ತಾಳಿಕೋಟೆ: ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ತಾಳಿಕೋಟೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಅಭಿವೃದ್ಧಿ ಅಧಿಕಾರಿ ನಿಂಗಣ್ಣ ದೊಡಮನಿ ಅವರು ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವುದರೊಂದಿಗೆ ಅವರಲ್ಲಿ ಹೊಸ ಚೈತನ್ಯ ತುಂಬುವ ಕೆಲಸ ಮಾಡಲಿ ಎಂದು ಜೆಡಿಎಸ್ ಪಕ್ಷದ ತಾಲೂಕು ಕಾರ್ಯಾಧ್ಯಕ್ಷ ಮಡುಸೌಕಾರ ಬಿರಾದಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘ ನೂತನ ಅಧ್ಯಕ್ಷ ನಿಂಗಣ್ಣ ದೊಡಮನಿ ಅವರಿಗೆ ಸನ್ಮಾನಿಸಿ ಮಾತನಾಡಿದ ಅವರು, ಈ ಮೊದಲು ಮುದ್ದೇಬಿಹಾಳ ತಾಲೂಕಿನಲ್ಲಿದ್ದ ಸರ್ಕಾರಿ ನೌಕರರ ಸಂಘವು ಈಗ ತಾಳಿಕೋಟೆ ನೂತನ ತಾಲೂಕಾ ಕೇಂದ್ರವಾಗಿ ಬೇರ್ಪಟ್ಟಿದ್ದರಿಂದ ಹೊಸದಾಗಿ ಅಸ್ಥಿತ್ವಕ್ಕೆ ಬಂದಿದ್ದು ಸ್ವಾಗತಾರ್ಹ ಎಂದರು.
ಸಂಘದ ಸದಸ್ಯರ ಅಭಿಪ್ರಾಯದ ಮೇರೆಗೆ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ ಅವರು ನಿಂಗನಗೌಡರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಇದರಿಂದ ಅವರಿಗೆ ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದಂತಾಗಿದೆ. ಸರ್ಕಾರಿ ನೌಕರರ ಸಂಘದಲ್ಲಿ ಈಗಾಗಲೇ ಸಾಕಷ್ಟು ಜವಾಬ್ದಾರಿಗಳನ್ನು ನಿರ್ವಹಿಸಿರುವ ಇವರಿಗೆ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವುದರೊಂದಿಗೆ ಅವರಿಗೆ ಶಕ್ತಿ ತುಂಬುವಂತಹ ಕಾರ್ಯ ಮಾಡಲಿದ್ದಾರೆ ಎಂದರು.
ಶಿವು ಕಲಬುರಗಿ (ಬೊಮ್ಮನಹಳ್ಳಿ) ಮಾತನಾಡಿ, ಪಿಡಿಒ ನಿಂಗಣ್ಣ ದೊಡಮನಿ ಅವರು ಸಂಘಟನಾತ್ಮಕ ಶಕ್ತಿ ಮೂಲಕ ಬೆಳೆದು ಬಂದವರಾಗಿದ್ದಾರೆ. ಸಾಮಾನ್ಯವಾಗಿ ಸಮಸ್ಯೆಗಳನ್ನು ನೀಗಿಸುವ ತಾಕತ್ತು ಅವರಲ್ಲಿದೆ. ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಹುದ್ದೆಯಿಂದ ಇನ್ನಷ್ಟು ಹೆಚ್ಚಿನ ಜವಾಬ್ದಾರಿಗಳು ಅವರಿಗೆ ಸಿಗಲಿ ಎಂದು ಆಶಿಸಿದರು.
ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಮಲಕಣ್ಣ ಮಸರಕಲ್ಲ, ಗ್ರಾಪಂ ಸದಸ್ಯ ಯಮನಪ್ಪ ಮಸರಕಲ್ಲ, ಶಿಕ್ಷಕರ ಸಂಘದ ಕಾರ್ಯದರ್ಶಿ ಸುರೇಶ ಬೀರಗೊಂಡ ಮಾತನಾಡಿ, ತಾಲೂಕಿನಲ್ಲಿ ಅಭಿವೃದ್ಧಿ ಅಧಿಕಾರಿಗಳು ಬೆರಳೆಣಿಕೆಯಷ್ಟು ಇದ್ದರೂ ಕೂಡಾ ಎಲ್ಲ ನೌಕರರ ಸಮಸ್ಯೆ ನೀಗಿಸುವ ಸಾಮರ್ಥ್ಯ ನಿಂಗಣ್ಣ ದೊಡಮನಿ ಅವರಲ್ಲಿದೆ. ಈ ಕಾರಣದಿಂದ ಎಲ್ಲ ಶಿಕ್ಷಕಕರು ಅವರನ್ನು ಬೆಂಬಲಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರಿಗೆ ಸಿಕ್ಕಿರುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಾರೆಂಬ ನಂಬಿಕೆ ಎಲ್ಲ ನೌಕರರಲ್ಲಿದೆ ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ನಿಂಗಣ್ಣ ದೊಡಮನಿ ಮಾತನಾಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರನ್ನಾಗಿ ತಾಲೂಕಿನ ಎಲ್ಲ ನೌಕರರ ಒಮ್ಮತದಿಂದ ಆಯ್ಕೆಗೊಳಿಸಿದ್ದಾರೆ. ಅವರು ನನ್ನ ಮೇಲಿಟ್ಟ ವಿಶ್ವಾಸಕ್ಕೆ ಪ್ರೀತಿಗೆ ಸದಾ ಋಣಿಯಾಗಿದ್ದೇನೆ. ಸರ್ಕಾರಿ ನೌಕರರ ಸಂಘವನ್ನು ಜಿಲ್ಲೆಯಲ್ಲಿಯೇ ಮಾದರಿ ಸಂಘವನ್ನಾಗಿ ಬೆಳೆಸುವ ಉತ್ಸುಕತೆ ನನ್ನಲ್ಲಿದ್ದು ಅದಕ್ಕೆ ಎಲ್ಲ ನೌಕರರ ಸಹರಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಮುಖಂಡರುಗಳಾದ ಶಂಭು ಹಂದಿಗನೂರ, ಸಂತೋಷ ಹಜೇರಿ, ಜಾಕೀರ್ ಹುಸೇನ್, ಶಂಕರಗೌಡ ಪಾಟೀಲ, ರಮೇಶ ವಣಕ್ಯಾಳ (ಅಸ್ಕಿ), ಮಲ್ಲನಗೌಡ ಪಾಟೀಲ, ಬಸನಗೌಡ ಬಿರಾದಾರ, ದಶರಥಗೌಡ ದೊಡಮನಿ, ಶರಣ ಕುಂಬಾರ ಇದ್ದರು. ಶಿವಶರಣ ಅಲ್ಲಾಪುರ ನಿರೂಪಿಸಿದರು.