ಬೆಂಗಳೂರು :ಬೆಳಗಾವಿ ವಿಚಾರದಲ್ಲಿ ತಿಳಿಗೇಡಿಗಳ ಪುಂಡಾಟಿಕೆ ಕುರಿತು ಸರಕಾರ ಮಾತಾಡುತ್ತೇವೆ ಅಂದರೆ ಸಾಕಾಗುವುದಿಲ್ಲ ಕೇಂದ್ರ ಸರಕಾರದ ಬಳಿ ನಿಯೋಗ ಕರೆದು ಕೊಂಡು ಹೋಗಿ ಮಹಾರಾಷ್ಟ್ರ ಸರಕಾರಕ್ಕೆ ಎಚ್ಚರಿಕೆ ಕೊಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಭಾನುವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇರುವವರು. ಯಾರೋ ತಿಳಿಗೇಡಿಗಳು ಪುಂಡಾಟಿಕೆ ಮಾಡಿದ್ದು, ಕಠಿಣ ಶಿಕ್ಷೆ ಕೊಡಬೇಕು. ನಮ್ಮ ರಾಜ್ಯದಲ್ಲಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ ಮಹಾರಾಷ್ಟ್ರಕ್ಕೆ ಎಚ್ಚರಿಕೆ ಕೊಡಬೇಕಾಗಿದೆ.
ಮಹಾರಾಷ್ಟ್ರದಲ್ಲಿ ನಮ್ಮ ಧ್ವಜ ಸುಟ್ಟಿದ್ದಾರೆ. ಚಿಂದಿ ಮಾಡ್ತೇನೆ ಅಂದರೆ ಆಗುವುದಿಲ್ಲ.ವಿಧಾನ ಸಭೆಯಲ್ಲಿ ಖಂಡನಾ ನಿರ್ಣಯ ಮಾಡಿದ್ದು, ಮುಖ್ಯಮಂತ್ರಿಗಳು ಕೇಂದ್ರ ಸರಕಾರದ ಬಳಿ ನಿಯೋಗ ಕರೆದುಕೊಂಡು ಹೋಗಿ, ಪ್ರಧಾನಿಗಳ ಜೊತೆ ಕುಳಿತು ಮಾತನಾಡಬೇಕು. ಮಹಾರಾಷ್ಟ್ರ ಮುಖ್ಯಮಂತ್ರಿ ಬಳಿ ಮಾತನಾಡಬೇಕು, ಅಲ್ಲಿಯ ಪುಂಡರಿಗೆ ಎಚ್ಚರಿಕೆ ಕೊಡಿಸಬೇಕು. ಸಂವಿಧಾನದ ಪ್ರಕಾರ ಕೆಲಸ ಮಾಡಬೇಕು ಎಂದರು.
ಕನ್ನಡ ಒಕ್ಕೂಟ ಕರೆ ನೀಡಿರುವ ಕರ್ನಾಟಕ ಬಂದ್ ಗೆ ನನ್ನ ನೈತಿಕ ಬೆಂಬಲವಿದೆ ಎಂದರು.
ಸರಕಾರ ಹೇರಿದ ನೈಟ್ ಕರ್ಫ್ಯೂ ಬಗ್ಗೆ ಪ್ರತಿಕ್ರಿಯಿಸಿ,ಒಮಿ ಕ್ರಾನ್ ಆತಂಕ ಇದೆ. ಕಾನೂನು ಸುವ್ಯವಸ್ಥೆಗೆ ಯಾವ ಕ್ರಮ ಕೈಗೊಳ್ಳಬೇಕು ಅದನ್ನು ಸರಕಾರ ಕೈಗೊಂಡಿದೆ, ಅದಕ್ಕೆ ನಮ್ಮ ಬೆಂಬಲವಿದೆ ಎಂದರು.
ಕಾಂಗ್ರೆಸ್ ನಲ್ಲಿ ಸಾಮೂಹಿಕ ನಾಯಕತ್ವ
‘ನನ್ನ ನೇತೃತ್ವದಲ್ಲಿ ಚುನಾವಣೆ’ ಎಂಬ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಕುರಿತಾಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ, ನಾನು ವಿಪಕ್ಷ ನಾಯಕ ನಿದ್ದೇನೆ, ಇನ್ನೂ ಹಿರಿಯ ನಾಯಕರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಯುತ್ತದೆ ಎಂದರು.