ಯಾದಗಿರಿ: ಮನೆಗೊಂದು ಜೇನು ಪೆಟ್ಟಿಗೆ ಅಳವಡಿಸಿಕೊಳ್ಳಲು ಸಾಧ್ಯವಾಗದಿದ್ದಲ್ಲಿ ಕನಿಷ್ಠ ನೈಸರ್ಗಿಕ ಜೇನು ಕುಟುಂಬಗಳನ್ನು ಕಾಪಾಡಬೇಕೆಂದು ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಮುಂದಾಳು ಡಾ| ರೇವಣಪ್ಪ
ಕರೆ ನೀಡಿದರು.
ನಗರದ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದಲ್ಲಿ ನಡೆದ ವಿಶ್ವ ಜೇನು ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಜೇನು ಕೊಯ್ಲು ಮಾಡುವಾಗ ನೋಣಗಳನ್ನು ಚದುರಿಸಲು ಸ್ವಲ್ಪ ಹೊಗೆ ಹಾಕಬೇಕು ವಿನಃ ಇಡೀ ಟೊಂಗೆಗೆ ಬೆಂಕಿ ಹಚ್ಚುವುದು ಸಾಮಾನ್ಯವಾಗಿದ್ದು, ಇದನ್ನು ನಿಲ್ಲಿಸುವಂತೆ ತಿಳಿ ಹೇಳಿದರು. ಜೇನು ಸಾಕಾಣಿಕೆ
ಮಹತ್ವ ಮತ್ತು ಅವುಗಳ ಶಿಸ್ತು, ಜೇನು ತುಪ್ಪ ತಯಾರಿಸುವುದಕ್ಕೆ ಪಡುವ ಪರಿಶ್ರಮ, ಛಲದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ತೋ.ವಿ.ಶಿ.ಘಟಕದ ಸಹಾಯಕ ಪ್ರಾಧ್ಯಾಪಕ ಡಾ| ಪ್ರಶಾಂತ ಮಾತನಾಡಿ, ಜೇನುಗಳ ಪ್ರಭೇದಗಳ (ಹೆಜ್ಜೆನು, ಮುಜಂಟಿ ಜೇನು, ಕೋಲು ಜೇನು ಹಾಗೂ ತುಡುವೆ ಜೇನು ಎಂಬ ದೇಶೀಯ ಮತ್ತು ಯುರೋಪಿನ ಜೇನು ಎನ್ನುವ ವಿದೇಶಿ ಜೇನು) ಪರಿಚಯ ಮಾಡಿದರು. ಇವುಗಳಲ್ಲಿ ತುಡುವೆ ಮತ್ತು ಯುರೋಪಿಯನ್ ಜೇನುಗಳನ್ನು ಕೃಷಿ ಭೂಮಿಗಳಲ್ಲಿ ಜೇನು ಪೆಟ್ಟಿಗೆಗಳ ಸಹಾಯದಿಂದ ಸಾಕಬಹುದಾಗಿದೆ ಎಂದು ತಿಳಿಸಿದರು.
ಜೇನು ಸಾಕಾಣಿಕೆ ಪ್ರಾರಂಭಿಕ ವೆಚ್ಚ ಪ್ರತಿ ಕುಟುಂಬಕ್ಕೆ ಅಥವಾ ಪೆಟ್ಟಿಗೆಗೆ ಸುಮಾರು ರೂ. 2ರಿಂದ 3 ಸಾವಿರ ಆಗಿದ್ದು, ಸುಮಾರು 25 ಜೇನು ಪೆಟ್ಟಿಗೆ ಸಾಕಾಣಿಕೆ ಪ್ರಾರಂಭಿಸುವಾಗ ತಗಲುವ ವೆಚ್ಚ 75 ಸಾವಿರದಿಂದ 80 ಸಾವಿರ ಆಗುತ್ತದೆ. ನಂತರ ಪ್ರತಿ ವರ್ಷ ಪ್ರತಿ ಕುಟುಂಬದಿಂದ 10ರಿಂದ 15 ಕಿ.ಗ್ರಾಂ. ಜೇನುತುಪ್ಪ ತೆಗೆಯಬಹುದಾಗಿದ್ದು, ಅದರಿಂದ ಮೊದಲನೇ ವರ್ಷ 25ರಿಂದ 37500 ಸಾವಿರ ಲಾಭ ಪಡೆಯಬಹುದು. ನಂತರದ ವರ್ಷಗಳಲ್ಲಿ ತಗಲುವ ವೆಚ್ಚ ಕೇವಲ ರೂ. 5,000ರಿಂದ 6000 ಗಳಾಗಿದ್ದು, ನಿವ್ವಳ ಲಾಭ ರೂ. 25000 ರಿಂದ 35000. ಪ್ರಾರಂಭದ ವರ್ಷಗಳಲ್ಲಿ ಜೇನು ಸಾಕಾಣಿಕೆಯಿಂದ ಹೆಚ್ಚು ಲಾಭ ಇಲ್ಲದಿದ್ದರೂ ಸಹ, 3ರಿಂದ 4 ವರ್ಷಗಳ ನಂತರ ಅಧಿಕ ಲಾಭವನ್ನು ಪಡೆಯಬಹುದು. ಪ್ರತಿ ಎಕರೆಗೆ 3-5 ಜೇನುಗೂಡುಗಳನ್ನು ಇಡುವುದರಿಂದ ಹೆಚ್ಚಿನ ಇಳುವರಿಯನ್ನು ನಿರೀಕ್ಷಿಸಬಹುದು ಮತ್ತು ಆರ್ಥಿಕ ಲಾಭಗಳಿಸಬಹುದು ಎಂದರು. ಈ ಕಾರ್ಯಕ್ರಮದಲ್ಲಿ 20ಕ್ಕಿಂತ ಹೆಚ್ಚು ರೈತರು ಇದ್ದರು.