Advertisement

ಆಸ್ಪತ್ರೆಗಳು ಬಡವರ ಆರೋಗ್ಯ ಕಾಪಾಡಲಿ; ಸಚಿವ ಪ್ರಹ್ಲಾದ ಜೋಶಿ

06:34 PM Dec 12, 2022 | Team Udayavani |

ಹುಬ್ಬಳ್ಳಿ: ಬಡವರ ದುಡಿಮೆಯಿಂದಲೇ ದೇಶ ನಡೆಯುತ್ತಿದ್ದು, ದೇಶದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಸಾಕಷ್ಟಿದೆ. ಆದ್ದರಿಂದ ಅವರಿಗೆ ಉತ್ತಮ ಸೌಲಭ್ಯ ದೊರಕಬೇಕು. ಆ ನಿಟ್ಟಿನಲ್ಲಿ ಆಸ್ಪತ್ರೆಗಳು ತಮ್ಮ ಆದಾಯದಲ್ಲಿನ ಒಂದಿಷ್ಟು ಭಾಗವನ್ನು ಬಡವರಿಗಾಗಿ ಮೀಸಲಿಟ್ಟು ಅವರ ಆರೋಗ್ಯ ಕಾಪಾಡಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಇಲ್ಲಿನ ಗೋಕುಲ ರಸ್ತೆಯ ಕೆಎಸ್‌ಆರ್‌ಟಿಸಿ ಡಿಪೋ ವೃತ್ತ ಬಳಿ ಆರಂಭಿಸಲಾದ ನಿರಾಮಯ ಮೆಡಿಕಲ್‌ ಸೆಂಟರ್‌ ಹಾಗೂ ಹುಬ್ಬಳ್ಳಿ ಸ್ಕ್ಯಾನ್‌ ಸೆಂಟರ್‌ನ ಹೈಟೆಕ್‌ ಡೈಗ್ನೊಸ್ಟಿಕ್‌ ಮತ್ತು ಎಂಆರ್‌ಐ ಪಾಲಿಕ್ಲಿನಿಕ್‌ ಒಪಿಡಿ ಕೇಂದ್ರವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಕಾಲದಲ್ಲಿ ಭಾರತದಲ್ಲಿ ವಿದ್ಯೆ, ಔಷಧಿ ಮಾರಾಟ ಮಾಡಬಾರದೆಂಬ ಪರಿಕಲ್ಪನೆ ಇತ್ತು. ಸಮಯ ಬದಲಾದಂತೆ ಅದು ಬದಲಾಗಿದೆ. ಅದರಂತೆ ಮಾಡಬೇಕೆಂದಿಲ್ಲ. ಆದರೆ ರೋಗಿಗಳು ವೈದ್ಯರ ಬಳಿ ಬಂದಾಗ ತೃಪ್ತಿಗೊಳ್ಳಬೇಕು. ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ರೋಗಿಗಳಿಗೆ ತಿಳಿಯುವ ಭಾಷೆಯಲ್ಲಿ ಹೇಳಬೇಕು. ಸಮಾಜ ಕೊಟ್ಟಿದ್ದರಲ್ಲಿ ಕೆಲಭಾಗವನ್ನು ಬಡವರಿಗಾಗಿ ನೀಡಬೇಕು. ಅವರಿಗೆ ಒಂದಿಷ್ಟು ಉತ್ಕೃಷ್ಟ ಸೇವೆ ಒದಗಿಸಬೇಕು. ಅದರಿಂದ
ನಿಮಗೆ-ನಿಮ್ಮ ಕುಟುಂಬದವರಿಗೆ ಪುಣ್ಯ ಲಭಿಸುತ್ತದೆ.ಆಸ್ಪತ್ರೆಗೆ ಆಗಮಿಸುವ ರೋಗಿಗಳು ಗುಣಮುಖರಾಗಿ ಆತ್ಮವಿಶ್ವಾಸ ಹಾಗೂ ನಗುಮೊಗದಿಂದ ಮನೆಗೆ ತೆರಳಬೇಕು. ಅಂತಹ ಸೇವೆ ದೊರಕಬೇಕು ಎಂದರು.

2027ರಲ್ಲಿ ಭಾರತವು ಆರ್ಥಿಕತೆಯಲ್ಲಿ ವಿಶ್ವದಲ್ಲಿ 3ನೇ ಸ್ಥಾನ, 2047ರಲ್ಲಿ 1ನೇ ಸ್ಥಾನ ಹೊಂದಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ಅದಕ್ಕೆ ತಕ್ಕಂತೆ ನಾವು ವಿಶ್ವದ ಜನರ ಅಪೇಕ್ಷೆ ನೆರವೇರಿಸಬೇಕಿದೆ ಎಂದರು.

ವಿಆರ್‌ಎಲ್‌ ಸಮೂಹ ಸಂಸ್ಥೆಗಳ ಚೇರ್ಮನ್‌ ಡಾ| ವಿಜಯ ಸಂಕೇಶ್ವರ ಮಾತನಾಡಿ, ಮೊದಲು ಈ ಭಾಗದ ರೋಗಿಗಳು ಸಣ್ಣ ಸಮಸ್ಯೆಗಳಿಗೂ ಕೂಡ ಮುಂಬಯಿ, ಬೆಂಗಳೂರುಗಳತ್ತ ಮುಖ ಮಾಡಬೇಕಿತ್ತು. ಇದು ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಸಾಧ್ಯವಾಗುತ್ತಿರಲಿಲ್ಲ. ಆದರೆ ಕಳೆದ 25 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಆಗುತ್ತಿದೆ. ಬಹಳಷ್ಟು ತಜ್ಞರು ಹು-ಧಾಗೆ ಆಗಮಿಸುತ್ತಿದ್ದಾರೆ. ತಂತ್ರಜ್ಞಾನದಲ್ಲೂ ಉತ್ತಮವಾಗಿ
ಬೆಳೆದಿದೆ. ಪ್ರತಿವರ್ಷ ಒಂದು ಅತ್ಯುತ್ತಮ ವೈದ್ಯಕೀಯ ಸೇವಾ ಕೇಂದ್ರಗಳು ಆರಂಭವಾಗಬೇಕು.

Advertisement

ಇದರಿಂದ ವೈದ್ಯರು-ರೋಗಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ದರ-ದಕ್ಷತೆಯ ಫಲಿತಾಂಶ ದೊರೆಯುತ್ತದೆ. ವೈದ್ಯರು ಹೆಚ್ಚು ಕೌಶಲ್ಯ ವೃದ್ಧಿಸಿಕೊಳ್ಳಬೇಕು. ವಿಶೇಷ ಯಂತ್ರಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಆ ಮೂಲಕ ರೋಗಿಗಳು ಬೇರೆ ರಾಜ್ಯ, ಪ್ರದೇಶಗಳಿಗೆ ಹೋಗದಂತೆ ತಮ್ಮತ್ತ ಸೆಳೆಯಬೇಕು ಎಂದರು.

ಹುಬ್ಬಳ್ಳಿ ಸ್ಕ್ಯಾನ್‌ ಸೆಂಟರ್‌ನ ಚೇರ್ಮನ್‌ ಡಾ|ಸಂಜೀವ ಕಳಸೂರ ಮಾತನಾಡಿದರು. ಮಹಾಪೌರ ಈರೇಶ ಅಂಚಟಗೇರಿ, ಮಾಜಿ ಶಾಸಕ ಅಶೋಕ ಕಾಟವೆ, ಡಾ| ದತ್ತಾ ನಾಡಗೇರ, ಡಾ|ಎಸ್‌.ಪಿ. ಬಳಿಗಾರ, ಡಾ|ಬಿ.ಆರ್‌. ಪಾಟೀಲ, ಡಾ|ಜಿ.ಬಿ.ಸತ್ತೂರ, ಹುಬ್ಬಳ್ಳಿ ಸ್ಕ್ಯಾನ್‌ ಸೆಂಟರ್‌ನ ಎಂಡಿ ಡಾ|ಚಂದ್ರಕಾಂತ ಕಾಟವೆ, ಡಾ|ರಾಜೇಶ ರೇವಣಕರ ಮೊದಲಾದವರಿದ್ದರು. ಡಾ|ವಿವೇಕ ಪಾಟೀಲ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next