Advertisement

ಶಾಂತಿ-ಸಂತಸದಿಂದ ಹೋಳಿ ಆಚರಿಸೋಣ

06:54 AM Mar 18, 2019 | Team Udayavani |

ದಾವಣಗೆರೆ: ಬಣ್ಣಗಳ ಹಬ್ಬ ಎಂದೇ ಕರೆಯಲ್ಪಡುವ ಹೋಳಿಯನ್ನ ಜಿಲ್ಲೆ ಮತ್ತು ನಗರದಲ್ಲಿ ಶಾಂತಿ ಮತ್ತು ಸಂತೋಷದಿಂದ ಆಚರಿಸಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಆರ್‌.ಚೇತನ್‌ ಮನವಿ ಮಾಡಿದ್ದಾರೆ. ಹೋಳಿ ಹಬ್ಬದ ಪ್ರಯುಕ್ತ ಭಾನುವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ನಾಗರಿಕ ಸೌಹಾರ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾ.20 ಅಥವಾ 21 ರಂದು ಜಿಲ್ಲೆಯ ಎಲ್ಲ ನಾಗರಿಕರು ಹೋಳಿಯನ್ನ ಶಾಂತಿಯುತವಾಗಿ ನೆರವೇರಿಸಲು ಸಹಕರಿಸಬೇಕು ಎಂದರು. 

Advertisement

ರೈತರು ತಾವು ಬೆಳೆದ ಬೆಳೆಯನ್ನು ಸಂಭ್ರಮಿಸುವ ಸುಗ್ಗಿ ಕಾಲದ ಹಬ್ಬವಾದ ಹೋಳಿಯನ್ನು ಎಲ್ಲರೂ ಸಂತಸದಿಂದ ಯಾವುದೇ ಗಲಭೆಗೆ ಅವಕಾಶ ಆಗದಂತೆ ಶಾಂತಿಯಿಂದ ನಡೆಸಬೇಕು.

ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶದಲ್ಲಿ ಅನೇಕ ಹಬ್ಬ ಆಚರಿಸಲಾಗುತ್ತದೆ. ವರ್ಷದ ಮೊದಲನೇ ದೊಡ್ಡ ಹಬ್ಬವಾದ ಹೋಳಿ ಆಚರಣೆ ಸಮಯವೇ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಮಯ ಗಮನದಲ್ಲಿಟ್ಟುಕೊಂಡು ಹಬ್ಬವನ್ನು ಶಾಂತಿಯಿಂದ ಆಚರಿಸಬೇಕು ಎಂದರು .

ಮುಖಂಡ ಕೆ.ಬಿ. ಶಂಕರನಾರಾಯಣ ಮಾತನಾಡಿ, ಬಹು ಹಿಂದಿನಿಂದಲೂ ಹೋಳಿ ಆಚರಿಸಿಕೊಂಡು ಬರಲಾಗುತ್ತಿದ್ದು, ಹೋಳಿ ಭೋಗ ಜೀವನವನ್ನು ಸುಡುವ ಸಂಕೇತ. ಹಿಂದೆ ಅರಿಶಿನ ಇತರೆ ಸ್ವಾಭಾವಿಕ ಬಣ್ಣದಿಂದ ಹಬ್ಬ ಆಚರಿಸಲಾಗುತ್ತಿತ್ತು.

ಆದರೆ, ಇತ್ತೀಚೆಗೆ ರಾಸಾಯನಿಕ ಭರಿತ ಬಣ್ಣದೊಂದಿಗೆ ಮೊಟ್ಟೆಯೊಡೆದು ಬಹಳ ವಿಚಿತ್ರವಾಗಿ ಗಲಾಟೆ ಮಾಡಿಕೊಂಡು ಆಚರಿಸುತ್ತಿರುವುದು ವಿಷಾದನೀಯ. ಎಲ್ಲೆ ಮೀರಿ ಆಚರಣೆ ಸಲ್ಲದು. ಆದ್ದರಿಂದ ಅಂತಹುದಕ್ಕೆಲ್ಲ ಕಡಿವಾಣ ಹಾಕಿ ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಳ್ಳಬೇಕು. ಪರೀಕ್ಷೆ ಮತ್ತು ಚುನಾವಣೆ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸಂತಸದಿಂದ ಹಬ್ಬ ಆಚರಿಸಬೇಕು. ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಇರುವುದರಿಂದ ಶುಕ್ರವಾರ ಹೈಸ್ಕೂಲ್‌ ಮೈದಾನದಲ್ಲಿ ಆಚರಣೆಗೆ ಅವಕಾಶ ಮಾಡಿಕೊಟ್ಟರೆ ಉತ್ತಮ ಎಂದು ಸಲಹೆ ನೀಡಿದರು.

Advertisement

ಹಬ್ಬದ ದಿನಗಳಲ್ಲಿ ಮಾತ್ರ ಹಬ್ಬ ಆಚರಣೆ ಮಾಡಲು ಸಾಧ್ಯವಾಗುತ್ತದೆ. ಈ ಬಾರಿ ಹೆಚ್ಚಿನ ಪೊಲೀಸ್‌ ಪಡೆಯನ್ನು ವಿವಿಧ ಆಚರಣೆಗಳಿಗೆ ನಿಯೋಜಿಸಲಾಗುತ್ತಿದೆ. ನಾಯಕನಹಟ್ಟಿ ಜಾತ್ರೆ ದಾವಣಗೆರೆ ವಲಯದಲ್ಲಿದ್ದು ಅಲ್ಲಿಗೆ ಪೊಲೀಸ್‌ ಪಡೆ ನಿಯೋಜಿಸಬೇಕು. ಚುನಾವಣೆ ಕರ್ತವ್ಯಕ್ಕೂ ಪೊಲೀಸರ ನ್ನು ನಿಯೋಜಿಸಲಾಗಿದೆ. ಜಗಳೂರಿನ ಚೌಡೇಶ್ವರಿ ಮತ್ತು ಕೊಡದಗುಡ್ಡದ ವೀರಭದ್ರೇಶ್ವರ ಜಾತ್ರೆಗಳಿಗೂ ಪೊಲೀಸ್‌ ಪಡೆ ನಿಯೋಜನೆ ಇರುವುದರಿಂದ ಶುಕ್ರವಾರ ಹೋಳಿ ಹಬ್ಬಕ್ಕೆ ನಿಯೋಜನೆ ಕಷ್ಟವಾಗುವುದರಿಂದ ಮತ್ತು ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬುಧವಾರ ಅಥವಾ ಗುರುವಾರ ಆಚರಿಸಬೇಕು ಎಂದು ಎಸ್ಪಿ ಆರ್‌. ಚೇತನ್‌ ತಿಳಿಸಿದರು.
 
ಜಿಲ್ಲಾ ಜೆಡಿಎಸ್‌ ಮುಖಂಡ ಜೆ. ಅಮಾನುಲ್ಲಾ ಖಾನ್‌ ಮಾತನಾಡಿ, ಹಬ್ಬಗಳನ್ನು ಅತ್ಯಂತ ಸಂತಸ, ಸೌಹಾರ್ದತೆಯಿಂದ ಆಚರಿಸಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಭಯದ ವಾತಾವರಣದಲ್ಲಿ ಹಬ್ಬ ಆಚರಿಸುವ ಸ್ಥಿತಿಯ ಬಗ್ಗೆ ಚಿಂತನೆ ಮಾಡಬೇಕಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವುದು ಕೇವಲ ಪೊಲೀಸ್‌ ಇಲಾಖೆ ಕೆಲಸವಲ್ಲ ಜೊತೆಗೆ ಸಾರ್ವಜನಿಕರು, ಇತರೆ ಇಲಾಖೆಗಳೂ ಕೈಜೋಡಿಸಬೇಕು.

ಹೋಳಿ ಹಬ್ಬಕ್ಕೆ ಸಂಬಂಧಿ ಸಿದಂತೆ ಪರಿಸರ ಮತ್ತು ಆರೋಗ್ಯ ಇಲಾಖೆಗಳೂ ಸಹಕರಿಸಬೇಕು. ಅಪಾಯಕಾರಿ ರಾಸಾಯನಿಕ ಭರಿತ ಬಣ್ಣ ಬಳಸದೆ, ರಸ್ತೆಯಲ್ಲಿ ಹೋಗುವವರಿಗೆ ಒತ್ತಾಯಪೂರ್ವಕ ಬಣ್ಣ ಹಚ್ಚಬಾರದು. ಯಾರೂ ಕಿಡಿಗೇಡಿತನ ಮಾಡದೇ ಶಾಂತಿ-ಸಂತಸದಿಂದ ಹಬ್ಬ ಆಚರಣೆ ಆಗಬೇಕೆಂದರು.

ನಗರಸಭೆ ಮಾಜಿ ಉಪಾಧ್ಯಕ್ಷ ಎ. ನಾಗರಾಜ್‌ ಮಾತನಾಡಿ, ಇಡೀ ನಗರದಲ್ಲಿ ಒಂದೇ ದಿನ ಹಬ್ಬ ಆಚರಣೆ ಆಗುವಂತೆ ನಿರ್ಧಾರ ಕೈಗೊಳ್ಳಬೇಕು. ಮಧ್ಯಾಹ್ನ 12 ಗಂಟೆವರೆಗೆ ಅಚ್ಚುಕಟ್ಟಾಗಿ ಹಬ್ಬ ಆಚರಣೆ ಆಗಬೇಕು. ಹಬ್ಬಕ್ಕೆ ಯಾವುದೇ ರಾಜಕೀಯ ಬೆರೆಸದೇ ಎಲ್ಲರೂ ಒಗ್ಗಟ್ಟಾಗಿ ಹಬ್ಬ ಆಚರಿಸೊಣ, ಪೊಲೀಸ್‌ ಇಲಾಖೆ ಸಹಕಾರ ಅಭಿನಂದನೀಯ ಎಂದರು.

ಸಿಪಿಐ ಮುಖಂಡ ಆವರಗೆರೆ ಚಂದ್ರು ಮಾತನಾಡಿ, ಪೊಲೀಸ್‌ ಇಲಾಖೆ ಕಾರ್ಯ ಶಾಂತಿ-ಸುವ್ಯವಸ್ಥೆ ಕಾಪಾಡುವುದಾದರೂ ಬದಲಾದ ಕಾಲಘಟ್ಟದಲ್ಲಿ ತನ್ನ ಕರ್ತವ್ಯ ವಿಸ್ತರಿಸಿಕೊಂಡು ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಅಪಾಯಕಾರಿ ಬಣ್ಣಗಳನ್ನು ಬಳಸದಂತೆ ಉತ್ತಮ ಸಲಹೆಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ವ್ಹೀಲಿಂಗ್‌ ಮಾಡುವ ಮೂಲಕ ಭಯ ನಿರ್ಮಿಸುತ್ತಾ ತಾವೂ ಅಪಾಯಕ್ಕೊಳಗಾಗುತ್ತಿರುವುದು ಕಳವಳಕಾರಿ. ಎಲ್ಲರೂ ಶಾಂತಿ-ಸಂಭ್ರಮದಿಂದ ಹಬ್ಬ ಆಚರಿಸೋಣವೆಂದರು.

ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಟಿ.ಜೆ. ಉದೇಶ್‌, ನಗರ ಉಪಾಧೀಕ್ಷಕ ಎಸ್‌.ಎಂ. ನಾಗರಾಜ್‌ ಇತರರು ಇದ್ದರು. ಸಿಪಿಐ ಇ. ಆನಂದ್‌ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next