Advertisement

Cricket: ಕ್ರಿಕೆಟ್‌ ವಿಶ್ವಕಪ್‌ ಗೆದ್ದು ಬರಲಿ ಭಾರತ

11:45 PM Oct 03, 2023 | Team Udayavani |

ಪ್ರಸಕ್ತ ವರ್ಷದ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿ ಗುರುವಾರದಿಂದ ಆರಂಭವಾಗಲಿದ್ದು ಬುಧವಾರ ಟ್ರೋಫಿಯ ಅನಾವರಣ, ಉದ್ಘಾಟನ ಕಾರ್ಯಕ್ರಮ ನಡೆಯಲಿದೆ. ಗುರುವಾರ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ಮುಖಾಮುಖೀಯಾಗಲಿವೆ. ಅ.8ರಂದು ಭಾರತ, ಆಸ್ಟ್ರೇಲಿಯಾ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ. ಅ.14ರಂದು ಬಹು ನಿರೀಕ್ಷೆಯ ಭಾರತ-ಪಾಕಿಸ್ಥಾನ ಪಂದ್ಯವಿದ್ದು, ಇದರ ಮೇಲೆ ಇಡೀ ಜಗತ್ತೇ ಕಣ್ಣಿಟ್ಟಿದೆ.

Advertisement

ಇದೇ ಮೊದಲ ಬಾರಿಗೆ ನಾಯಕನಾಗಿ ರೋಹಿತ್‌ ಶರ್ಮ ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ತಂಡ ಎಲ್ಲ ವಿಭಾಗಗಳಲ್ಲಿ ಬಲವಾಗಿದ್ದು, ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ. ಅದೂ ಅಲ್ಲದೇ  ಇತ್ತೀಚೆಗಷ್ಟೇ ಮುಗಿದ ಏಷ್ಯಾಕಪ್‌ನಲ್ಲಿ ಪ್ರಶಸ್ತಿ, ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲುವು ಭಾರತದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ ಎನ್ನುವುದಕ್ಕೆ ಅಡ್ಡಿಯೇನಿಲ್ಲ. ಬ್ಯಾಟಿಂಗ್‌ ವಿಭಾಗದಲ್ಲಿ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಶುಭಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌ ಯಾದವ್‌, ಕೆ.ಎಲ್‌.ರಾಹುಲ್‌ ಉತ್ತಮ ಫಾರ್ಮ್ನಲ್ಲಿದ್ದಾರೆ. ಆಲ್‌ರೌಂಡರ್‌ಗಳಾದ ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಶಾದೂìಲ್‌ ಠಾಕೂರ್‌ ಲಯದಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌,

ಆರ್‌.ಅಶ್ವಿ‌ನ್‌, ಕುಲದೀಪ್‌ ಯಾದವ್‌ ಅವರ ಅನುಭವವಿದೆ. ಒಟ್ಟಾರೆಯಾಗಿ ಹೇಳುವುದಾದರೆ ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ ಸೇರಿದಂತೆ ಎಲ್ಲ ವಿಭಾಗಗಳಲ್ಲಿಯೂ ಭಾರತ ಉತ್ತಮವಾಗಿಯೇ ಇದೆ.

1983 ಮತ್ತು 2011ರಲ್ಲಿ ಭಾರತ ವಿಶ್ವಕಪ್‌ ಗೆದ್ದಿದೆ. ಭಾರತವು ಆರಂಭದ 1975, 1979ರಲ್ಲಿ ಗ್ರೂಪ್‌ ಹಂತ, 1983ರಲ್ಲಿ ಚಾಂಪಿಯನ್‌, 1987ರಲ್ಲಿ ಸೆಮಿಫೈನಲ್‌, 1992ರಲ್ಲಿ ರೌಂಡ್‌ ರಾಬಿನ್‌ ಹಂತ, 1996ರಲ್ಲಿ ಸೆಮಿಫೈನಲ್‌, 1999ರಲ್ಲಿ ಸೂಪರ್‌ ಸಿಕ್ಸ್‌, 2003ರಲ್ಲಿ ರನ್ನರ್‌ ಅಪ್‌, 2007ರಲ್ಲಿ ಗ್ರೂಪ್‌ ಸ್ಟೇಜ್‌, 2011ರಲ್ಲಿ ಚಾಂಪಿಯನ್‌, 2015 ಮತ್ತು 2019ರಲ್ಲಿ ಸೆಮಿಫೈನಲ್‌ ಹಂತದ ಸಾಧನೆ ಮಾಡಿದೆ.

ಕಳೆದ ಎರಡು ವಿಶ್ವಕಪ್‌ಗ್ಳ ಸೋಲು ಭಾರತಕ್ಕೆ ಒಂದಷ್ಟು ಪಾಠ ಕಲಿಸಿದೆ. ಈ ಎರಡೂ ವಿಶ್ವಕಪ್‌ಗಳಲ್ಲಿ ವಿರಾಟ್‌ ಕೊಹ್ಲಿ ಅವರು ನಾಯಕನಾಗಿದ್ದರು. ಆಗಲೂ ತಂಡ ಸದೃಢವಾಗಿದ್ದರೂ, ಅದೃಷ್ಟ ಕೈಕೊಟ್ಟು ಸೆಮಿಫೈನಲ್‌ ಹಂತದಲ್ಲೇ ಭಾರತ ಹೊರಬಿದ್ದಿತ್ತು. ಆದರೆ ಈ ಬಾರಿ ತಂಡವೂ ಸಮಬಲದಲ್ಲಿದೆ. ಆಯ್ಕೆಯಾಗಿರುವ ಆಟಗಾರರ ಜತೆಗೆ ಮೀಸಲು ಆಟಗಾರರ ಬಹುದೊಡ್ಡ ಪಡೆಯೇ ಭಾರತದ ಜತೆಗಿದೆ.

Advertisement

ನಾಯಕನಾಗಿ ಐಪಿಎಲ್‌ನಲ್ಲಿ ಉತ್ತಮ ಸಾಧನೆ ಮಾಡಿರುವ ನಾಯಕ ರೋಹಿತ್‌ ಶರ್ಮ ಅವರಿಗೆ ಇದು ಮೊದಲ ದೊಡ್ಡ ಮಟ್ಟದ ಕೂಟ. ಅಂದರೆ ಐಪಿಎಲ್‌ನಲ್ಲಿ ಐದು, ಚಾಂಪಿಯನ್ಸ್‌ ಟ್ರೋಫಿ ಟಿ20, ಏಷ್ಯಾ ಕಪ್‌ ಎರಡು ಬಾರಿ ಮತ್ತು ನಿಧಾಸ್‌ ಟ್ರೋಫಿಯನ್ನು ಒಮ್ಮೆ ಗೆದ್ದಿದ್ದಾರೆ. ಇವರ ನಾಯಕತ್ವದಲ್ಲಿ ಒಟ್ಟು 10 ಬಾರಿ ಆಡಲಾಗಿದ್ದು, ಒಂಬತ್ತು ಬಾರಿ ಕಪ್‌ ಗೆದ್ದಿದ್ದಾರೆ. ಒಮ್ಮೆ ಮಾತ್ರ ಅವರು ಸೋತಿದ್ದಾರೆ. ಅಂದರೆ ಇದೇ ವರ್ಷ ಆಸ್ಟ್ರೇಲಿಯ ವಿರುದ್ಧ ನಡೆದ ಐಸಿಸಿ ಟೆಸ್ಟ್‌ ವಿಶ್ವಕಪ್‌ ಅನ್ನು ಮಾತ್ರ ಅವರು ಸೋತಿದ್ದಾರೆ.  ಈ ದಾಖಲೆಗಳನ್ನು ನೋಡಿದರೆ ನಾಯಕನಾಗಿ ರೋಹಿತ್‌ ಶರ್ಮ ಅತ್ಯಂತ ಯಶಸ್ವಿಯಾಗಿದ್ದಾರೆ. ಇದೇ ಯಶಸ್ಸಿನ ದಾಖಲೆಯನ್ನು ವಿಶ್ವಕಪ್‌ನಲ್ಲೂ ಮುಂದುವರಿಸುತ್ತಾರಾ ಎಂಬುದನ್ನು ನೋಡಬೇಕಾಗಿದೆ. ಅಲ್ಲದೆ ಇಡೀ ತಂಡವೇ ರೋಹಿತ್‌ ಶರ್ಮ ಅವರ ಬೆನ್ನಿಗೆ ನಿಂತಿದ್ದು, ತವರಿನ ಬಲವೂ ಇದೆ. ಹೀಗಾಗಿ ಇಡೀ ದೇಶವೇ ಭಾರತ ಕಪ್‌ ಗೆಲ್ಲಲಿ ಎಂದು ಹಾರೈಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next