Advertisement

ಭಾರತ ಖಡಕ್‌ ನಿಲುವು ಪ್ರದರ್ಶಿಸಲಿ

09:22 PM Sep 03, 2018 | Team Udayavani |

ಹೊಸ ಮಾದರಿ ಮಾತುಕತೆಯ ಮೂಲ ಯೋಜನೆ ಪ್ರಕಾರ ಜು.6ರಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅಮೆರಿಕದ ಪೆಂಟಗನ್‌ನಲ್ಲಿ ಅಲ್ಲಿನ ರಕ್ಷಣಾ ಸಚಿವ ಜೇಮ್ಸ್‌ ಮ್ಯಾಟಿಸ್‌ ಜತೆಗೆ ಮಾತುಕತೆ ನಡೆಸಬೇಕಾಗಿತ್ತು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅಮೆರಿಕಕ್ಕೆ ಬಂದು ಮಾತುಕತೆ ಮುಂದುವರಿಸುವಂತೆ ಸೂಚನೆ ಇದ್ದರೂ, ಕೇಂದ್ರ ಒಪ್ಪಿರಲಿಲ್ಲ. ಮೂಲ ಯೋಜನೆಯನ್ನು ಮೋದಿ ಬಯಸಿದ್ದರೂ ಟ್ರಂಪ್‌ ಸರ್ಕಾರದ ಪ್ರಸ್ತಾಪ ತಿರಸ್ಕರಿಸಿತ್ತು.

Advertisement

ಅದು ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ದಿನಗಳು. 2003 ಜು.14ರಂದು ನವದೆಹಲಿಯಲ್ಲಿ ಭದ್ರತಾ ವ್ಯವಹಾರಗಳಿಗಾಗಿನ ಕೇಂದ್ರ ಸಂಪುಟ ಸಮಿತಿ (ಸಿಸಿಎಸ್‌ಎ)ಸಭೆ ನಡೆಯುವುದರಲ್ಲಿತ್ತು. ಪ್ರಧಾನಿಯಾಗಿದ್ದ ವಾಜಪೇಯಿಯವರು ಬಂದು ಕುಳಿತು, “ನಮ್ಮ ಭಾರತದ ಸೈನಿಕರನ್ನು ಮತ್ತು ಆಯುಧಗಳನ್ನು ಬಳಸಬೇಕೇ?’ ಎಂದು ಪ್ರಶ್ನಿಸಿದರು. ಅದಕ್ಕಿಂತ ಮೊದಲು ಅಮೆರಿಕದ ರಕ್ಷಣಾ ಸಚಿವರಾಗಿದ್ದ ಡೊನಾಲ್ಡ್‌ ರಮ್ಸ್‌ ಫೆಲ್ಡ್‌ ನವದೆಹಲಿಗೆ ಬಂದು ವಾಜಪೇಯಿ ಮತ್ತು ಕೇಂದ್ರದ ನಾಯಕರ ಜತೆಗೆ ಮಾತುಕತೆ ನಡೆಸಿ ಇರಾಕ್‌ಗೆ ಭಾರತದ ಸೈನಿಕರನ್ನು ಕಳುಹಿಸತಕ್ಕದ್ದು ಎಂದು ಪರೋಕ್ಷ ಫ‌ರ್ಮಾನು ಹೊರಡಿಸಿ ಹೋಗಿದ್ದರು. ಆದರೆ ಪ್ರತಿಪಕ್ಷಗಳ ನಾಯಕರು, ಸೇನೆಯ ವಿವಿಧ ಹಂತದ ಅಧಿಕಾರಿಗಳ ಜತೆಗೆ ಸಮಗ್ರ ಸಮಾಲೋಚನೆ ನಡೆಸಿದ ಬಳಿಕ ನಡೆದ ಸಿಸಿಎಸ್‌ಎ ಸಭೆಯಲ್ಲಿ ಪ್ರಧಾನಿಯಾಗಿದ್ದ ವಾಜಪೇಯಿ “ಸೇನೆ ಕಳುಹಿಸಬೇಕೇ’ ಎಂದು ಪ್ರಶ್ನಿಸಿದ್ದರು. ಅಲ್ಲಿಯೂ ಬಿರುಸಿನ ಸಮಾಲೋಚನೆ ನಡೆದು “ಅಮೆರಿಕದ ಒತ್ತಡಕ್ಕೆ ಮಣಿದು ಇರಾಕ್‌ಗೆ ಸೇನೆ ಕಳುಹಿಸುವುದು ಬೇಡ’ ಎಂಬ ನಿರ್ಧಾರ ಕೈಗೊಳ್ಳಲಾಗಿತ್ತು. 

ಅದೇ ಮಾದರಿಯ ನಿಲುವನ್ನು ಅಮೆರಿಕ ಅಲ್‌ ಖೈದಾ ಸಂಘಟನೆಯನ್ನು ಸದೆ ಬಡಿಯಲು ಅಫ್ಘಾನಿಸ್ತಾನದಲ್ಲಿ ನೆರವಾಗಲು ಭಾರತದ ಸೇನೆ ಕಳುಹಿಸಬೇಕೆಂದು ಅಮೆರಿಕ ಸರ್ಕಾರ ಸೂಚಿಸಿದ್ದಾಗಲೂ, ರಾಜತಾಂತ್ರಿಕ ಪ್ರೌಢಿಮೆಯಿಂದ ಅದನ್ನು ನಿರಾಕರಿಸಿದ್ದರು.

ಇಷ್ಟೆಲ್ಲ ವಿವರಣೆ ಏಕೆಂದರೆ ಸೆ. 6ರಂದು ನಡೆಯಲಿರುವ ಅಮೆರಿಕ ಮತ್ತು ಭಾರತ ಮತ್ತು ನಡುವಿನ 2+2 ಮಾತುಕತೆಗೆ ಪೂರಕವಾಗಿ. ಇದೇ ಮೊದಲ ಬಾರಿಗೆ ಎರಡೂ ದೇಶಗಳ ವಿದೇಶಾಂಗ ಮತ್ತು ರಕ್ಷಣಾ ಸಚಿವರು ಮಾತುಕತೆ ನಡೆಸಲಿದ್ದಾರೆ. 

ಇದುವರೆಗೆ ಎರಡೂ ದೇಶಗಳ ನಡುವೆ ವ್ಯೂಹಾತ್ಮಕ ಮತ್ತು ವಾಣಿಜ್ಯ ವ್ಯವಹಾರಗಳಿಗೆ  ವಿದೇಶಾಂಗ ಮತ್ತು ವಾಣಿಜ್ಯ ಸಚಿವರು ಮಾತುಕತೆ ನಡೆಸುತ್ತಿದ್ದರು. ಮುಂದಿನ ದಿನಗಳಲ್ಲಿ ಅದರ ಬದಲಾಗಿ ಎರಡೂ ರಾಷ್ಟ್ರಗಳ ಸಚಿವರು ಒಟ್ಟಿಗೇ ಕುಳಿತು ಸಂಬಂಧ ಗಟ್ಟಿಮಾಡಿಕೊಳ್ಳುವ ಬಗ್ಗೆ ನಡೆಯುವ ಮಾತುಕತೆ ಇದಾಗಲಿದೆ. ಅದಕ್ಕಾಗಿ ರಾಜತಾಂತ್ರಿಕವಾಗಿ 2+2 ಮಾತುಕತೆ ಎಂದು ಹೆಸರಿಸಲಾಗಿದೆ. ಭಾರತ ಸರ್ಕಾರ ಇದೇ ಮೊದಲ ಬಾರಿಗೆ ಇಂಥ ಹೊಸ ರೀತಿಯಲ್ಲಿ ಒಂದು ದೇಶದ ಜತೆಗೆ ರಾಜತಾಂತ್ರಿಕವಾಗಿ ವ್ಯವಹರಿಸುತ್ತಿದೆ. 

Advertisement

ಬಹು ಚರ್ಚಿತ ಮತ್ತು ಜುಲೈನಲ್ಲಿ ನಡೆಯಬೇಕಾಗಿದ್ದ ಮಾತುಕತೆ ಈ ತಿಂಗಳಲ್ಲಿ ನಡೆಯಲಿದೆ. ಜುಲೈನಲ್ಲಿ ನಡೆಯಬೇಕಾಗಿದ್ದ ಮಾತುಕತೆ ಯಾವ ಕಾರಣಕ್ಕಾಗಿ ರದ್ದಾಗಿತ್ತು ಎಂಬ ಬಗ್ಗೆ ಅಮೆರಿಕ, ಭಾರತ ಅಧಿಕೃತ ಕಾರಣಗಳನ್ನು ನೀಡಿಲ್ಲ. ಆ ಸಂದರ್ಭದಲ್ಲಿ ಅಮೆರಿಕ ವಿದೇಶಾಂಗ ಸಚಿವ ಮೈಕ್‌ ಪೊಂಪೊÂà ಉತ್ತರ ಕೊರಿಯಾ ಭೇಟಿ, ಅಧ್ಯಕ್ಷ ಟ್ರಂಪ್‌ ಹೊಂದಿದ್ದ ಇತರ ಕಾರ್ಯ ಬಾಹುಳ್ಯಗಳಿಂದಾಗಿ ಜುಲೈನಲ್ಲಿ ಮಾತುಕತೆ ನಡೆದಿರಲಿಲ್ಲ ಎಂದಿದ್ದರು.

ಹೊಸ ಮಾದರಿ ಮಾತುಕತೆಯ ಮೂಲ ಯೋಜನೆ ಪ್ರಕಾರ ಜು.6ರಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅಮೆರಿಕದ ಪೆಂಟಗನ್‌ನಲ್ಲಿ ಅಲ್ಲಿನ ರಕ್ಷಣಾ ಸಚಿವ ಜೇಮ್ಸ್‌ ಮ್ಯಾಟಿಸ್‌ ಜತೆಗೆ ಮಾತುಕತೆ  ನಡೆಸಬೇಕಾಗಿತ್ತು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅಮೆರಿಕಕ್ಕೆ ಬಂದು ಮಾತುಕತೆ ಮುಂದುವರಿಸುವಂತೆ ಸೂಚನೆ ಇದ್ದರೂ, ಅದನ್ನು ಕೇಂದ್ರ ಸರ್ಕಾರ ಒಪ್ಪಿರಲಿಲ್ಲ. ಹೊಸ ಮಾದರಿಯ ಮೂಲ ಯೋಜನೆಯನ್ನು ಉಳಿಸಿಕೊಳ್ಳಲು ಮೋದಿ ಸರ್ಕಾರ ಬಯಸಿ, ಟ್ರಂಪ್‌ ಸರ್ಕಾರದ ಪ್ರಸ್ತಾಪ ತಿರಸ್ಕರಿಸಿತ್ತು.

ಮಾತುಕತೆಯಲ್ಲಿ ಚರ್ಚೆಗೆ ಬರುವ ಪ್ರಧಾನ ವಿಚಾರವೇ ರಷ್ಯಾದಿಂದ ನಾವು ಖರೀದಿಸಲು ಉದ್ದೇಶಿಸಿದ ಎಸ್‌-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯೇ ಪ್ರಮುಖವಾಗಿ ಪ್ರಸ್ತಾಪವಾಗಲಿದೆ. ಹಾಲಿ ಯೋಜನೆ ಪ್ರಕಾರ ಖರೀದಿ ವಿಚಾರಕ್ಕೆ ಅಗತ್ಯವಾಗಿರುವ ಪೂರ್ವ ಪ್ರಾಥಮಿಕ ಹಂತದಿಂದ ಹಿಡಿದು, ವ್ಯವಹಾರ ಮಾಡಬಹುದು ಎಂಬಲ್ಲಿಯ ವರೆಗಿನ ಮಾತುಕತೆಗಳು ಪೂರ್ತಿಯಾಗಿವೆ. ಅಕ್ಟೋಬರ್‌ನಲ್ಲಿ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನವದೆಹಲಿಗೆ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಸಹಿ ಹಾಕುವ ಕಾರ್ಯಕ್ರಮ ಇರಬಹುದೆಂದು ನಿರೀಕ್ಷಿಸಲಾಗಿದೆ. ಅದು ಬರೋಬ್ಬರಿ 39 ಸಾವಿರ ಕೋಟಿ ರೂ. ಮೌಲ್ಯದ ಡೀಲ್‌. ಸಿರಿಯಾದಲ್ಲಿನ ಆಂತರಿಕ ಯುದ್ಧ ಮತ್ತು ಅಮೆರಿಕ ಅಧ್ಯಕ್ಷೀಯ ಚುನಾವಣೆಗಳಲ್ಲಿನ ವಿವಾದದ ಬಳಿಕ ರಷ್ಯಾ ಜತೆಗೆ ಹೇಳುವಂಥ ಸಿಹಿ ಸಂಬಂಧವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇಟ್ಟುಕೊಂಡಿಲ್ಲ. ಅದಕ್ಕಾಗಿಯೇ ಆ.29ರಂದು ಅಮೆರಿಕ ರಕ್ಷಣಾ ಇಲಾಖೆ ಕೇಂದ್ರ ಕಚೇರಿ ಪೆಂಟಗನ್‌ನ ಹಿರಿಯ ಅಧಿಕಾರಿ ರಂಡಾಲ್‌ ಸ್ಕ್ರಿವರ್‌ ಭಾರತ ರಷ್ಯಾದಿಂದ ಕ್ಷಿಪಣಿ ಖರೀದಿಸುವುದಿದ್ದರೆ ಅದಕ್ಕೆ ವಿನಾಯಿತಿ ನೀಡಬೇಕಾಗಿಲ್ಲ ಎಂದು ಪ್ರಕಟಿಸಿದ್ದಾರೆ. ಅಮೆರಿಕ ವಿಶ್ವಕ್ಕೆ ತಿಳಿಸುವ ನಿಯಮದ ಪ್ರಕಾರ ಅದು ನಿಷೇಧ ಅಥವಾ ದಿಗ್ಬಂಧನೆ ವಿಧಿಸುವ ಯಾವುದೇ ರಾಷ್ಟ್ರದ ಜತೆಗೆ ವ್ಯವಹಾರ ನಡೆಸಿದಲ್ಲಿ, ಅದರ ಮೇಲೂ ದಿಗ್ಬಂಧನೆ, ನಿಷೇಧ ಹೇರಬಹುದು ಎಂಬ ಎಚ್ಚರಿಕೆಯನ್ನು ಈಗಾಗಲೇ ನೀಡಲಾಗಿದೆ. 

ಆದರೆ ಈ ವಿಚಾರವನ್ನು ಮಾತುಕತೆ ವೇಳೆ ಕೇಂದ್ರ ಸಚಿವರಿಬ್ಬರು ಅಮೆರಿಕ ಸರ್ಕಾರದ ಜತೆ ಪ್ರಸ್ತಾಪ ಮಾಡಲಿದ್ದಾರೆ. 2017ರ ಆ.2ರಂದು ಟ್ರಂಪ್‌ ಸಹಿ ಹಾಕಿದ ಅಮೆರಿಕದ ಎದುರಾಳಿಗಳನ್ನು ದಿಗ್ಬಂಧನದ ಮೂಲಕ ನಿಯಂತ್ರಿಸುವ ಕಾಯ್ದೆ (ಸಿಎಎಟಿಎಸ್‌ಎ) ಯ ಅನ್ವಯ ಭಾರತದ ಮೇಲೆ ನಿಷೇಧ ಹೇರುವ ಸಾಧ್ಯತೆ ಇದೆ. ಅದರ ಪ್ರಕಾರ ನಿಷೇಧ, ದಿಗ್ಬಂಧನಕ್ಕೆ ಗುರಿಯಾಗಿರುವ ರಷ್ಯಾ ಜತೆಗೆ ರಕ್ಷಣಾ ಖರೀದಿ ನಡೆಸಿದರೆ, ಅದರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ, ಮಾತುಕತೆ ವೇಳೆ ಈ ಅಂಶ ಯಾವ ರೀತಿ ಚರ್ಚೆಗೆ ಬರುತ್ತದೆ ಎನ್ನುವುದು ಗಮನಾರ್ಹ.

ಮಾತುಕತೆಯಲ್ಲಿ ದಕ್ಷಿಣ ಏಷ್ಯಾ ವಲಯದಲ್ಲಿ ಚೀನಾದ ಪ್ರಭಾವಳಿ ವೃದ್ಧಿಸುತ್ತಿರುವುದು ಮತ್ತು ವಿವಿಧ ದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ನೆಪದಲ್ಲಿ ಕೋಟ್ಯಂತರ ರೂ.ಹೂಡಿಕೆ ಮಾಡಿ ಅದನ್ನು ಸಾಲದ ಸುಳಿಗೆ ಸಿಲುಕಿಸುವ ಇರಾದೆಯ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆ ಇದೆ. ಅಮೆರಿಕವೇ ಈ ಬಗ್ಗೆ ಮೊದಲು ಸಂಶಯ ವ್ಯಕ್ತಪಡಿಸಿತ್ತು. ನವಾಜ್‌ ಷರೀಫ್ ಪಾಕ್‌ ಪ್ರಧಾನಿಯಾಗಿದ್ದಾಗ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜತೆಗೆ ಸಹಿ ಹಾಕಲಾಗಿದ್ದ ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಮೊತ್ತವೇ 50 ಸಾವಿರ ಕೋಟಿ ರೂ. ಶ್ರೀಲಂಕಾದಲ್ಲಿ ಮಹಿಂದ ರಾಜಪಕ್ಸೆ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಕೋಟ್ಯಂತರ ರೂ. ಮೊತ್ತದಲ್ಲಿ ಮೂಲ ಸೌಕರ್ಯಗಳ ಯೋಜನೆಗಳಲ್ಲಿ ಹೂಡಿಕೆ ಮಾಡಿದೆ. ಹೀಗಾಗಿಯೇ ಹಂಬಂತೋಟಾ ಬಂದರು ನಿರ್ಮಾಣ ಗುತ್ತಿಗೆ ಮತ್ತು 99 ವರ್ಷಗಳ ಕಾಲ ಅದನ್ನು ಭೋಗ್ಯಕ್ಕೆ ಪಡೆದುಕೊಂಡಿದೆ. ಇನ್ನು ಇತ್ತೀಚೆಗಷ್ಟೇ ಅಧಿಕಾರಕ್ಕೆ ಬಂದಿರುವ ಮಲೇಷ್ಯಾ ಸರ್ಕಾರ ಚೀನಾದ ಯೋಜನೆಗಳನ್ನು ಸಾರಾಸಗಟಾಗಿ ಬೇಡವೆಂದಿದೆ.

ಚೀನಾವನ್ನು ತಡೆಯಬೇಕಾದದ್ದು ಹೌದು. ಆದರೆ ಅದರ ಮೂಲಕ ಅಮೆರಿಕ ಹಿತಾಸಕ್ತಿ ಪಾರಮ್ಯ ಮೆರೆಯಬಾರದು. ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿನ ನಿರ್ಮಾನುಷ ದ್ವೀಪಗಳಲ್ಲಿ ಈಗಾಗಲೇ ಸೇನಾ ನೆಲೆಗಳನ್ನು ಸ್ಥಾಪಿಸಿದೆ. ಜತೆಗೆ ಮಾರಿಷಸ್‌ನಲ್ಲಿ ಕೂಡ ಅದು ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿರುವುದು ಭಾರತಕ್ಕೆ ಸವಾಲು. ಹೊಸ ಮಾದರಿ ಮಾತುಕತೆ ಮೂಲಕ ಚೀನಾದ ಪಾರಮ್ಯಕ್ಕೆ ತಡೆ ಹಾಕುವುದು ಹೇಗೆ ಎಂಬ ಬಗ್ಗೆ ದೇಶದ ರಾಜತಾಂತ್ರಿಕ ಪರಿಣಿತರು ಯೋಜಿಸಬೇಕಾಗಿದೆ. ಚೀನಾ ಮಟ್ಟ ಹಾಕಲು ಟ್ರಂಪ್‌ ಸರ್ಕಾರ ಸಿದ್ಧಪಡಿಸಿದ ಯೋಜನೆಯ ಲಾಂಚಿಂಗ್‌ ಪ್ಯಾಡ್‌ ಭಾರತ ಖಂಡಿತವಾಗಿಯೂ ಆಗಲೇ ಬಾರದು. ಪೆಂಟಗನ್‌ನ ಹಿರಿಯ ಅಧಿಕಾರಿ ರಂಡಾಲ್‌ ಸ್ಕ್ರಿವರ್‌ ಮಾತುಕತೆಯಲ್ಲಿ ಚೀನಾ ಪ್ರಮುಖವಾಗಿ ಪ್ರಸ್ತಾಪವಾಗಲಿದೆ ಎಂದು ಹೇಳಿರುವುದು ಅದರ ಮುನ್ನರಿವನ್ನೇ ತಿಳಿಯಪಡಿಸುತ್ತದೆ. 

ರಷ್ಯಾ ಜತೆಗೆ ಅಮೆರಿಕ ಜಗಳವಾಡಿರುವಂತೆಯೇ ಚೀನಾ ಜತೆಗೆ ಕೂಡ ಟ್ರಂಪ್‌ ನೇತೃತ್ವದ ಸರ್ಕಾರ ಕಿತ್ತಾಡುತ್ತಿದೆ. ಚೀನಾದಿಂದ ಅಮೆರಿಕಕ್ಕೆ ಬರುವ ಎಲ್ಲಾ ಸರಕು ಮತ್ತು ಸೇವೆಗಳ ಮೇಲೆ ಸುಂಕದ ಮೇಲೆ ಸುಂಕ ವಿಧಿಸಿದೆ. ಅದಕ್ಕೆ ಪ್ರತಿಯಾಗಿ ಚೀನಾ ಕೂಡ ಅಮೆರಿಕಕ್ಕೆ ಪ್ರತಿ ಸುಂಕ ವಿಧಿಸಿದೆ. ಅದಕ್ಕಿಂತ ಮೊದಲು ಅಮೆರಿಕ ಸರ್ಕಾರ ಭಾರತದ ಉಕ್ಕು ಮತ್ತು ಅಲ್ಯುಮಿನಿಯಂ ಉತ್ಪನ್ನಗಳ ಮೇಲೂ ತೆರಿಗೆ ಹೇರಲಾಗಿತ್ತು. 

ಈ ಮಾತುಕತೆ ಎರಡೂ ದೇಶಗಳ ನಡುವಿನ ಬಾಂಧವ್ಯ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಮುಂದಿನ ದಿನಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಉತ್ತಮ ದಿಕ್ಕಿನತ್ತ ಕೊಂಡೊಯ್ಯಲಿದೆ ಎಂದು ಹೇಳಲಾಗುತ್ತಿದೆ. ಮತ್ತೂಂದು ಗಮನಾರ್ಹ ಅಂಶವೆಂದರೆ ಯುಪಿಎ ಅವಧಿಯಲ್ಲಿ ಸಹಿ ಹಾಕಲಾಗಿದ್ದ ಭಾರತ -ಅಮೆರಿಕ ಪರಮಾಣು ಒಪ್ಪಂದ ಏನಾಗಿದೆ ಎಂಬುದರ ಬಗ್ಗೆ ಕೂಡ ಕೊಂಚ ಗಮನ ಹರಿಸುವುದೊಳಿತು.

ಇರಾನ್‌ ಜತೆಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಮಾಡಿಕೊಂಡ ಅಣ್ಣ$Ìಸ್ತ್ರ ತಡೆ ಒಪ್ಪಂದ ಸರಿಯಾಗಿಲ್ಲವೆಂದು ಟ್ರಂಪ್‌ ಅದನ್ನು ರದ್ದು ಮಾಡಿದ್ದಾರೆ. ಜತೆಗೆ ಮುಂದಿನ ನವೆಂಬರ್‌ ಒಳಗಾಗಿ ಇರಾನ್‌ ಜತೆಗೆ ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳು ವಹಿವಾಟು ನಿಲ್ಲಿಸಬೇಕು ಎಂದು ತಾಕೀತು ಮಾಡಿದ್ದಾರೆ. ಇರಾನ್‌ ದೇಶಕ್ಕೆ 2 ನೇ ಅತ್ಯಂತ ದೊಡ್ಡ ಕಚ್ಚಾ ತೈಲ ಪೂರೈಕೆ ಮಾಡುವ ರಾಷ್ಟ್ರ. ಜತೆಗೆ ಚಬಹಾರ್‌ ಬಂದರು ಅಭಿವೃದ್ಧಿ ಯೋಜನೆಗೆ ತೊಡಕಾಗಲಿದೆ. ಅದರ ಯೋಜನೆಯ ಒಟ್ಟು ಮೊತ್ತ 24 ಸಾವಿರ ಕೋಟಿ ರೂ. ಈ ಪೈಕಿ ಹಲವು ಹಂತದ ಕಾಮಗಾರಿಗಳು ಆರಂಭವಾಗಿವೆ. ಅದೂ ಕೂಡ ತೂಗುಯ್ನಾಲೆ ಎದುರಿಸುವ ಸ್ಥಿತಿ ಬರಲಿದೆ. 

ಒಟ್ಟಿನಲ್ಲಿ ಅಮೆರಿಕ ಸರ್ಕಾರ ಭಾರತದ ಮೇಲೆ ಧಮಕಿ ಹಾಕುವ ಅವಕಾಶವನ್ನು 2+2 ಮಾತುಕತೆ ಮಾಡಿಕೊಡುವಂತಾಗಬಾರದು. ಹೀಗಾಗಿ, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಗರಿಷ್ಠ ಎಚ್ಚರಿಕೆಯಿಂದ ವ್ಯವಹರಿಸಬೇಕಾದದ್ದು ಅಗತ್ಯ. 2001 ಮತ್ತು 2003ರಲ್ಲಿ ರಾಜತಾಂತ್ರಿಕ ಪ್ರೌಢಿಮೆ, ಜಾಣ್ಮೆಯ ನಡೆ ಪ್ರದರ್ಶಿಸಿದಂತೆ ನಡೆಯಬೇಕಾಗಿದೆ.

– ಸದಾಶಿವ ಕೆ.

Advertisement

Udayavani is now on Telegram. Click here to join our channel and stay updated with the latest news.

Next