Advertisement

ಖಾಸಗಿ ಆಸ್ಪತ್ರೆಗಳಿಗೆ ಸರಕಾರಿ ಆಸ್ಪತ್ರೆಗಳು ಪೈಪೋಟಿ ನೀಡುವಂತಾಗಲಿ

10:22 AM Sep 30, 2019 | Sriram |

ಉಡುಪಿ: ಸರಕಾರಿ ಆಸ್ಪತ್ರೆಗಳು ಕೂಡ ಉತ್ತಮ ಸೌಲಭ್ಯಗಳನ್ನು ಹೊಂದಿ ಉತ್ತಮ ಸೇವೆ ನೀಡುವ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುವಂತಾಗಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

Advertisement

ಶನಿವಾರ ಅಂಬಲಪಾಡಿ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಮತ್ತು ಮಣಿಪಾಲದ ಮಾಹೆ ಸಹಯೋಗದಲ್ಲಿ 30,000 ಕುಟುಂಬಗಳ 1.35 ಲಕ್ಷ ಫ‌ಲಾನುಭವಿಗಳಿಗೆ ನೀಡಲಾಗುವ ಆರೋಗ್ಯ ಸುರಕ್ಷಾ ಕಾರ್ಡ್‌ಗಳನ್ನು ಸಾಂಕೇತಿಕವಾಗಿ ವಿತರಿಸಿ ಅವರು ಮಾತನಾಡಿದರು.

ಬಡವರಿಗೂ ಉತ್ತಮ ಚಿಕಿತ್ಸೆ ದೊರೆಯುವಂತಾಗಬೇಕು. ಸರಕಾರಿ ಆಸ್ಪತ್ರೆಗಳು ಸುಧಾರಣೆಯಾಗಬೇಕು. ಜನರಿಗೆ ಸರಕಾರಿ ಆಸ್ಪತ್ರೆಗಳ ಮೇಲೆ ವಿಶ್ವಾಸ ಮೂಡಬೇಕು. ಅದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನಂತಹ ಸಂಘ-ಸಂಸ್ಥೆಗಳು ಸರಕಾರ ಮಾಡಬೇಕಾದ ಕೆಲಸವನ್ನು ಮಾಡುತ್ತಿವೆ. ಜಿ. ಶಂಕರ್‌ ಆರೋಗ್ಯ ಸುರಕ್ಷಾ ಕಾರ್ಡ್‌ನಂತಹ ಸೌಲಭ್ಯಗಳು ರಾಜ್ಯದ ಬೇರೆ ಜಿಲ್ಲೆಗಳಿಗೂ ದೊರೆಯುವಂತಾಗಬೇಕು ಎಂದು ಸಚಿವರು ಹೇಳಿದರು.

ಎಟಿಎಂ ಕಾರ್ಡ್‌ನಂತೆ
ಡಾ| ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್‌ ಮಾತನಾಡಿ, “ಟ್ರಸ್ಟ್‌ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಕಳೆದ 13 ವರ್ಷಗಳಿಂದ ಮಾಹೆಯವರ ಜತೆ ಸೇರಿ ಆರೋಗ್ಯ ಸುರಕ್ಷಾ ಕಾರ್ಡ್‌ಗಳನ್ನು ನೀಡುತ್ತಿದೆ. ಇದು ಎಟಿಎಂನಂತೆ ಉಪಯೋಗಕ್ಕೆ ಬರುತ್ತಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಘುಪತಿ ಭಟ್‌ ಮಾತನಾಡಿ “ಈ ಹಿಂದೆ ಜಾರಿಯಲ್ಲಿದ್ದ ವಾಜಪೇಯಿ ಆರೋಗ್ಯ ಶ್ರೀ ಅಥವಾ ಯಶಸ್ವಿನಿಯಂತಹ ಕಾರ್ಡನ್ನು ಸರಕಾರ ರಾಜ್ಯದ ಜನರಿಗೆ ಒದಗಿಸಬೇಕು’ ಎಂದರು.

Advertisement

ಬೇಡಿಕೆ ಹೆಚ್ಚಳ
ಮಾಹೆ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, “ಮಣಿಪಾಲ ಆರೋಗ್ಯಕಾರ್ಡ್‌ನಿಂದ ಸಿಗುವ ಸೌಲಭ್ಯದ ಮೊತ್ತವನ್ನು 30,000ದಿಂದ 50,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಕಾರ್ಡ್‌ಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಆದರೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಸೇವೆ ಒದಗಿಸುವುದು ಕೂಡ ನಮ್ಮ ಆದ್ಯತೆಯಾಗಿದೆ. ಬಡವರಿಗೂ ಉತ್ತಮ ಸೌಲಭ್ಯ ಒದಗಿಸುವುದು ನಮ್ಮ ಉದ್ದೇಶ’ ಎಂದು ಹೇಳಿದರು.

ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ವಿನಯ್‌ ಕರ್ಕೇರ ಮಲ್ಪೆ ಉಪಸ್ಥಿತರಿದ್ದರು. ಉಪಾಧ್ಯಕ್ಷ ಶಿವರಾಂ ಕೆ.ಎಂ. ಸ್ವಾಗತಿಸಿದರು. ಟ್ರಸ್ಟ್‌ ಸದಸ್ಯ ಶಂಕರ್‌ ಸಾಲ್ಯಾನ್‌
ವಂದಿಸಿದರು. ಚಂದ್ರೇಶ್‌ ಪಿತ್ರೋಡಿ ಅವರು ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next