ನವದೆಹಲಿ: ತೀವ್ರ ವಿವಾದಕ್ಕೆ ಕಾರಣವಾಗಿರುವ ಹಿಜಾಬ್ ವಿವಾದದ ಪ್ರಕರಣದ ಕುರಿತು ಮೊದಲು ಕರ್ನಾಟಕ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಲಿ, ನಂತರ ಈ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ಪರಿಗಣಿಸಲಿದೆ ಎಂದು ಮುಖ್ಯನ್ಯಾಯಮೂರ್ತಿ ಎನ್ ವಿ ರಮಣ ಅವರು ತಿಳಿಸುವ ಮೂಲಕ ಹಿಜಾಬ್ ಕುರಿತ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಕೆಜಿಎಫ್-2 ಡಬ್ಬಿಂಗ್ ಮಾಡಿದ ರವೀನಾ ಟಂಡನ್
ಇದೊಂದು ಧಾರ್ಮಿಕ ವಿಚಾರವಾಗಿದ್ದು, ಕರ್ನಾಟಕ ಹೈಕೋರ್ಟ್ ಈ ಪ್ರಕರಣವನ್ನು ಸುಪ್ರೀಂಕೋರ್ಟ್ ಗೆ ವರ್ಗಾಯಿಸುವಂತೆ ಆದೇಶ ನೀಡಲು ಹಿರಿಯ ವಕೀಲ, ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅವರು ಮನವಿ ಮಾಡಿಕೊಂಡ ಬಳಿಕ ಸಿಜೆಐ ರಮಣ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಹಿಜಾಬ್ ವಿವಾದದಿಂದಾಗಿ ಕರ್ನಾಟಕದಲ್ಲಿ ಶಾಲಾ, ಕಾಲೇಜುಗಳು ಬಂದ್ ಆಗಿದೆ. ಕೆಲವೆಡೆ ಕಲ್ಲುತೂರಾಟ, ಹೊಡೆದಾಟ ನಡೆದಿದೆ. ಈ ನಿಟ್ಟಿನಲ್ಲಿ ನಮ್ಮ ಮನವಿ ಪರಿಗಣಿಸಬೇಕಾದ ಅಗತ್ಯವಿದೆ. ಹಿಜಾಬ್ ವಿವಾದ ಇದೀಗ ದೇಶಾದ್ಯಂತ ಹಬ್ಬತೊಡಗಿದೆ ಎಂದು ಕಪಿಲ್ ಸಿಬಲ್ ಹೇಳಿದರು.
ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಗೆ ಇನ್ನು ಎರಡು ತಿಂಗಳು ಬಾಕಿ ಇದೆ. ಹಿಜಾಬ್ ಕುರಿತ ಪ್ರಕರಣದ ಬಗ್ಗೆ ಇಂದು ಬೆಳಗ್ಗೆ ಅರ್ಜಿ ದಾಖಲಿಸಿದ್ದೇವೆ. ಈ ವಿವಾದದ ಅರ್ಜಿಯನ್ನು ಒಂಬತ್ತು ನ್ಯಾಯಾಧೀಶರ ಪೀಠದಲ್ಲಿ ವಿಚಾರಣೆ ನಡೆಯಬೇಕಾಗಿದೆ. ನಮ್ಮ ಅರ್ಜಿಯನ್ನು ಪಟ್ಟಿಯಲ್ಲಿ ಸೇರಿಸುವಂತೆ ನಾನು ಮನವಿ ಮಾಡಿಕೊಳ್ಳುತ್ತೇನೆ, ಒಂದು ವೇಳೆ ಕರ್ನಾಟಕ ಹೈಕೋರ್ಟ್ ತೀರ್ಪನ್ನು ನೀಡದೇ ಹೋದಲ್ಲಿ, ಸುಪ್ರೀಂಕೋರ್ಟ್ ನಮ್ಮ ಅರ್ಜಿಯನ್ನು ಪರಿಗಣಿಸಿ ವಿಚಾರಣೆ ನಡೆಸಬೇಕು ಎಂದು ಸಿಬಲ್ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.