದು ಸ್ಪಷ್ಟವಾಗಿ ಹೇಳಲಿ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿರುಗೇಟು ನೀಡಿದ್ದಾರೆ.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ ಮುಸ್ಲಿಮರನ್ನು ಧ್ಷೇಷ ಮಾಡುತ್ತಿದ್ದಾರೆ. ಹುಬ್ಬಳ್ಳಿ ನಗರದಲ್ಲಿ ನಡೆದ ಕಾರ್ಯಕ್ರಮ ನೆಪ ಮಾಡಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ, ಧರ್ಮಗುರು ತನ್ವೀರ ಪೀರಾ ಹಾಶ್ಮಿ ವಿರುದ್ಧ ಐಸಿಸ್ ಸಂಪರ್ಕ ಇದೆ ಎಂದು ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿಗಳ ಜೊತೆಗಿನ ಫೋಟೋ ಹಾಕಿ ಆರೋಪಿಸಿದ್ದಾರೆ. ಯತ್ನಾಳ ಅನಗತ್ಯವಾಗಿ ಯಾರ ಚಾರಿತ್ರ್ಯ ಹರಣವನ್ನೂ ಮಾಡಬಾರದು ಎಂದು ಸಿಡುಕಿದರು.
ಭಯೋತ್ಪಾದನೆ ವಿಷಯದ ತನಿಖೆಗೆ ರಾಜ್ಯ ಸರ್ಕಾರದ ಅನುಮತಿ ಬೇಕಿಲ್ಲ. ಅಮಿತ್ ಶಾ ಬಳಿ ಹೋಗಿ ಕೇಂದ್ರದಿಂದ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.
ಜೆಡಿಎಸ್ ಪಕ್ಷದಲ್ಲಿ ಇದ್ದಾಗ ಮುಸ್ಲಿಮರ ಓಲೈಕೆ ಮಾಡುತ್ತಿದ್ದ ಯತ್ನಾಳ, ಬಿಜೆಪಿ ಸೇರುತ್ತಲೇ ಹಿಂದೂ ಹುಲಿ ಎಂದು ಬಿರುದು ಇರಿಸಿಕೊಂಡು ಓಡಾಡುತ್ತಿದ್ದಾರೆ. ನಾನು, ಅವರು ಸಮಾನತೆ ಸಾರಿರುವ ಬಸವನಾಡಿನಲ್ಲಿ ಜನಿಸಿದ್ದೇವೆ ಎಂಬುದನ್ನು ಅವರು ಅರಿಯಬೇಕು ಎಂದು ಕುಟುಕಿದರು.
ಸಮಾಜದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಶಾಸಕನಾದ ಮುಸ್ಲಿಂ, ಹಿಂದೂ ಶಾಸಕ ಎಂದು ಇರುವುದಿಲ್ಲ. ಕ್ಷೇತ್ರದ ಎಲ್ಲ ಜನರಿಗೂ ಅವರು ಶಾಸಕರೇ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶಕ್ಕಾಗಿ ಹೋರಾಡಿದ ಮುಸ್ಲಿಮರಿಗೆ ಈ ದೇಶದಲ್ಲಿ ಅವರಿಗೂ ಹಕ್ಕಿದೆ ಎಂದು ಯತ್ನಾಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ಹೈದರ್ ನದಾಫ್ ಕೊಲೆ ಪ್ರಕರಣದಲ್ಲಿ ಮೂರನೇ ಆರೋಪಿ ಆಗಿದ್ದ ತನ್ವೀರ ಪೀರಾ ಅವರ ಹೆಸರನ್ನು ಪೊಲೀಸರು ಕೈಬಿಟ್ಟಿದ್ದು, ಈ ಪ್ರಕರಣದಲ್ಲಿ ಯಾರ ಪಾತ್ರವಿದೆ ಎಂಬುದು ಪೊಲೀಸರಿಗೆ ತಿಳಿದಿದ್ದು, ತನಿಖೆಯಲ್ಲಿ ಸತ್ಯಾಂಶ ಹೊರಬರಲಿದೆ ಎಂದರು.