ಬೆಳಗಾವಿ: ರಾಜ್ಯ ಸಚಿವ ಸಂಪುಟದಲ್ಲಿ ಜಿಲ್ಲೆಯ ನಾಲ್ವರಿಗೆ ಸಚಿವ ಸ್ಥಾನ ಸಿಕ್ಕರೆ ಒಳ್ಳೆಯದಾಗುತ್ತದೆ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ ಅಂಗಡಿ ಅಭಿಪ್ರಾಯಪಟ್ಟರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ನೀಡುವುದು ವರಿಷ್ಠರಿಗೆ ಬಿಟ್ಟ ವಿಚಾರ. ಅತಿ ದೊಡ್ಡ ಜಿಲ್ಲೆ ಆಗಿರುವುದರಿಂದ ನಾಲ್ವರು ಶಾಸಕರಿಗೆ ಅವಕಾಶ ಸಿಗಲಿ ಎಂದರು. ನೂತನ ಬಿಜೆಪಿ ಸರ್ಕಾರ ಸೋಮವಾರ ಬಹುಮತ ಸಾಬೀತುಪಡಿಸುವ ವಿಚಾರ ಸದನದೊಳಗೆ ನಡೆಯುತ್ತದೆ. ಶಾಸಕರನ್ನು ಅನರ್ಹತೆ ಮಾಡುವ ಮೂಲಕ ಹೆದರಿಸುವ ಕೆಲಸ ಮಾಡಬಾರದು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವಮಾನ ಮಾಡಲು ಕಾಂಗ್ರೆಸ್ ಹಾಗೂ ಜೆಡಿಎಸ್ ಅನೈತಿಕ ಸಂಬಂಧ ಬೆಳೆಸಿದ್ದವು. ಹೀಗಾಗಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದರೂ ಅಧಿಕಾರ ಸಿಕ್ಕಿರಲಿಲ್ಲ. ಈಗ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದು, ಉತ್ತಮ ಆಡಳಿತ ನೀಡಲಿದ್ದಾರೆ ಎಂದರು.