ಸಾಗರ: ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರದ್ದು ಆತ್ಮಹತ್ಯೆಯೋ, ಕೊಲೆಯೋ ಎನ್ನುವ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಅವರ ಆತ್ಮಹತ್ಯೆಗೆ ಕಾರಣವಾಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಗೃಹ ಸಚಿವ ಆರಗ ಜ್ಞಾನೇಂದ್ರ ಇದ್ದರೆ ಪ್ರಾಮಾಣಿಕ ತನಿಖೆ ಸಾಧ್ಯವಾಗುವುದಿಲ್ಲ. ಹಾಗಾಗಿ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರೂ ಸಚಿವರು ರಾಜೀನಾಮೆ ನೀಡಿ ಪ್ರಾಮಾಣಿಕ ತನಿಖೆ ನಡೆಸಬೇಕೆಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಒತ್ತಾಯಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತೋಷ್ ತಮ್ಮ ಸಾವಿಗೆ ಸಚಿವ ಈಶ್ವರಪ್ಪ ಕಾರಣ ಎಂದು ಡೆತ್‌ನೋಟ್ ಬರೆದಿಟ್ಟಿದ್ದಾರೆ. ಸಂತೋಷ್ ಕುಟುಂಬ ಸಹ ಇದಕ್ಕೆ ಪುಷ್ಠಿ ನೀಡುವ ಹೇಳಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರ ರಾಜೀನಾಮೆ ತಕ್ಷಣ ಪಡೆಯಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿಗಳು ಅವರನ್ನು ಸಚಿವ ಸಂಪುಟದಿಂದ ಕಿತ್ತು ಹಾಕಬೇಕೆಂದು ಆಗ್ರಹಿಸಿದರು.
ಹಿಂದೂ ವಾಹಿನಿ ಕಾರ್ಯಕರ್ತ ಸಂತೋಷ್ ಪಾಟೀಲ್ 108 ಕಾಮಗಾರಿಗಳನ್ನು ಮಾಡಿದ್ದು, 4 ಕೋಟಿ ರೂ. ಹಣ ಬರಬೇಕು. ಹಣ ಕೇಳಲು ಹೋದಲ್ಲಿ ಈಶ್ವರಪ್ಪ ಅವರು ಶೇ. 40 ಕಮಿಷನ್ ಕೇಳುತ್ತಿದ್ದಾರೆ. ಕಾಮಗಾರಿ ಹಣ ಬಿಡುಗಡೆ ಮಾಡಿ ಎಂದರೆ ನನ್ನ ಈಶ್ವರಪ್ಪ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಬಿಲ್ ಪಾವತಿಗೆ ಕಮೀಷನ್ ಕೇಳುತ್ತಿರುವುದರ ಕುರಿತು ಸಂತೋಷ್ ಪ್ರಧಾನ ಮಂತ್ರಿಗಳಿಗೆ ಸಹ ಪತ್ರ ಬರೆದಿದ್ದಾರೆ. ಸಂತೋಷ್ ಅವರ ಪ್ರಾಮಾಣಿಕ ವರ್ತನೆಯಿಂದ ಸಿಟ್ಟಿಗೆದ್ದ ಈಶ್ವರಪ್ಪ ಅವರಿಗೆ ಕಿರುಕುಳ ನೀಡಿದ್ದಾರೆ. ಇದರಿಂದ ಮಾನಸಿಕವಾಗಿ ತೀರ ನೊಂದಿದ್ದ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಆತ್ಮಹತ್ಯೆಗೆ ಈಶ್ವರಪ್ಪ ನೇರ ಹೊಣೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಶೇ. 40 ಕಮಿಷನ್ ಪಡೆಯುತ್ತಿರುವುದು ಜಗಜ್ಜಾಹೀರಾಗಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರು, ಪದಾಧಿ ಕಾರಿಗಳು ಹಿಂದಿನಿಂದಲೂ ಈ ಬಗ್ಗೆ ಆರೋಪ ಮಾಡುತ್ತಾ ಬಂದಿದ್ದಾರೆ. ಈ ಆರೋಪ ಈಗ ಸಂತೋಷ್ ಅವರ ಆತ್ಮಹತ್ಯೆಯ ಮೂಲಕ ಸಾಬೀತುಪಡಿಸಿದೆ. ಇಷ್ಟು ಕಮಿಷನ್ ನೀಡಿ ತಾವು ಗುಣಮಟ್ಟದ ಕಾಮಗಾರಿ ಹೇಗೆ ನಿರ್ವಹಿಸುವುದು ಎಂದು ಗುತ್ತಿಗೆದಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಸಾಗರದಲ್ಲಿ ಸಹ ಶೇ. 40ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಶಾಸಕ ಹಾಲಪ್ಪ ಹರತಾಳು ಅಭಿವೃದ್ಧಿಗೆ ನೂರಾರು ಕೋಟಿ ರೂ. ತಂದಿದ್ದೇನೆ ಎಂದು ಹೇಳುತ್ತಿದ್ದಾರೆ. ಎಷ್ಟು ಕೋಟಿ ರೂ. ಅನುದಾನ ತಂದಿದ್ದಾರೆ ಎನ್ನುವುದರ ಮೇಲೆ ಶಾಸಕರು ಪಡೆದ ಕಮಿಷನ್ ಎಷ್ಟು ಎನ್ನುವುದು ಬಯಲಾಗಬೇಕಾಗಿದೆ. ಹಣಕ್ಕಾಗಿ ಹಪಹಪಿಸುತ್ತಿರುವ ಇಂತಹ ಸರ್ಕಾರ ಇತಿಹಾಸದಲ್ಲಿಯೇ ಕಂಡಿರಲಿಲ್ಲ. ಹಿಂದೆ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಸಂದರ್ಭದಲ್ಲಿ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರ ರಾಜೀನಾಮೆಯನ್ನು ಬಿಜೆಪಿ ಕೇಳಿತ್ತು. ಅದೇ ರೀತಿ, ಸಂತೋಷ್ ಆತ್ಮಹತ್ಯೆ ತನಿಖೆ ಸಂದರ್ಭದಲ್ಲಿ ಈಶ್ವರಪ್ಪ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಶೋಕ ಬರದವಳ್ಳಿ, ಗಣಪತಿ ಹೆನಗೆರೆ, ನಾಗರಾಜ ಮಜ್ಜಿಗೆರೆ, ಡಿ.ದಿನೇಶ್, ಅರುಣ್ ಹಕ್ರೆ, ಷಣ್ಮುಖ ಸೂರನಗದ್ದೆ ಹಾಜರಿದ್ದರು.