Advertisement

ಬಿಜೆಪಿ ಗೆಲುವಿಗೆ ಎಲ್ಲರೂ ಶ್ರಮಿಸೋಣ

04:09 PM Jul 09, 2018 | Team Udayavani |

ದಾವಣಗೆರೆ: ಮುಂದಿನ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಮನವಿ ಮಾಡಿದ್ದಾರೆ.

Advertisement

ಭಾನುವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಉತ್ತರ ವಿಧಾನಸಭಾ ಕ್ಷೇತ್ರ ಹಿಂದುಳಿದ ವರ್ಗಗಳ ಮೋರ್ಚಾದಿಂದ ಏರ್ಪಡಿಸಿದ್ದ ಅಭಿನಂದನೆ ಮತ್ತು ಎಲ್ಲ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 35ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಬೇಕು. ಹಿಂದುಳಿದ ವರ್ಗಗಳಿಗೆ ಮೀಸಲಿರುವ 10 ವಾರ್ಡ್‌ನಲ್ಲೂ ಗೆಲ್ಲಬೇಕು. ರವೀಂದ್ರನಾಥ್‌ ಹೇಳಿದ್ದಾರೆ, ಗೆಲ್ಲಿಸಲಿ ನೋಡೋಣ ಎಂದು ಕಾರ್ಯಕರ್ತರು ಹಿಂದಕ್ಕೆ ಸರಿಯಬಾರದು ಎಂದು ಹಾಸ್ಯ ಚಟಾಕಿ ಹಾರಿಸಿದ ಅವರು, ಎಲ್ಲರೂ ಸಂಘಟಿತರಾಗಿ ಮಹಾನಗರ ಪಾಲಿಕೆ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದರು. 

ಈಚೆಗೆ ನಡೆದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಅತಿ ಹೆಚ್ಚಿನ ಮಟ್ಟದ ಕೆಲಸ ಮಾಡುವ ಮೂಲಕ ನನ್ನನ್ನು ಗೆಲ್ಲಿಸಿದ್ದೀರಿ. ಹಾಗಾಗಿ ನಾನು ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದೆ ಬರುವಂತಹ ಎಲ್ಲ ಚುನಾವಣೆಯಲ್ಲಿ ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸೋಣ ಎಂದು ತಿಳಿಸಿದರು. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಬಿಜೆಪಿಯವರೇ ಟಿಕೆಟ್‌ ಸಿಗಲಿಲ್ಲ ಎಂದು ಪಕ್ಷೇತರರಾಗಿ, ಬೇರೆ ಪಕ್ಷದಿಂದ ನಿಂತ ಪರಿಣಾಮ ನಾವು ಹಲವಾರು ಕ್ಷೇತ್ರದಲ್ಲಿ ಅತಿ ಕಡಿಮೆ ಮತಗಳಲ್ಲಿ ಸೋಲಬೇಕಾಯಿತು. ಹಾಗಾಗಿ 104 ಸ್ಥಾನ ಬಂದರೂ ಅಧಿಕಾರಕ್ಕೆ ಬರಲಿಕ್ಕೆ ಆಗಲಿಲ್ಲ. ಆಗ ನಮ್ಮ ವಿರುದ್ಧ ಚುನಾವಣೆ ನಿಂತವರೇ ನಾವು ನಿಲ್ಲಬಾರದಿತ್ತು. ಎಂತಹ ಕೆಲಸ ಮಾಡಿದೆವಲ್ಲ ಎಂದು ಕೊಳ್ಳುತ್ತಿದ್ದಾರೆ.

ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಆ ರೀತಿ ಆಗಬಾರದು. ಯಾರಿಗೇ ಟಿಕೆಟ್‌ ಕೊಟ್ಟರೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. 

Advertisement

ವಿಧಾನ ಪರಿಷತ್‌ನ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್‌. ಶಿವಯೋಗಿಸ್ವಾಮಿ ಮಾತನಾಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳುವಂತೆ ಚುನಾವಣೆಯಲ್ಲಿ ಗೆಲ್ಲಲು ಸಂಘಟನೆ, ಅಭ್ಯರ್ಥಿ, ಪಕ್ಷದ ಪರವಾದ ವಾತಾವರಣ ನಿರ್ಮಾಣ ಮತ್ತು ಮತದಾನದ ದಿನ ಮತ ಹಾಕಿಸುವುದು ಆತೀ ಮುಖ್ಯ. ಈ ಅಂಶಗಳ ಪಾಲನೆ ಮಾಡಿದರೆ ಚುನಾವಣೆಯಲ್ಲಿ ಗೆಲ್ಲಲಿಕ್ಕೆ ಸಾಧ್ಯ ಎಂದು ಹೇಳಿದ್ದಾರೆ. ನಾವು ಸಹ ಅದೇ ರೀತಿ ಕೆಲಸ ಮಾಡಿದಲ್ಲಿ ಮಹಾನಗರ ಪಾಲಿಕೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಗೆಲುವು ಶತಃಸಿದ್ಧ ಎಂದು ತಿಳಿಸಿದರು. 

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿನ ಆಡಳಿತ ಬದಲಾವಣೆ ಮಾಡಬೇಕು. ಬಿಜೆಪಿಯವರಿಗೆ ಅವಕಾಶ ನೀಡಬೇಕು ಎಂಬುದು ಜನರ ಮನಸ್ಸಿಗೆ ಬಂದಿದೆ. ಅದು ಕಾರ್ಯಸಾಧು ಆಗಲು ಒಂದು ತಂಡವಾಗಿ ಕೆಲಸ ಮಾಡಬೇಕು. ಆಗ ನಿಶ್ವಿ‌ತವಾಗಿಯೂ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೈತ ಮೋರ್ಚಾ ಮುಖಂಡ ಬಿ.ಎಂ. ಸತೀಶ್‌ ಮಾತನಾಡಿ, ಕಾಂಗ್ರೆಸ್‌ ಹಿಂದುಳಿದ ವರ್ಗದವರನ್ನು ಬರೀ ಮತಬ್ಯಾಂಕ್‌ನಂತೆ ನೋಡುತ್ತದೆಯೇ ಹೊರತು ಹಿಂದುಳಿದ ವರ್ಗಗಳಿಗೆ ಯಾವುದೇ ಅವಕಾಶ ನೀಡಿಲ್ಲ. ಸಿದ್ದರಾಮಯ್ಯ ಮಾತೆತ್ತಿದರೆ ಅಹಿಂದ ಪರ ಎಂದು ಹೇಳುತ್ತಾರೆ. ಈಚೆಗೆ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೂವರಿಗೆ ಅವಕಾಶ ಕೊಟ್ಟಿದೆ. ಅದೇ ಕಾಂಗ್ರೆಸ್‌ ಒಬ್ಬರಿಗೆ ಮಾತ್ರ ಅವಕಾಶ ನೀಡಿದೆ. ಮಹಾನಗರ ಪಾಲಿಕೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕುತಂತ್ರವನ್ನು ಜನರಿಗೆ ಮುಟ್ಟಿಸುವ ಮೂಲಕ ಬಿಜೆಪಿ ಗೆಲ್ಲಿಸೋಣ ಎಂದು ಮನವಿ ಮಾಡಿದರು.

ಉತ್ತರ ವಿಧಾನಸಭಾ ಕ್ಷೇತ್ರ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಅಧ್ಯಕ್ಷ ಸೊಕ್ಕೆ ನಾಗರಾಜ್‌, ಮಂಜುನಾಥ್‌, ಕೆ.ಎನ್‌. ಓಂಕಾರಪ್ಪ ಮಾತನಾಡಿದರು. ನಗರಪಾಲಿಕೆ ಸದಸ್ಯ ಡಿ.ಎನ್‌. ಕುಮಾರ್‌, ಉತ್ತರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಮುಕುಂದಪ್ಪ, ಪಿ.ಎಸ್‌. ಜಯಣ್ಣ, ಶಿವಾಜಿರಾವ್‌ ಪಾಟೀಲ್‌, ಎಚ್‌.ಎನ್‌. ಶಿವಕುಮಾರ್‌, ಚಂದ್ರಶೇಖರ್‌, ಸವಿತಾ ರವಿಕುಮಾರ್‌, ಸಿದ್ದಲಿಂಗಪ್ಪ, ಹನುಮಂತಪ್ಪ ಇತರರು ಇದ್ದರು. ಶೋಭಾ ಪ್ರಾರ್ಥಿಸಿದರು. ಸೌಮ್ಯ ಸ್ವಾಗತಿಸಿದರು.

ಎಚ್‌ಡಿಕೆ ಸ್ಟ್ರ್ಯಾಟಜಿ ಗೊತ್ತೇ ಆಗೊಲ್ಲ ದಾವಣಗೆರೆ: ರಾಜ್ಯದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರ ತಂತ್ರಗಾರಿಕೆ… ಯಾರಿಗೂ ಅಷ್ಟೊಂದು ಸುಲಭವಾಗಿ ಅರ್ಥವಾಗುವುದೇ ಇಲ್ಲ ಎಂದು ವಿಧಾನ ಪರಿಷತ್‌ನ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್‌. ಶಿವಯೋಗಿಸ್ವಾಮಿ ಹೇಳಿದ್ದಾರೆ. 

ಭಾನುವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಉತ್ತರ ವಿಧಾನಸಭಾ ಕ್ಷೇತ್ರ ಹಿಂದುಳಿದ ವರ್ಗಗಳ ಮೋರ್ಚಾದಿಂದ ಏರ್ಪಡಿಸಿದ್ದ ಅಭಿನಂದನೆ ಮತ್ತು ಎಲ್ಲ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ದೇವೇಗೌಡರ ಸ್ಟ್ರ್ಯಾಟಜಿ ಅರ್ಥ ಮಾಡಿಕೊಳ್ಳಲಿಕ್ಕೆ ಆಗುವುದೇ ಇಲ್ಲ. ಇನ್ನು ದೇವೇಗೌಡರ ಪ್ರಾಡಕ್ಟ್ ಕುಮಾರಸ್ವಾಮಿಯವರ ಸ್ಟ್ರ್ಯಾಟಜಿ ಗೊತ್ತೇ ಆಗುವುದಿಲ್ಲ ಎಂದರು.

ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳ ವಿರೋಧಿಸಿ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು, ಮಾತ್ರವಲ್ಲ, ಸಂಸತ್‌ ಅಧಿವೇಶನಕ್ಕೆ ಸೈಕಲ್‌ನಲ್ಲೇ ಬಂದಿದ್ದರು. ಕುಮಾರಸ್ವಾಮಿ ಬಜೆಟ್‌ನಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಿಸಿದ್ದಾರೆ. ಈಗ ರಾಹುಲ್‌ ಗಾಂಧಿ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ಬಜೆಟ್‌ನಲ್ಲಿ ಕೇವಲ ರಾಮನಗರ,  ಮೈಸೂರು, ಮಂಡ್ಯ, ಹಾಸನಕ್ಕೆ ಮಾತ್ರ ಹೆಚ್ಚಿನ ಹಣ ಕೊಟ್ಟಿದ್ದಾರೆ. ಆ ಬಗ್ಗೆ ಅವರನ್ನು ಕೇಳಿದರೆ ಜೆಡಿಎಸ್‌ಗೆ ಹೆಚ್ಚಿನ ಮತ ಕೊಟ್ಟವರಿಗೆ ಹೆಚ್ಚಿನ ಹಣ ಕೊಟ್ಟರೆ ತಪ್ಪೇನು… ಎಂದು ನಮ್ಮನ್ನು ಪ್ರಶ್ನಿಸುತ್ತಾರೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಓಟಿಗಾಗಿ ಜಾತಿ, ಧರ್ಮ ಒಡೆಯುವ ಕೆಲಸ ಮಾಡಿದರು. ರಾಜ್ಯದ ಜನರು ಅಂತಹವರಿಗೆ ತಕ್ಕ ಪಾಠ ಕಲಿಸಿದರು. ಸಿದ್ದರಾಮಯ್ಯ ಈಗ ಕೆಲವರ ಬಳಿ ಎಂ.ಬಿ. ಪಾಟೀಲ್‌ ಮಾತು ಕೇಳಿ ತಪ್ಪು ಮಾಡಿದೆ ಎಂದು ಹೇಳುತ್ತಿದ್ದಾರಂತೆ. ಎಂ.ಬಿ. ಪಾಟೀಲ್‌ ಗೆದ್ದರೂ ಸಚಿವರಾಗಲು ಆಗುತ್ತಿಲ್ಲ. ಇದರಿಂದ ಜನರು ಸಂಸ್ಕಾರ ನೀಡುವಂತಹ ಧರ್ಮವನ್ನು ಒಡೆಯುವುದನ್ನು ಒಪ್ಪುವುದೇ ಇಲ್ಲ, ತಕ್ಕ ಪಾಠ ಕಲಿಸುತ್ತಾರೆ ಎಂಬುದು ಗೊತ್ತಾಗುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next