ಹಾಸನ: ನಗರದ ಕೈಗಾರಿಕಾಭಿವೃದ್ಧಿ ಕೇಂದ್ರ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡ ಸಂತ್ರಸ್ತರ ಕುಟುಂಬದವರಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ನೀಡಬೇಕು ಎಂದು ಕೈಗಾರಿಕಾಭಿವೃದ್ಧಿ ಕೇಂದ್ರದಲ್ಲಿರುವ ಕೈಗಾರಿಕೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಸೂಚನೆ ನೀಡಿದರು.
ಕಂಪನಿಗಳ ಭರವಸೆ: ಕೈಗಾರಿಕಾಭಿವೃದ್ಧಿ ಕೇಂದ್ರದ ನಿರ್ಮಾಣಕ್ಕೆ ನೂರಾರು ಮಂದಿ ರೈತರು ತಮ್ಮ ಜಮೀನು ಕಳೆದುಕೊಂಡಿದ್ದಾರೆ. ಕೆಲವು ಕುಟುಂಬಗಳು ಜೀವನಕ್ಕೂ ಪರದಾಡುವ ಸ್ಥಿತಿಯಲ್ಲಿವೆ. ಅಂತಹಾ ಕುಟುಂಬ ವರ್ಗದವರಿಗೆ ಶೈಕ್ಷಣಿಕ ಅರ್ಹತೆಗೆ ಆಧಾರದಲ್ಲಿ ಲಭ್ಯವಿರುವ ಖಾಲಿ ಹುದ್ದೆಗೆ ನೇಮಕ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.
ಹಿಮತ್‌ಸಿಂಗ್ ಕಂಪನಿಯ ಜವಳಿ ಘಟಕವು 1,500 ಜನರ ನೇಮಕಾತಿ ಮಾಡಿಕೊಳ್ಳುವುದಾಗಿ ವಾಗ್ಧಾನ ಮಾಡಿದ್ದು, , ಜಾಕಿ ಕಂಪನಿ 275 ಜನರಿಗೆ , ಗೋಕುಲ್ ದಾಸ್ – 220 ಜನರಿಗೆ, ಷಾ ಎಕ್ಸ್‌ಪೋಟ್ಸ್ ಸಾವಿರ ಜನರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದು, ಸ್ಥಳೀಯರಿಗೇ ಉದ್ಯೋಗ ನೀಡಬೇಕೆಂದು ತಾಕೀತು ಮಾಡಲಾಗಿದೆ. ಜು. 7ರ ಒಳಗಾಗಿ ಎಲ್ಲಾ ಕೈಗಾರಿಕಾ ಘಟಕಗಳು ತಮ್ಮಲ್ಲಿ ಲಭ್ಯವಿರುವ ಹುದ್ದೆಗಳ ವಿವರ ಒದಗಿಸುವಂತೆ ಸೂಚಿಸಲಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ, ಕಾರ್ಮಿಕ ಅಧಿಕಾರಿ ಹಾಗೂ ಉದ್ಯೋಗ ವಿನಿಮಯ ಅಧಿಕಾರಿಗಳು ಕೈಗಾರಿಕೆಗಳಿಗೆ ಭೇಟಿ ನೀಡಿ ಯಾವ ಉದ್ದೇಶಕ್ಕೆ ಜಮೀನು ಪಡೆಯಲಾಗಿದೆ ಎಂಬುದನ್ನು ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸಚಿವರು ನಿರ್ದೇಶನ ನೀಡಿದರು.
Advertisement
ಉದ್ಯೋಗ ಮೇಳಕ್ಕೆ ಸಿದ್ಧತೆ: ನಗರದಲ್ಲಿ ಮುಂದಿನ ತಿಂಗಳು ನಡೆಸಲುದ್ದೇಶಿಸಿರುವ ಬೃಹತ್ ಉದ್ಯೋಗ ಮೇಳಕ್ಕೆ ಪೂರಕವಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಎಲ್ಲಾ ಕೈಗಾರಿಕೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಯ ಯುವ ಜನರಿಗೆ ಗರಿಷ್ಠ ಪ್ರಮಾಣದಲ್ಲಿ ಉದ್ಯೋಗಾವಕಾಶ ಕಲ್ಪಿಸುವಂತೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಇನ್ನು ಮೂರು ತಿಂಗಳಲ್ಲಿ ಸುಮಾರು 4 ಸಾವಿರ ಜನರಿಗೆ ಉದ್ಯೋಗ ನೀಡುವುದಾಗಿ ಕೈಗಾರಿಕೆಗಳ ಪ್ರತಿನಿಧಿಗಳು ಭರವಸೆ ನೀಡಿದ್ದಾರೆ ಎಂದು ಹೇಳಿದರು.
Related Articles
Advertisement
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕ ಶಿವಶಂಕರ್, ಜಿಲ್ಲಾಧಿಕಾರಿ ಅಕ್ರಂಪಾಷಾ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜುಗಳ ಮೂಲಸೌಕರ್ಯಕ್ಕೆ ಸಿಎಸ್‌ಆರ್ ನಿಧಿ ಬಳಕೆ:
ಹಾಸನ: ಜಿಲ್ಲೆಯಲ್ಲಿರುವ ಎಲ್ಲಾ ಕೈಗಾರಿಕಾ ಘಟಕಗಳು ಸಿಎಸ್‌ಆರ್(ಕಾರ್ಪೋರೆಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ) ನಿಧಿಯನ್ನು ಜಿಲ್ಲೆಯ ಸರ್ಕಾರಿ ಕಾಲೇಜುಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಕೈಗಾರಿಕೆಗಳು ತಮ್ಮ ಲಾಭಾಂಶದ ಶೇ.2 ರಷ್ಟನ್ನು ಸಿಎಸ್‌ಆರ್‌ನಿಧಿಗೆ ನೀಡುವುದು ಕಡ್ಡಾಯ. ಆ ನಿಧಿಯಲ್ಲಿ ಈ ವರ್ಷ ಸಂಗ್ರಹವಾಗಿರುವ ಮೊತ್ತ ಎಷ್ಟು ಎಂಬುದನ್ನು ಜು.7 ರೊಳಗೆ ಮಾಹಿತಿ ಸಂಗ್ರಹಿಸಲು ಅಪರ ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಲಾಗಿದೆ. ಹಿಂದಿನ ವರ್ಷ ಬಾಕಿ ಉಳಿದಿದ್ದರೆ ಆ ಮೊತ್ತವನ್ನೂ ಸರ್ಕಾರಿ ಕಾಲೇಜುಗಳ ಪೀಠೊಪಕರಣ, ಗ್ರಂಥಾಲಯ, ಕಂಪ್ಯೂಟರ್‌ಗಳು, ಪ್ರಯೋಗಾಲಯ, ಮತ್ತಿತರ ಮೂಲ ಸೌಕರ್ಯಗಳಿಗೆ ಬಳಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಅಕ್ರಂಪಾಷಾ ಮಾತನಾಡಿ ಪ್ರತಿಯೊಂದು ಸಂಸ್ಥೆಯೂ ತಮ್ಮ ಸ್ವಯಂ ವಿವರ, ಸಾಮರ್ಥ್ಯ, ವಹಿವಾಟು, ಲಾಭಾಂಶ, ಉದ್ಯೋಗಾವಕಾಶಗಳು ಈ ಹಿಂದೆ ಮಾಡಿರುವ ಸಮುದಾಯ ಅಭಿವೃದ್ಧಿ ಚಟುವಟಿಕೆಗಳು ನೀಡಬೇಕಾಗಿರುವ ಸಿಎಸ್‌ಆರ್ ಅನುದಾನ ಬಾಕಿ, ಈ ವರ್ಷದ ಲಭ್ಯ ಸಿಎಸ್‌ಆರ್ ನಿಧಿಯ ವಿವರಗಳೊಂದಿಗೆ ಇನ್ನೊಂದು ವಾರದೊಳಗೆ ತಮಗೆ ಮಾಹಿತಿ ಸಲ್ಲಿಸುವಂತೆ ನಿರ್ದೇಶನ ನೀಡಿದರು. ಜಿಲ್ಲೆಯ ಹೆಚ್ಚು ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರೆಯುಂತಾಗಬೆಕು ಎಂಬುದು ಜಿಲ್ಲಾ ಉಸ್ತುವಾರಿ ಸಚಿವರ ಆಶಯವಾಗಿದ್ದು ಎಲ್ಲಾ ಕೈಗಾರಿಕೆಗಳು ಅದಕ್ಕೆ ಪೂರಕವಾಗಿ ಸ್ಪಂದಿಸಬೇಕು. ಅಗತ್ಯವಿರುವ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕದಂತಹ ಮೂಲಭೂತ ಸೌಕರ್ಯಗಳನ್ನು ಜಿಲ್ಲಾಡಳಿತದಿಂದ ಒದಗಿಸಲಾಗುವುದು ಎಂದರು.
ವಿಮಾನ ನಿಲ್ದಾಣ ನಿರ್ಮಾಣ: ಅಧಿಕಾರಿಗಳೊಂದಿಗೆ ಚರ್ಚೆ
ನಗರದ ಹೊರವಲಯದಲ್ಲಿ ನಿರ್ಮಿಸಲುದ್ದೇಶಿಸಿರುವ ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಭೂಮಿಯ ಸ್ವಾಧೀನ ಪ್ರಕ್ರಿಯೆ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ವಿಶೇಷ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಅಕ್ರಂಪಾಷ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕ ಶಿವಶಂಕರ್, ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ಹಾಸನ ಉಪ ಭಾಗಾಧಿಕಾರಿ ಎಚ್.ಎಲ್. ನಾಗರಾಜ್ ಕೈಗಾರಿಕಾ ಇಲಾಖೆಯ ಹಾಗೂ ಕೈಗಾರಿಕಾಭಿವೃದ್ಧಿ ಮಂಡಳಿಯ ಹಲವು ಅಧಿಕಾರಿಗಳು ಈ ಸಭೆಗೆ ಪಾಲ್ಗೊಂಡಿದ್ದರು. ವಿಮಾನ ನಿಲ್ದಾಣ ನಿರ್ಮಾಣ ಯೋಜನೆಗೆ ಈಗಾಗಲೇ ಲಭ್ಯವಿರುವ ಹಾಗೂ ಬೇಕಾಗಿರುವ ಜಮೀನು ಒದಗಿಸುವ ಕುರಿತಂತೆ ಚರ್ಚೆ ನಡೆಯಿತು. ಹಿಂದೇಯೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡರೂ ಇನ್ನು ಪರಿಹಾರ ಮೊತ್ತ ಪಡೆದುಕೊಂಡಿರದ ಭೂಮಾಲಿಕರಿಗೆ ಹಣವನ್ನು ತೆಗೆದುಕೊಳ್ಳುವಂತೆ ಮಾಹಿತಿ ನೀಡಿ ಪತ್ರ ರವಾನಿಸುವಂತೆ ಕೆಐಡಿಬಿಯ ವಿಶೇಷ ಭೂಸ್ವಾಧೀನಾಧಿಕಾರಿಯವರಿಗೆ ಸಚಿವ ರೇವಣ್ಣ ಸೂಚನೆ ನೀಡಿದರು.