Advertisement

ಚೀನದ ಕೋವಿಡ್‌ ದಾರುಣತೆ ಬಗ್ಗೆ ಭಾರತ ನಿಗಾ ಇಡಲಿ

12:03 AM Dec 21, 2022 | Team Udayavani |

ಕೊರೊನಾ ಹುಟ್ಟಿಕೊಂಡು ಮೂರು ವರ್ಷಗಳ ತರುವಾಯ ಈಗ ಮತ್ತದೇ ಚೀನದಲ್ಲಿ ಸೋಂಕಿನ ಮಹಾಸ್ಫೋಟ ಆಗಿದೆ. ಪರಿಸ್ಥಿತಿ ಚೀನ ಸರ್ಕಾರದ ನಿಯಂತ್ರಣವನ್ನು ಮೀರಿದ್ದು, ಲಕ್ಷಾಂತರ ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಹಾಗೆಯೇ ಅಮೆರಿಕ, ದಕ್ಷಿಣ ಕೊರಿಯಾ, ಜಪಾನ್‌ನಲ್ಲೂ ಹೊಸ ಪ್ರಕರಣಗಳು ದಾಖಲಾಗುತ್ತಿರುವುದು ಆತಂಕದ ವಿಷಯವೇ ಸರಿ.

Advertisement

ಈ ನಿಟ್ಟಿನಲ್ಲಿ ಭಾರತ ಈಗಲೇ ಅಲ್ಲಿನ ಪರಿಸ್ಥಿತಿ ಮೇಲೆ ನಿಗಾ ಇಡುವುದು ಸೂಕ್ತ. ಈಗಾಗಲೇ ಭಾರತದಲ್ಲಿ ಕೊರೊನಾ ಹೋಗೇ ಬಿಟ್ಟಿದೆ ಎಂಬ ರೀತಿಯಲ್ಲಿ ಜನ ವರ್ತಿಸುತ್ತಿದ್ದಾರೆ. ಅಷ್ಟೇ ಅಲ್ಲ, ಚೀನ ಹೊರತುಪಡಿಸಿ, ಇಡೀ ಜಗತ್ತು ಕೊರೊನಾ ಆತಂಕ ದಾಟಿ ಮುಂದಕ್ಕೆ ಹೋಗಿದೆ. ಇದರ ಬದಲಿಗೆ ಈಗ ಮತ್ತೆ ಕೊರೊನಾ ಬಗ್ಗೆ ಭಯ ಹುಟ್ಟುವಂತೆ ಆಗಿದೆ.  ಕೊರೊನಾ ವಿಚಾರದಲ್ಲಿ 2019ರ ಡಿಸೆಂಬರ್‌ನಿಂದಲೂ ಚೀನ ಕಣ್ಣಾಮುಚ್ಚಾಲೆ ಆಟ ಆಡಿಕೊಂಡೇ ಬಂದಿದೆ. ಜಗತ್ತಿಗೇ ಮಾರಕವಾಗಬಲ್ಲ ಒಂದು ಸಾಂಕ್ರಾಮಿಕ ರೋಗವೊಂದು ಪತ್ತೆಯಾಗುತ್ತಿದೆ ಎಂದು ಅಲ್ಲಿನ ವೈದ್ಯರೊಬ್ಬರು ಎಚ್ಚರಿಕೆ ನೀಡಿದ್ದರಾದರೂ ಇದನ್ನು ಗಂಭೀರವಾಗಿ ಪರಿಗಣಿಸದೇ ಅವರನ್ನೇ ಚೀನ ಜೈಲಿಗೆ ಅಟ್ಟಿತ್ತು. ತದನಂತರದಲ್ಲಿ ಎಚ್ಚರಿಕೆ ಕೊಟ್ಟ ವೈದ್ಯರೂ ಕೊರೊನಾದಿಂದಲೇ ಸಾವನ್ನಪ್ಪಿದರು.

ಆದರೆ ಚೀನ ಮಾತ್ರ ಈ ಕೊರೊನಾ ಕುರಿತಂತೆ ಹೊರ ಜಗತ್ತಿಗೆ ಏನನ್ನೂ ಹೇಳಲೇ ಇಲ್ಲ. ಆರಂಭದ ದಿನಗಳಲ್ಲಿ ಕೇಸಿನ ಬಗ್ಗೆ ಮಾಹಿತಿ ಕೊಟ್ಟಿತಾದರೂ ಅನಂತರದಲ್ಲಿ ಮುಚ್ಚಿಟ್ಟಿತು. ಬೇರೆಲ್ಲ ದೇಶಗಳಲ್ಲಿ ಲಕ್ಷಗಳ ಲೆಕ್ಕಾಚಾರದಲ್ಲಿ ಸಾವಿನ ವರದಿಗಳು ಬಂದಿದ್ದರೆ ಚೀನ ಮಾತ್ರ ಇನ್ನು ತನ್ನ ದೇಶದಲ್ಲಿ ಕೊರೊನಾದಿಂದ ಕೇವಲ 5 ಸಾವಿರ ಮಂದಿ ಮಾತ್ರ ಸಾವನ್ನಪ್ಪಿದ್ದಾರೆ ಎಂದೇ ಹೇಳಿಕೊಂಡು ಬರುತ್ತಿದೆ.

ಇನ್ನು ಲಸಿಕೆಯ ವಿಚಾರದಲ್ಲಿಯೂ ಚೀನ ಹೊರಜಗತ್ತಿಗೆ ಸುಳ್ಳು ಹೇಳಿತೆ ಎಂಬ ಅನುಮಾನಗಳು ವ್ಯಕ್ತವಾಗಿವೆ. ಈಗಾಗಲೇ ಚೀನದ ಶೇ.90ರಷ್ಟು ಜನ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಇದರ ಆಧಾರದಲ್ಲಿ ಹೇಳುವುದಾದರೆ ಕೊರೊನಾ ವಿರುದ್ಧ ಸಶಕ್ತವಾಗಿ ಹೋರಾಟ ನಡೆಸಬಹುದಾಗಿತ್ತು. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಈ ಲಸಿಕೆ ಕೆಲಸ ಮಾಡಿದೆಯೇ ಅಥವಾ ಇಲ್ಲವೇ ಎಂಬ ಸಂದೇಹಗಳು ಮೂಡಿವೆ.

ಹಾಗೆಯೇ ವಿಜ್ಞಾನದ ವಿರುದ್ಧವೂ ಚೀನ ಹೆಜ್ಜೆ ಇಟ್ಟಿತು ಎಂಬ ಆರೋಪಗಳೂ ಮೊದಲಿನಿಂದಲೂ ಇವೆ. ಯಾವುದೇ ಸಾಂಕ್ರಾಮಿಕ ರೋಗಗಳು ಒಮ್ಮೆ ಎಲ್ಲರಿಗೂ ಬಂದು ಹೋದರಷ್ಟೇ ಅವುಗಳ ಎಂಡೆಮಿಕ್‌ ಶುರುವಾಗುವುದು ಎಂದು ಜಗತ್ತಿನ ಶ್ರೇಷ್ಠ ವೈದ್ಯರು ಹೇಳಿದ್ದಾರೆ. ಇದನ್ನು ಕೇಳದೇ ಚೀನ ಒಂದೆರಡು ಕೇಸುಗಳು ಕಂಡರೂ ಇಡೀ ಊರು ಅಥವಾ ಪ್ರಾಂತವನ್ನೇ ಲಾಕ್‌ಡೌನ್‌ ಮಾಡಿಕೊಂಡು ಬಂದಿದೆ. ಇದರಿಂದಾಗಿಯೇ ಈಗ ಅಲ್ಲಿ ಕೇಸುಗಳು ಹೆಚ್ಚಾಗಿ, ಸಾವಿನ ಪ್ರಮಾಣವೂ ಏರಿಕೆಯಾಗುತ್ತಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

Advertisement

ಏನೇ ಆಗಲಿ ಭಾರತವಂತೂ ಎಚ್ಚರಿಕೆಯಿಂದ ಇರಲೇಬೇಕು. ಸಾಧ್ಯವಾದರೆ ಆ ದೇಶದ ನಡುವಿನ ಸಂಪರ್ಕವನ್ನು ಬಂದ್‌ ಮಾಡಬೇಕು. ಅಲ್ಲಿಂದ ಬಂದವರನ್ನು ಸಾಧ್ಯವಾದಷ್ಟು ಪ್ರತ್ಯೇಕವಾಗಿಸುವ ಕೆಲಸ ಮಾಡಬೇಕು. ಕೇಂದ್ರ ಸರಕಾರವೇ ಕೊರೊನಾ ದೃಢಪಟ್ಟವರ ವಂಶವಾಹಿ ಪರೀಕ್ಷೆ ನಡೆಸಲು ಸೂಚಿಸಿದ್ದು, ರಾಜ್ಯಗಳು ಪಾಲಿಸಬೇಕು. ಬುಧವಾರ ನಡೆಯಲಿರುವ ಕೇಂದ್ರದ ಆರೋಗ್ಯ ಸಚಿವರ ಸಭೆಯಲ್ಲಿ ಸಾಧ್ಯವಾದಷ್ಟು ನಿಯಂತ್ರಣ ಕ್ರಮಗಳನ್ನು ಪಾಲಿಸಿದರೆ ಒಳಿತು.

Advertisement

Udayavani is now on Telegram. Click here to join our channel and stay updated with the latest news.

Next