Advertisement

ವೈದ್ಯರು ವಿಶ್ವಾಸಾರ್ಹತೆ ಉಳಿಸಿಕೊಳ್ಳಲಿ

09:15 AM Jun 29, 2019 | Team Udayavani |

ಹುಬ್ಬಳ್ಳಿ: ವೈದ್ಯರು ರೋಗಿಗಳ ವಿಶ್ವಾಸಾರ್ಹತೆ ಮತ್ತು ನಂಬಿಕೆ ಉಳಿಸಿಕೊಳ್ಳುವ ಕಾರ್ಯ ಮಾಡಬೇಕೆಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು.

Advertisement

ಇಲ್ಲಿನ ಕಿಮ್ಸ್‌ ಆಸ್ಪತ್ರೆಯ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಶುಕ್ರವಾರ ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ವತಿಯಿಂದ ಕಿಮ್ಸ್‌ನ ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ಕೊಡಮಾಡಲಾದ ವಿವಿಧ ವೈದ್ಯಕೀಯ ಉಪಕರಣಗಳ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಬಹಳಷ್ಟು ಮಹಿಳೆಯರಿಗೆ ನವಜಾತ ಶಿಶುವಿನ ಬೆಳವಣಿಗೆ ಬಗ್ಗೆ ಅಷ್ಟೊಂದು ಮಾಹಿತಿ ಇರಲ್ಲ. ಅನೇಕ ತಾಯಂದಿರು ಹಾಗೂ ರೋಗಿಗಳಿಗೆ ಸೌಲಭ್ಯಗಳ ಬಗ್ಗೆ ಗೊತ್ತಿರಲ್ಲ. ವೈದ್ಯರು ಚಿಕಿತ್ಸೆ ಜತೆಗೆ ವೈದ್ಯಕೀಯ ಸೌಲಭ್ಯಗಳ ಮಾಹಿತಿ ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕೆಂದರು.

ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಕಿಮ್ಸ್‌ ಕೇಂದ್ರಬಿಂದುವಾಗಿದ್ದು, ವೈದ್ಯಕೀಯ ಸೌಲಭ್ಯಗಳ ಜತೆ ಮೂಲಸೌಕರ್ಯ ಒದಗಿಸಲು ಒತ್ತು ಕೊಡಲಾಗುವುದು. ರೋಟರಿ ಕ್ಲಬ್‌ನ ಸಾಮಾಜಿಕ ಕಾರ್ಯ ಶ್ಲಾಘನೀಯವಾದದ್ದು. ಅದರಲ್ಲೂ ಭಾರತವನ್ನು ಪೊಲೀಯೋ ಮುಕ್ತವಾಗಿ ಮಾಡುವಲ್ಲಿ ಗಮನಾರ್ಹ ಕಾರ್ಯ ಮಾಡಿದೆ ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ರೋಟರಿ ನವಜಾತ ಶಿಶು ಆರೈಕೆ ಕೇಂದ್ರ, ಇಎನ್‌ಟಿ ವಿಭಾಗ ಹಾಗೂ ಎನ್‌ಐಸಿಯು ಕರ್ತವ್ಯನಿರತ ವೈದ್ಯರ ಕೊಠಡಿ ಉದ್ಘಾಟಿಸಿದರು.

ಕಿಮ್ಸ್‌ನ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಕಿಮ್ಸ್‌ನಲ್ಲಿ 10-15 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಬಡ್ತಿ ಸಿಕ್ಕಿರಲಿಲ್ಲ. ಹಲವು ಕೊರತೆಗಳ ನಡುವೆಯೂ ಉತ್ತಮ ಸೌಲಭ್ಯ ನೀಡುತ್ತಿದೆ. ಇನ್ನಷ್ಟು ಸೌಲಭ್ಯಗಳ ಅವಶ್ಯವಿದೆ. ಈಗ 130 ಸಿಬ್ಬಂದಿಗೆ ಬಡ್ತಿ ದೊರೆತಿದೆ. ಶೀಘ್ರವೇ ಸುಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗ ಆರಂಭಿಸಲಾಗುವುದು. ನಂತರದ ದಿನಗಳಲ್ಲಿ ಸುಪರ್‌ ಸ್ಪೆಶಾಲಿಟಿ ವಿಭಾಗಗಳನ್ನು ಆರಂಭಿಸಲಾಗುವುದು. ಮಕ್ಕಳ ಮತ್ತು ತಾಯಿ ಘಟಕವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದರು.

Advertisement

ರೋಟರಿ ಚಾರಿಟೇಬಲ್ ಟ್ರಸ್ಟ್‌ ಚೇರ್ಮನ್‌ ಎಂ.ವಿ. ಕರಮರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನವಜಾತ ಶಿಶುಗಳ ಮರಣ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕಿಮ್ಸ್‌ ಆಸ್ಪತ್ರೆ ಮಕ್ಕಳ ವಿಭಾಗಕ್ಕೆ ಅವಶ್ಯವಿರುವ ವೈದ್ಯಕೀಯ ಉಪಕರಣಗಳನ್ನು ಕೊಡಲಾಗಿದೆ. ಅಂದಾಜು 30ಲಕ್ಷ ರೂ. ವೆಚ್ಚದಲ್ಲಿ ನವಜಾತ ಶಿಶುವಿನ ಹಾಸಿಗೆ ಪಕ್ಕದಲ್ಲೇ ತಪಾಸಣೆ ಮಾಡುವಂಥ ಅಲಾó ಸೋನೋಗ್ರಾಫಿಕ್‌ ಯಂತ್ರ, ಸಿರೀಂಜ್‌ ಪಂಪ್ಸ್‌, ಪಲ್ಸ್ ಓಕ್ಸಿಮೀಟರ್‌/ಮಲ್ಟಿಪರಾ ಮಾನಿಟರ್‌, ಓಟೋ ಅಕಾಸ್ಟಿಕ್‌ ಎಮಿಷನ್‌ ಯಂತ್ರಗಳನ್ನು ನೀಡಲಾಗಿದೆ ಎಂದರು.

ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ಅಧ್ಯಕ್ಷ ಅಬ್ದುಲ್ ಸಾದಿಕ್‌ ಮಾತನಾಡಿ, ರೋಟರಿ ಕ್ಲಬ್‌ ಸಮಾಜಮುಖೀ ಕಾರ್ಯ ಮಾಡುತ್ತಿದ್ದು, ಮುಂದುವರಿಸಿಕೊಂಡು ಹೋಗುತ್ತದೆ ಎಂದರು.

ಡಾ|ಜಿ.ಬಿ. ಸತ್ತೂರ, ಡಾ|ರಾಘವೇಂದ್ರ ದೇಸಾಯಿ, ರೋಟರಿ ಕ್ಲಬ್‌ನ ಕಾರ್ಯದರ್ಶಿ ಸುರೇಂದ್ರ ಪೋರವಾಲ ಮೊದಲಾದವರಿದ್ದರು. ಕಿಮ್ಸ್‌ನ ಮಕ್ಕಳ ವಿಭಾಗದ ಮುಖ್ಯಸ್ಥ ಡಾ| ಪ್ರಕಾಶ ವಾರಿ ಪ್ರಾಸ್ತಾವಿಕ ಮಾತನಾಡಿದರು. ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ| ರವೀಂದ್ರ ಗದಗ ಸ್ವಾಗತಿಸಿದರು. ಡಾ|ಶುಭಾ ಪ್ರಾರ್ಥಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next