ಹುಣಸೂರು: ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಬೇಕು. ವಿದ್ಯೆ ಮತ್ತು ವಿನಯ ಎರಡಕ್ಕೂ ಅವಿನಾಭಾವ ಸಂಬಂಧವಿದೆ. ಸಾಧಿಸಬೇಕೆನ್ನುವ ಹಠ, ಛಲ ನಿಮ್ಮಲ್ಲಿರಲಿ ಎಂದು ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಸಿ.ಆರ್.ಕೃಷ್ಣಕುಮಾರ್ ಸೂಚಿಸಿದರು.
ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೇರೆಯವರು ಟೀಕಿಸುತ್ತಾರೆಂಬ ಭಯ, ಮುಜುಗರ ಬೇಡ. ಫಸ್ಟ್ ರ್‍ಯಾಂಕ್ ಪಡೆದ ಮಕ್ಕಳು ಇಂದಿಗೂ ಜೀವನದಲ್ಲಿ ಸ್ಥಿರವಾಗಿ ನಿಂತಿರದ ಉದಾಹರಣೆಗಳು ನಮ್ಮ ಮುಂದಿವೆ.
ಜಸ್ಟ್ ಪಾಸ್ ಹುಡುಗರು ದಡ್ಡರು ಎಂಬ ಪರಿಕಲ್ಪನೆ ಖಂಡಿತ ಸರಿಯಲ್ಲ. ರೈತರ ಮಕ್ಕಳಿಗೆ ಆಂಗ್ಲಭಾಷೆ ಕಷ್ಟವಿರಬಹುದು. ಕೆಲ ಕುಟುಂಬದ ಬಡತನ ವಿದ್ಯಾಭ್ಯಾಸದ ತೊಡಕಿಗೆ ಕಾರಣವಾಗಿರಬಹುದು. ಅಂದ ಮಾತ್ರಕ್ಕೆ ಅವರ್ಯಾರು ದಡ್ಡರಲ್ಲ. ವಿಶೇಷವೆಂದರೆ ಇಂತಹ ನೋವನ್ನುಂಡವರೇ ಸಾಧನೆಯ ಶಿಖರಕ್ಕೆ ಏರಿದವರಾಗಿದ್ದಾರೆ. ಇದಕ್ಕೆ ನಮ್ಮ ಮುಂದೆ ಸಾಕಷ್ಟು ಸಾಧಕರ ಉದಾಹರಣೆಗಳಿವೆ.
ಸಕಾರಾತ್ಮಕವಾಗಿ ಆಲೋಚಿಸುವ ಗುಣ ಬೆಳೆಸಿಕೊಂಡು ಮನಸು ಮತ್ತು ದೇಹವನ್ನು ದಂಡಿಸುವವನು ಮಾತ್ರ ಪರಿಪೂರ್ಣ ವ್ಯಕ್ತಿತ್ವ ಹೊಂದುವ ಮೂಲಕ ಸಾಧಿಸಬಲ್ಲ, ಪಠ್ಯದ ಜೊತೆಗೆ ಹಾಡು, ಕುಣಿತ, ಆಟ ಎಲ್ಲದಲ್ಲರೂ ಭಾಗವಹಿಸಿದಲ್ಲಿ ಯಾವುದಾದರೊಂದರಲ್ಲಿ ಯಶಸ್ಸು ವಿದ್ಯಾರ್ಥಿಗೆ ಸಿಗಲಿದೆ ಎಂದರು.
ಪ್ರಾಂಶುಪಾಲ ಆನಂದ್‌ರಾಜ್ ಮಾತನಾಡಿ, ವಿದ್ಯಾರ್ಥಿಗಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಮತ್ತು ನಾಯಕತ್ವ ಗುಣ ಬೆಳೆಸಿಕೊಳ್ಳಲು ಇಂತಹ ವೇದಿಕೆಗಳು ಉತ್ತಮ ಅವಕಾಶ ನೀಡುತ್ತವೆ. ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಿರೆಂದರು.
ಸಮಾರಂಭದಲ್ಲಿ ಸಿಡಿಸಿ ಉಪಾಧ್ಯಕ್ಷ ಚಂದ್ರಶೇಖರ್,ಸದಸ್ಯರಾದ ರಮೇಶ್ ಬಾಬು, ಶೋಯೀಬ್ ಅಹಮದ್, ಮೋಹನ್‌ರಾವ್, ನಗರಸಭೆ ಪರಿಸರ ಎಂಜಿನಿಯರ್ ರವಿಕುಮಾರ್, ಇಂಟರ್ಯಕ್ಟ್ ಕ್ಲಬ್ ಅಧ್ಯಕ್ಷ ಶಾಹೀದ್ ಪಾಷಾ, ಅಧ್ಯಾಪಕರುಗಳಾದ ಆನಂದ್, ಸುದರ್ಶನ್ ಬಾಬು ಹಾಗೂ ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.