ಜಪಾನಿನಲ್ಲಿ ಒಮ್ಮೆ ಏಡಿಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಎಲ್ಲ ದೇಶಗಳ ಏಡಿಗಳನ್ನು ಒಂದು ಡಬ್ಬದಲ್ಲಿ ಹಾಕಲಾಯಿತು. ಅದರಲ್ಲಿ ಯಾವ ಏಡಿ ಬಹುಬೇಗನೆ ಮೇಲೆ ಬರುತ್ತದೆ ಎಂಬುದು ಸ್ಪರ್ಧೆಯಾಗಿತ್ತು. ಸ್ಪರ್ಧೆ ಆರಂಭವಾದ ಕೂಡಲೇ ಎಲ್ಲ ಏಡಿಗಳು ಮೇಲೆ ಬರಲು ಆರಂಭಿಸಿದವು. ಆದರೆ ಅರ್ಧತನಕ ಬಂದು ಮತ್ತೆ ಬೀಳಲಾರಂಭಿಸಿದವು. ಒಂದು ಏಡಿ ಮೇಲೆ ಬರುತ್ತಿದ್ದಂತೆ ಇನ್ನೊಂದು ಏಡಿ ಕೆಳಗಿನಿಂದ ಕಾಲನ್ನು ಎಳೆದು ಹಾಕುತ್ತಿತ್ತು. ಇದನ್ನು ನೋಡುತ್ತಿದ್ದ ಒಬ್ಬ ಹೀಗೆಂದ, “ಹೀಗೆ ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವುದರಲ್ಲಿಯೇ ಕೆಲವರು ಸಂತೋಷಪಡುತ್ತಾರೆ. ಈ ಏಡಿಗಳು ಕೂಡ ಅದನ್ನು ಕಲಿತಿವೆ’ ಎಂದು ಬಿಟ್ಟ.
ಇದು ಕೇವಲ ಏಡಿಗಳ ಕಥೆಯಲ್ಲ. ವಾಸ್ತವದ ಸಂಗತಿ. ಒಬ್ಬರ ಏಳಿಗೆಯನ್ನು ಇನ್ನೊಬ್ಬರು ಸಹಿಸುವುದಿಲ್ಲ. ಒಬ್ಬ ಒಂದು ಹೆಜ್ಜೆ ತನ್ನಕ್ಕಿಂತ ಮುಂದೆ ಹೋಗುತ್ತಿದ್ದಾನೆ ಎಂದಾದರೆ ಆತನ ಕಾಲು ಹಿಡಿದು ಎಳೆಯುವುದೇ ಇನ್ನೊಬ್ಬನ ಕೆಲಸವಾಗಿರುತ್ತದೆ.
ಆತನೇನೋ ಉತ್ತಮ ಕೆಲಸದಲ್ಲಿದ್ದಾನೆ. ಕೈತುಂಬ ಸಂಬಳ. ಅದರೆ ಆತ ಇನ್ನೊಬ್ಬನ ಒಳಿತನ್ನು ಬಯಸುವುದಿಲ್ಲ. ಗೆಳೆಯನೇ ಆಗಿರಲಿ, ಪರಿಚಯಸ್ಥನೇ ಆಗಿರಲಿ ತನಗಿಂತ ಒಂದು ಹೆಜ್ಜೆ ಮುಂದಿಟ್ಟರೆ ಸಾಕು ಎಲ್ಲಿ ತನ್ನ ಮೌಲ್ಯ ಕಡಿಮೆಯಾಗುತ್ತದೆ ಏನೋ ಎಂದು ಮತ್ಸರದಿಂದ ಆತನನ್ನು ಮೇಲೆ ಬರಲು ಬಿಡುವುದಿಲ್ಲ. ಸಾಧ್ಯವಾದರೆ ಆತನನ್ನು ಆ ಕೆಲಸದಿಂದ ತೆಗೆಯುವಷ್ಟು ಮುಂದುವರಿಯುತ್ತಾನೆ. ಇತ್ತ ಈತನಿಗೂ ಸಾಧನೆ ಮಾಡಲು ಆಗುವುದಿಲ್ಲ. ಕೇವಲ ಇದೇ ಕೆಲಸದಲ್ಲಿ ಸಮಯ ಕಳೆಯುತ್ತಾನೆ. ಇದು ಹೀಗೆ ಸಾಗುತ್ತಲೇ ಇರುತ್ತದೆ. ಆದರೆ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನಾವು ಪ್ರಾಮಾಣಿಕತೆಯಿಂದ ಮುನ್ನುಗ್ಗಬೇಕು. ಪ್ರಾಮಾಣಿಕತೆಯೊಂದೇ ಆತ್ಮಶಕ್ತಿಗೆ ಧೈರ್ಯ ತುಂಬುತ್ತದೆ.
- ಪೂರ್ಣಿಮಾ