ಬಾಗಲಕೋಟೆ: ರಾಜ್ಯದ ಮಕ್ಕಳು ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆ ಕನ್ನಡದಲ್ಲೇ ಕಲಿಯುವಂತಾಗಲು ನಾನೂ ಆಶಿಸುತ್ತೇನೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೈಗೊಳ್ಳುವ ಕನ್ನಡದ ನೆಲ, ಜಲ ಹಾಗೂ ಸಂಸ್ಕೃತಿ ಉಳಿವಿನ ಕಾರ್ಯಕ್ಕೆ ಸರ್ಕಾರ ಪ್ರೇರಣಾ ಶಕ್ತಿಯಾಗಿ ನಿಲ್ಲುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ನವನಗರದ ಕಲಾಭವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗಮಟ್ಟದ ಕನ್ನಡ ಭಾಷಾ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆ ಕೇವಲ ಸಾಂಕೇತಿಕವಾಗಿರಬಾರದು. ಪ್ರಾಥಮಿಕ ಹಂತದಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು ಮಕ್ಕಳಲ್ಲಿ ಕನ್ನಡ ಭಾಷೆಯ ಮಹತ್ವ ಅರಿಯುವಂತೆ ಮಾಡಬೇಕು. ಕನ್ನಡ ಭಾಷೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.
ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ಆಗಬೇಕು. ಜತೆಗೆ ಆಂಗ್ಲ ಭಾಷೆಯೂ ಕಲಿಯಬೇಕು. ಚೀನಾ, ಇಂಗ್ಲಿಷ್ ಭಾಷೆ ಒಪ್ಪಿಕೊಳ್ಳದ ಹಿನ್ನೆಲೆ ಅದು ಹಲವು ಹಂತದಲ್ಲಿ ಹಿಂದುಳಿಯಲು ಕಾರಣವಾಗಿದೆ. ನಮ್ಮ ದೇಶ ತ್ರಿಭಾಷಾ ಸೂತ್ರದಡಿ ನಡೆಯುತ್ತಿದ್ದು, ಮಾತೃಭಾಷೆಗೆ ಮೊದಲ ಆದ್ಯತೆ ನೀಡಿ, ಉಳಿದ ಭಾಷೆಯೂ ಕಲಿಯಬೇಕು ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ| ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ಕನ್ನಡ ಭಾಷೆ ಸಂರಕ್ಷಣೆಗಾಗಿ ಪ್ರಾಧಿಕಾರ ರಚಿಸಲಾಗಿದೆ. ಈ ಹಿಂದೆ ಅದು ಕನ್ನಡ ಕವಲು ಸಮಿತಿಯಾಗಿತ್ತು. ಈ ಸಮಿತಿಯ ಆಗಿನ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯನವರು ಆಡಳಿತ, ಶಿಕ್ಷಣ ಹಾಗೂ ಉದ್ಯೋಗದಲ್ಲಿ ಕನ್ನಡಕ್ಕೆ ಹೆಚ್ಚು ಒತ್ತು ನೀಡಿದ್ದರು. ಕನ್ನಡದ ಬೆಳವಣಿಗೆಗಾಗಿ 21 ಅಂಶ ರೂಪಿಸಿದ್ದರು. ಆ ಅಂಶಗಳನ್ನು ಅನುಷ್ಠಾನಗೊಳಿಸಿದಲ್ಲಿ ಸರ್ಕಾರಿ ಶಾಲೆ ಸಬಲಿಕರಣಗೊಳ್ಳುತ್ತವೆ. ಮಕ್ಕಳಿಗೆ ಆರೋಗ್ಯ ಪೂರ್ಣ ಶಿಕ್ಷಣ ನೀಡಿದಂತಾಗುತ್ತದೆ ಎಂದು ಹೇಳಿದರು.
ಎಲ್ಲ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಪ್ರಥಮ ಭಾಷೆಯಾಗಿ ಕಲಿಸುವುದನ್ನು ಕಡ್ಡಾಯ ಮಾಡಬೇಕು. ಈಗಾಗಲೇ ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ 22 ಅಧಿಕೃತ ಭಾಷೆಗಳಿದ್ದು, ಇನ್ನು 99 ಭಾಷೆಗಳು ಅಧಿಕೃತ ಪಡೆಯುವಲ್ಲಿ ಬಾಗಿಲಿಗೆ ಬಂದು ನಿಂತಿವೆ. ಅಧಿಕೃತ ಭಾಷೆಗಳಲ್ಲಿ ಕನ್ನಡ 9 ಸ್ಥಾನದಲ್ಲಿದೆ. ವಿವಿಧ ಭಾಷೆಗಳಿಗಿಂತ ಒಂದೂವರೆ ಸಾವಿರ ವರ್ಷದ ಇತಿಹಾಸ ಹೊಂದಿದ್ದರೂ ಸಹ ಕನ್ನಡ ಭಾಷೆ ಬಡವಾಗುತ್ತಿರುವುದಕ್ಕೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಮಾಜಿ ಕುಲಪತಿ ಮಲ್ಲಿಕಾ ಘಂಟಿ, ಜಿಲ್ಲಾಧಿಕಾರಿ ಆರ್.ರಾಮಚಂದ್ರನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀಶೈಲ ಕರಿಶಂಕರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿ.ಎಚ್. ಗೋನಾಳ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಶಿಧರ ಪೂಜಾರಿ, ಕನ್ನಡ ಪ್ರಾಧಿಕಾರ ಸದಸ್ಯ ಮಹಾಂತೇಶ ಹಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಉಪಸ್ಥಿತರಿದ್ದರು.