ಧಾರವಾಡ: ವೀರಶೈವ ಮತ್ತು ಲಿಂಗಾಯತರು ಕೂಡಿ ಸಮಾಜದಲ್ಲಿ ಇರುವ ವಿವಿಧ ಉಪ ಜಾತಿಗಳನ್ನು ಬೆಳೆಸುವ ಕಾರ್ಯ ಮಾಡಬೇಕೆ ಹೊರತು ಸಮಾಜ ಒಡೆಯುವ ಕೆಲಸವಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.
ಇಲ್ಲಿಯ ಚನ್ನಬಸವೇಶ್ವರ ನಗರದ ಲಿಂಗಾಯತ ಭವನದಲ್ಲಿ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವೈಯಕ್ತಿಕ ಹಿತಾಸಕ್ತಿಗಾಗಿ ವೀರಶೈವ-ಲಿಂಗಾಯತ ಸಮಾಜ ಒಡೆಯಲು ಹೋಗಿ ಕೆಲವರು ಈಗಾಗಲೇ ಕೈ ಸುಟ್ಟಿಕೊಂಡಿದ್ದಾರೆ. ಹೀಗಾಗಿ ವೀರಶೈವ-ಲಿಂಗಾಯತರು ಕೂಡಿಕೊಂಡು ಬೆಳೆದಾಗಲೇ ಸಮಾಜದ ಅಭಿವೃದ್ಧಿ ಸಾಧ್ಯವಿದೆ ಎಂಬ ಸತ್ಯ ಅರಿತು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಸಮಾಜ ಒಡೆಯುವ ಕೆಲಸಕ್ಕೆ ಮುಂದಾಗಿದ್ದವರಿಗೆ ಚುನಾವಣೆಯಲ್ಲಿ ಜನ ತಕ್ಕ ಉತ್ತರವನ್ನೇ ನೀಡಿದ್ದಾರೆ. ಇನ್ನು ಮುಂದೆಯಾದರೂ ಇಂತಹ ಕಾರ್ಯ ಮಾಡುವುದನ್ನು ಬಿಟ್ಟು ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಸಹಾಯ ಮಾಡಿ ಸಮಾಜದ ಬಗ್ಗೆ ಕಾಳಜಿ ವಹಿಸಬೇಕು. ಸಮಾಜ ಮುಖೀಯಾಗಿ ಕೆಲಸ ಮಾಡಲು ಅಧಿಕಾರ ಮತ್ತು ಅವಕಾಶ ಸಿಕ್ಕಾಗ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ಕಾರ್ಯ ಮಾಡಬೇಕಿದೆ. ಎಲೆಮರೆಯ ಕಾಯಿಗಳಂತಿರುವ ಸಮಾಜದ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಹಚ್ಚೆಚ್ಚು ನಡೆಯಲಿ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ 9 ಜನ ವೀರಶೈವ ಲಿಂಗಾಯತ ಸಮಾಜದವರು ಗೆದ್ದು ಬಂದಿದ್ದಾರೆ. ಯಾವ ಪಾರ್ಟಿಯನ್ನು ಸಮಾಜ ಒಪ್ಪಿಕೊಳ್ಳುತ್ತದೆ. ಆ ಸಮಾಜವನ್ನು ಪಕ್ಷ ಕೂಡ ಒಪ್ಪಿಕೊಳ್ಳಲಿದೆ. ಸಮಾಜ ವ್ಯಕ್ತಿಗಳಾದ ನಾವು ಸಮಾಜದ ಕಾಳಜಿ ಮಾಡಬೇಕು ಎಂದರು.
ಸಮಾಜದ ಮುಖಂಡ ಪ್ರೊ| ವಿ.ಸಿ. ಸವಡಿ ಮಾತನಾಡಿದರು. ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಉಪನ್ಯಾಸ ನೀಡಿದರು. ಐಎಎಸ್ ಪರಿಕ್ಷೆಯಲ್ಲಿ 17ನೇ ರ್‍ಯಾಂಕ್ ಗಳಿಸಿದ ರಾಹುಲ್ ಸಂಕನೂರ ಅವರಿಗೆ ಸಮಾಜದ ವತಿಯಿಂದ ಸನ್ಮಾನ ಮಾಡಲಾಯಿತು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು.
ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಣಜಿಗದ ಸಂಘದ ತಾಲೂಕು ಅಧ್ಯಕ್ಷ ಶೇಖರ ಕವಳಿ ಅಧ್ಯಕ್ಷತೆ ವಹಿಸಿದ್ದರು. ವಿಪ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಶಿವಬಸಪ್ಪ ಹೆಸರೂರ, ಕವಿವಿಯ ಪ್ರಭಾರಿ ಕುಲಪತಿ ಡಾ| ಎ.ಎಸ್. ಶಿರಾಳಶೆಟ್ಟರ, ಸಾವಿತ್ರಿ ಕಡಿ, ಶಿವಾನಂದ ಕವಳಿ, ಶಿವಶಂಕರ ಎಚ್. ಇದ್ದರು.