ಆಧುನಿಕ ತಂತ್ರಜ್ಞಾನ ದೂರದಲ್ಲಿರುವವರನ್ನು ಹತ್ತಿರವಾಗಿಸಿದೆ ನಿಜ. ಆದರೆ ಮಾನಸಿಕವಾಗಿ ಗೋಡೆಯೊಂದನ್ನು ಗೊತ್ತಿಲ್ಲದಂತೆಯೇ ಅಡ್ಡ ಕಟ್ಟಿ ಬಿಟ್ಟಿದೆ ಎನ್ನುವುದು ಅಷ್ಟೇ ಸತ್ಯ. ಅದೊಂದು ಸಂಜೆ ನಾನು ಸ್ನೇಹಿತನೊಂದಿಗೆ ಪೇಟೆಯಲ್ಲಿ ಸುತ್ತಾಡುತ್ತಿದ್ದೆ, ಇದ್ದಕ್ಕಿದ್ದಂತೆ ಸುಮಾರು 35 ವರ್ಷದ ಅಪರಿಚಿತನೊಬ್ಬ “ಸರ್’ ಎಂದು ನಮ್ಮ ಬಳಿಗೆ ಬಂದ. ಏನು ಎನ್ನುವಂತೆ ಅವನತ್ತ ನೋಡಿದೆವು. “ಸರ್ ನಾನು ಬೀದರ್‌ನವನು. ಚಿಕಿತ್ಸೆಗೆಂದು ಅಮ್ಮನನ್ನು ಕರೆದುಕೊಂಡು ಬಂದಿದ್ದೆ. ಈಗ ಅಮ್ಮ ಇಲ್ಲೆಲ್ಲೊ ಕಳೆದು ಹೋಗಿದ್ದಾಳೆ. ನನ್ನ ಮೊಬೈಲ್ ಆಕೆ ಕೈಯಲ್ಲಿದೆ. ನಿಮ್ಮ ಫೋನ್ ಕೊಡಿ. ಕರೆ ಮಾಡಬೇಕು’ ಎಂದ.
ನಮಗೆ ನಂಬಿಕೆ ಬರಲಿಲ್ಲ. ಇಂತಹ ಸುಳ್ಳು ಹೇಳಿ ಮೊಬೈಲ್ ಅಪಹರಿಸಿದ ಬಗ್ಗೆ ಕೇಳಿದ್ದ ನಾವು ಇದೊಂದು ಗಿಮಿಕ್ ಅಂದುಕೊಂಡು ಅಲ್ಲಿಂದ ಹೊರಡಲು ಅನುವಾದೆವು. “ಯಾರೂ ನಂಬುತಾ ಇಲ್ಲ. 4-5 ಜನರಲ್ಲಿ ಕೇಳಿದರೂ ಸಹಾಯ ಮಾಡಲು ಮುಂದಾಗಿಲ್ಲ. ನಾನೇನೂ ನಿಮ್ಮ ಮೊಬೈಲ್ ಅಪರಿಸಿಕೊಂಡು ಹೋಗುವುದಿಲ್ಲ. ಬೇಕಾದರೆ ಅಮ್ಮನ ಜತೆ ನೀವೇ ಮಾತಾಡಿ. ಹೊಸ ಜಾಗ. ಆಕೆ ಟೆನ್‌ಷನ್‌ನಲ್ಲಿರಬಹುದು’ ಎಂದ. ಯಾಕೋ ಆತನ ಧ್ವನಿಯಲ್ಲಿ ಪ್ರಾಮಾಣಿಕತೆ ಇದೆ ಎನಿಸಿತು. ನಾನೇ ನಂಬರ್ ಡಯಲ್ ಮಾಡಿದೆ. ಆಕೆ ಬಸ್ ಸ್ಟಾಂಡ್‌ಲ್ಲಿ ಇರುವುದಾಗಿ ಹೇಳಿದರು. ಆತನನ್ನು ಅಲ್ಲಿಗೆ ಬಿಟ್ಟು ಬಂದೆವು.
ಇದು ಈಗಿನ ಸ್ಥಿತಿ. ಆತ ಸಹಾಯಹಸ್ತಕ್ಕಾಗಿ ತನ್ನ ಪ್ರಾಮಾಣಿಕತೆಯನ್ನೇ ಸಾಬೀತು ಪಡಿಸಬೇಕಾಯಿತು. ನಾವು ಆತನಿಗೆ ಕೊನೆಗೂ ಸಹಾಯ ಮಾಡಿದ್ದರೂ ಮೊದಲು ಅನುಮಾನಿಸಿದ್ದು ಸುಳ್ಳಲ್ಲ. ಇದು ನಮ್ಮ ಮನಸ್ಥಿತಿ. ನಾವು ಎಲ್ಲಿ ವಂಚನೆಯ ದಾಳವಾಗುತ್ತೇವೊ ಎನ್ನುವ ಸಂಶಯ. ಆದರೆ ಹಿರಿಯ ಜೀವಿಗಳು ಹಾಗಲ್ಲ. ಅವರು ಅಪರಿಚಿತರಲ್ಲೂ ತಮ್ಮ ಮೊಮ್ಮಗನೋ, ಮಗನೋ, ಬಂಧುವನ್ನೋ ಕಾಣುತ್ತಾರೆ. ಆದರೆ ನಾವು ಸಹಾಯಹಸ್ತ ಚಾಚಲು ಯೋಚಿಸುವ ಪರಿಸ್ಥಿತಿ ಬಂದಿದೆ. ಇದು ತಪ್ಪು ಎನ್ನುವಂತೆಯೂ ಇಲ್ಲ. ಯಾಕೆಂದರೆ ಮುಗ್ಧ ಜನರ ಸಹಾಯವನ್ನು ದುರು ಪಯೋಗ ಪಡಿಸಿಕೊಂಡ ಪರಿಣಾಮ ಸಹಜವಾಗಿ ಮನಸ್ಸಿನಲ್ಲಿ ಮುನ್ನೆಚ್ಚರಿಕೆ ಜಾಗೃತವಾಗಿರುತ್ತದೆ. ಪ್ರಾಮಾಣಿಕತೆಯನ್ನು ದುರುಪಯೋಗಿಸುವ ಪ್ರವೃತ್ತಿ ನಿಂತರೆ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ.