ಉಡುಪಿ: ಅಸ್ಮಿತೆಯ ಕನಸು ಮಾರಿ ಮೋಸ ಮಾಡುತ್ತಿರುವ ಪ್ರಸ್ತುತ ಸನ್ನಿವೇಶಗಳಲ್ಲಿ ಭಾರತೀಯತೆಯ ಸಾಂಸ್ಕೃತಿಕ ಬಂಧವನ್ನು ಆಧರಿಸಿಕೊಂಡು ನಮ್ಮನ್ನು ನಾವು ಕಂಡುಕೊಳ್ಳುವ ಪರಿಸ್ಥಿತಿ ಬದಲಾದರೆ ಅಸ್ಮಿತೆಯನ್ನು ಉಳಿಸಿಕೊಳ್ಳಲು ಸಾಧ್ಯವಿದೆ. ಅಸ್ಮಿತೆಯ ಹೊಸ ಸೃಷ್ಟಿಯ ಜತೆಗೆ ಹಳೆಯದನ್ನು ಪುನರ್ ಪಡೆಯಬೇಕು ಎಂದು ನಟ ಪ್ರಕಾಶ್ ಬೆಳವಾಡಿ ವಿಶ್ಲೇಷಿಸಿದರು.
ಶ್ರೀ ಅದಮಾರು ಮಠದ ಶ್ರೀಕೃಷ್ಣ ಸೇವಾ ಬಳಗದ ವತಿಯಿಂದ ಪೂರ್ಣಪ್ರಜ್ಞ ಕಾಲೇಜಿನ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಶನಿವಾರ ವಿಶ್ವಾರ್ಪಣಮ್ ಚಿಂತನ ಮಂಥನ ಮತ್ತು ಸಂವಾದದಲ್ಲಿ “ಸೃಜನಾತ್ಮಕ ಭಾರತೀಯ ಅಸ್ಮಿತೆ ಮತ್ತು ಮಣಿಪುರ ವಿದ್ಯಮಾನಗಳು’ ಎಂಬ ವಿಷಯದ ಮೇಲೆ ಅವರು ಮಾತನಾಡಿದರು.
ವಿಜ್ಞಾನದ ಜತೆಗೆ ಧರ್ಮಗುರುಗಳು ಸೇರಿಕೊಂಡು ನಮ್ಮಲ್ಲಿರುವ ಹಲವು ತಪ್ಪುಗಳನ್ನು ಸರಿಪಡಿಸುವ ಮೂಲಕ ಅಸ್ಮಿತೆಯನ್ನು ಕಾಪಾಡಬೇಕು. ಒಣಮಾತಿನಿಂದ ಯಾವುದೂ ಸಾಧ್ಯವಿಲ್ಲ. ಆಚರಣೆಗೆ ತಂದಾಗ ಪರಿವರ್ತನೆ ಸಾಧ್ಯ. ಇತ್ತೀಚಿನ ದಿನಗಳಲ್ಲಿ ಪರಿವರ್ತನೆಯ ಗಾಳಿ ಬೀಸಲಾರಂಭಿಸಿದೆ. ನಮ್ಮ ಅಸ್ಮಿತೆ ಏನು ಎಂಬುದು ತಿಳಿಯಬೇಕು ಮತ್ತು ಭಾರತವೇ ನಮ್ಮ ಅಸ್ಮಿತೆಯಾಗಬೇಕು. ಭಾರತೀಯತೆಯ ನೆಲೆಯಲ್ಲಿ ಎಲ್ಲರೂ ಒಂದಾದಾಗ ಸಹಬಾಳ್ವೆ ಬರಲಿದೆ ಎಂದು ಹೇಳಿದರು.
ಮಣಿಪುರದ ಸಮಸ್ಯೆ
ಮಣಿಪುರದ ಸಮಸ್ಯೆಯ ಮೂಲ ಹುಡುಕುವುದು ಕಷ್ಟ. ಕಮ್ಯೂನಲ್, ಟ್ರೈಬಲ್, ಲ್ಯಾಂಡ್ ಡಿಸ್ಪೂ éಟ್, ರಿಸರ್ವೇಶನ್, ಗನ್ ಹೀಗೆ ಅನೇಕ ಅಂಶಗಳು ಇದರಲ್ಲಿ ಅಡಕವಾಗಿವೆ. ಮಣಿಪುರದ ಬಗ್ಗೆ ಮಾತನಾಡುವವರು ಅಲ್ಲಿನ ಡ್ರಗ್ಸ್ ಮತ್ತು ಚೀನದ ಕೈವಾಡದ ಬಗ್ಗೆಯೂ ಬೆಳಕು ಚೆಲ್ಲಬೇಕು. ಮಣಿಪುರ ಈಗ ಪ್ರಯೋಗಾಲಯ ಶಾಲೆಯಾಗುತ್ತಿದೆ. ಹಿಂದೆ ಪಶ್ಚಿಮಬಂಗಾಲ ಪ್ರಯೋಗ ಶಾಲೆಯಾಗಿತ್ತು. ಈಗ ಬಂಗಾಲದ ಕೆಲವು ಜಿಲ್ಲೆಗಳು ಸರಿಪಡಿಸಲಾಗದ ಸ್ಥಿತಿಗೆ ಹೋಗಿ ಬಿಟ್ಟಿವೆ. ಹೀಗಾಗಿ ಮಣಿಪುರ ಹಿಂಸೆಗೆ ಸ್ಪಷ್ಟ ಕಾರಣ ಹೇಳಲು ಅಸಾಧ್ಯ. ಆದರೆ ಅಲ್ಲಿನ ಬಹುಸಂಖ್ಯಾಕ ಮೈಥೇಯ ಸಮುದಾಯಕ್ಕೆ ಕೆಲವು ಬುಡಕಟ್ಟು ಸಮುದಾಯಗಳಿಂದ ಹಾಗೂ ಮ್ಯಾನ್ಮಾರ್‌ನಿಂದ ವಲಸೆ ಬಂದವರಿಂದಲೂ ಸಮಸ್ಯೆಯಾಗಿದೆ. ಎಲ್ಲರ ಕೈಯಲ್ಲೂ ಗನ್ ಬಂದು ಸಂಘರ್ಷ ಹಿಂಸೆಗೆ ತಿರುಗಿ ಬಿಟ್ಟಿದೆ ಎಂದರು.
ಲೇಖಕ ರೋಹಿತ್ ಚಕ್ರತೀರ್ಥ ಮಾತನಾಡಿ, ಮಹಿಷಾಸುರನಿಗೆ ಹೊಸ ಬಣ್ಣ, ರೂಪ ನೀಡಿ ಅದೇ ನಮ್ಮ ಅಸ್ಮಿತೆ ಎಂದು ಜನರನ್ನು ನಂಬಿಸುವ ಪ್ರಯತ್ನವೂ ನಡೆಯುತ್ತಿದೆ. ಅಸ್ಮಿತೆ ಹಿಂದೆಂದೂ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿರಲಿಲ್ಲ. ಈಗ ಒಂದೊಂದು ವಿಷಯದಲ್ಲೂ ಅಸ್ಮಿತೆಯ ಹೆಸರಿನಲ್ಲಿ ಸಂಘರ್ಷವಾಗುತ್ತಿದೆ. ಹಿಂದೂ, ಸನಾತನಿ, ಭಾರತೀಯ ಎಂಬ ನಮ್ಮ ಅಸ್ಮಿತೆಯ ವಿರುದ್ಧವೇ ಜಗಳ ಮಾಡುವವರೂ ಇದ್ದಾರೆ. ಬಹುತ್ವದಲ್ಲಿ ಏಕತೆಯಲ್ಲ, ಏಕತೆಯಲ್ಲಿ ಬಹುತ್ವ ಇರಬೇಕು. ಸಹಿಷ್ಣತೆ ನಮ್ಮದಲ್ಲ. ನಮ್ಮ ಅಸ್ಮಿತೆಯನ್ನು ಉಳಿಸಿಕೊಂಡು, ಇನ್ನೊಬ್ಬರ ಅಸ್ಮಿತೆಯನ್ನು ಗೌರವಿಸುವುದೇ ನಮ್ಮ ಪರಂಪರೆ ಎಂದರು.
ಶ್ರೀಕೃಷ್ಣ ಸೇವಾ ಬಳಗದ ಸಂಚಾಲಕ ಗೋವಿಂದ ರಾಜ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಡಾ| ನಂದನ್ ಪ್ರಭು ಅತಿಥಿ ಪರಿಚಯ ಮಾಡಿದರು. ಡಾ| ರಾಘವೇಂದ್ರ ನಿರೂಪಿಸಿದರು.