Advertisement

ಕೇಂದ್ರದ ಯೋಜನೆ ಎಲ್ಲರಿಗೂ ಸಿಗಲಿ

11:56 AM Jun 15, 2019 | Suhan S |

ಕೋಲಾರ: ಬಡವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಸರ್ಕಾರವು ಸಾಕಷ್ಟು ಯೋಜನೆ ಜಾರಿಗೆ ತರಲಾಗುತ್ತಿದೆ. ಆದರೆ, ಕೆಲವರಿಗೆ ಮಾತ್ರ ಸಿಗುತ್ತಿದೆ ಎಂದು ಸಂಸದ ಮುನಿಸ್ವಾಮಿ ಆರೋಪಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಚ್ಛ ಭಾರತ ನಿರ್ಮಾಣಕ್ಕಾಗಿ ಸರ್ಕಾರ ಸಾಕಷ್ಟು ಶ್ರಮವಹಿಸುತ್ತಿದೆ. ಆದರೆ, ನಗರಸಭೆ ಸೂಕ್ತವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಜಿಲ್ಲಾ ಕೇಂದ್ರದಲ್ಲೇ ಕಸದ ರಾಶಿ ರಾರಾಜಿಸುತ್ತಿದೆ. ಸ್ವಚ್ಛಗೊಳಿಸಬೇಕೆಂಬ ಇಚ್ಛಾಶಕ್ತಿ ಇಲ್ಲವೇ ಎಂದು ಪ್ರಶ್ನಿಸಿದರು.

ಸ್ವಚ್ಛತೆ ಮಾಡಿ: ಸ್ವಚ್ಛ ಭಾರತ ಜಿಲ್ಲಾ ಕೇಂದ್ರದಿಂದ ಆರಂಭವಾಗಬೇಕು. ಎಲ್ಲಾ ಸರ್ಕಾರಿ ಇಲಾಖೆಗಳ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಬೇಕು. ತಾನೂ ಭಾಗವಹಿಸುವುದರ ಜೊತೆಗೆ 1 ಸಾವಿರಕ್ಕೂ ಹೆಚ್ಚು ಯುವಕರನ್ನು ಪಾಲ್ಗೊಳ್ಳುವಂತೆ ಪ್ರೇರೇಪಿಸಿ ತರಲಾಗುವುದು. ನಂತರ ತಾಲೂಕು ಕೇಂದ್ರಗಳಲ್ಲಿ ಸಹ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲು ಸೂಚಿಸಿದರು.

ಬೆಂಗಳೂರಿಗೆ ವಲಸೆ: ಜಿಲ್ಲೆಯು 14 ವರ್ಷಗಳಿಂದ ಸತತ ಬರಗಾಲಕ್ಕೆ ತುತ್ತಾಗಿದೆ. ಅಂತರ್ಜಲ ಮಟ್ಟವೂ ಸಂಪೂರ್ಣ ಕುಸಿದಿದೆ. ಸಾವಿರದಿಂದ 1500 ಅಡಿ ಆಳ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಹಾಗಾಗಿ ಸಾಕಷ್ಟು ಮಂದಿ ಕೃಷಿಯನ್ನು ಬಿಟ್ಟು ಬೆಂಗಳೂರಿಗೆ ವಲಸೆ ಹೋಗಿ, ಅಲ್ಲಿ 8 ರಿಂದ 10 ಸಾವಿರ ರೂ.ಗೆ ಹೋಟೆಲ್, ಕಾರ್ಖಾನೆಗಳಲ್ಲಿ ದುಡಿಯುವಂತಹ ಸ್ಥಿತಿ ಎದುರಾಗಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಬರ ನಿಯಂತ್ರಣಕ್ಕೆ ಸಸಿ ನೆಡಬೇಕು. ಇದೀಗ ಮಳೆಗಾಲ ಪ್ರಾರಂಭವಾಗಿದ್ದು, ಸಸಿ ನೆಡಲು ಇದು ಸರಿಯಾದ ಸಮಯ. ಗ್ರಾಪಂ ಮಟ್ಟದಲ್ಲಿ ಈ ಕೆಲಸ ಆಗಬೇಕು. ಸರ್ಕಾರಿ ಆಸ್ಪತ್ರೆ, ಕಚೇರಿ, ರಸ್ತೆ ಬದಿಯಲ್ಲಿ ಸಸಿ ನೆಟ್ಟು ಪರಿಸರ ಉಳಿಸಬೇಕು ಎಂದು ತಿಳಿಸಿದರು.

Advertisement

ಆ್ಯಂಬುಲೆನ್ಸ್‌ ನಂಬರ್‌ ಹಾಕಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಬಡವರು ಈ ಆಸ್ಪತ್ರೆಗಳಿಗೆ ಹೋದರೆ ಅವರನ್ನು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಎಂದು ಕಳುಹಿಸುವ ಸಾಕಷ್ಟು ನಿದರ್ಶಗಳಿವೆ. ಅದರ ಜೊತೆಗೆ ವೈದ್ಯರು ಕೇಂದ್ರ ಸ್ಥಾನದಲ್ಲೇ ಇದ್ದು, ಕೆಲಸ ಮಾಡಬೇಕು. ಅದರಂತೆ ಆ್ಯಂಬುಲೆನ್ಸ್‌ಗಳ ಬಗ್ಗೆ ಮಾಹಿತಿಯನ್ನು ಪ್ರತಿಯೊಂದು ಪಂಚಾಯ್ತಿ ಬಳಿ ಹಾಕಬೇಕೆಂದು ಹೇಳಿದರು.

ಸ್ಥಳೀಯರಿಗೆ ಉದ್ಯೋಗ ನೀಡಿ: ಕೈಗಾರಿಕೆ ಸ್ಥಾಪಿಸುವುದು ಜಿಲ್ಲೆಗಳ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಬೇಕೆಂದು. ಆದರೆ, ಸ್ಥಳೀಯರಿಗೆ ಅವಕಾಶ ನೀಡದೆ, ಜಮೀನು ನೀಡಿದವರಿಗೆ ಸಣ್ಣ ಪುಟ್ಟ ಕೆಲಸ ನೀಡಿ ಮೋಸ ಮಾಡಲಾಗುತ್ತಿದೆ. ಅಂತಹ ಕಂಪನಿಗಳ ಒಂದು ಸಭೆ ಮಾಡಿ, ಸ್ಥಳೀಯರಿಗೆ ಕೆಲಸ ನೀಡಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತರುವಂತೆ ಸೂಚಿಸಿ ಎಂದರು.

ತಿಂಗಳು ಸ್ವಚ್ಛ ಮೇವ ಜಯತೆ: ಜಿಪಂ ಸಿಇಒ ಜಿ.ಜಗದೀಶ್‌ ಮಾತನಾಡಿ, ಜಿಲ್ಲೆಯಲ್ಲಿ ಸ್ವಚ್ಛ ಮೇವ ಜಯತೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಸಿ ನೆಡಲಾಗುತ್ತದೆ. ಗ್ರಾಪನಿಂದ ಜಿಲ್ಲಾ ಮಟ್ಟದವರೆಗೆ ಈ ಕಾರ್ಯಕ್ರಮ ತಿಂಗಳು ನಡೆಯುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈಗಾಗಲೇ 1.08 ಲಕ್ಷ ಗಿಡಗಳನ್ನು ನೆಡಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 1 ಸಾವಿರ ಗಿಡಗಳನ್ನು ನೆಡಲಾಗುತ್ತಿದೆ. ಇನ್ನೂ ಸಸಿಗಳನ್ನು ನೆಡುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಯಶೋದಾ, ಅಪರ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next