Advertisement

Congress ನಾಯಕರಿಗೆ ತಾಕತ್ತಿದ್ದರೆ ಹರಿಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳಲಿ: ಯತ್ನಾಳ್

07:06 PM Sep 12, 2023 | keerthan |

ವಿಜಯಪುರ: ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರಿಗೆ ತಾಕತ್ತಿದ್ದರೆ ತಮ್ಮದೇ ಸರ್ಕಾರದ ನೇತೃತ್ವ ವಹಿಸಿರುವ ಸಿದ್ಧರಾಮಯ್ಯ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿರುವ ಬಿ.ಕೆ.ಹರಿಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳಲಿ ನೋಡೋಣ ಎಂದು  ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸವಾಲೆಸೆದಿದ್ದಾರೆ.

Advertisement

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ನಿಜಕ್ಕೂ ತಾಕತ್ತಿದ್ದರೆ ಹಿರಿಯ ನಾಯಕರಾಗಿರುವ ಹರಿಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.

ಯಾವುದೇ ಪಕ್ಷದಲ್ಲಿ ಮೈತ್ರಿ ವಿಷಯ ಬಂದಾಗ ಒಂದೊಂದು ರೀತಿಯ ಪ್ರತಿಕ್ರಿಯೆ ಇರುತ್ತದೆ, ಆದರೆ ನಮಗಂತೂ ಜೆಡಿಎಸ್ ಪಕ್ಷದೊಂದಿಗೆ ಬಿಜೆಪಿ ಮೈತ್ರಿ ವಿಷಯವಾಗಿ ಅಸಮಾಧಾನವಿಲ್ಲ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಇಡೀ ದೇಶವೇ ಬಯಸುತ್ತದೆ. ಹೀಗಾಗಿ ಅಭ್ಯರ್ಥಿ ಯಾರೇ ಇದ್ದರೂ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸಲು ಶ್ರಮಿಸುವುದಾಗಿ ಹೇಳಿದರು.

ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಮಾಡಿರುವ ಅವಹೇಳನದ ಹೇಳಿಕೆ ವಿರುದ್ಧ ಎಲ್ಲ ಕಾವಿಧಾರಿಗಳು, ಮಠಾಧೀಶರು ಧ್ವನಿ ಎತ್ತಬೇಕು. ಆದಿಚುಂಚನಗಿರಿ ಸ್ವಾಮಿಗಳಂತೆ ಇತರೆ ಮಠಾಧೀಶರೂ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.

ಅವಮಾನವಾದ ಸಂದರ್ಭದಲ್ಲೂ ಮಾತನಾಡದಿದ್ದರೆ ಇಂಥ ಸ್ವಾಮಿಗಳು ನಮಗೇಕೆ ಬೇಕು ಎಂದು ಹರಿಹಾಯ್ದ ಯತ್ನಾಳ್, ಕಾವಿ ಧರಿಸಿದ ಎಲ್ಲ ಸ್ವಾಮಿಗಳೂ ಸಭ್ಯರಲ್ಲ, ಕಾವಿಧಾರಿಗಳಲ್ಲೂ ಕೆಲವರು ಕಪಟಿಗರಿದ್ದಾರೆ ಎಂದರು.

Advertisement

ವಿಜಯಪುರ ನಗರದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಪೊಲೀಸ್ ಅನುಮತಿ ಪಡೆಯುವ ಅಗತ್ಯವಿಲ್ಲ. ಪೊಲೀಸರೇ ನಿಮ್ಮ ಗಣೇಶ ಮಂಡಳಿ ಬಳಿಗೆ ಬಂದು ಮಾಹಿತಿ ಸಂಗ್ರಹಿಸುತ್ತಾರೆ. ಅನುಮತಿ ಪಡೆಯಬೇಕು, ಹಣ ಪಡೆಯಬೇಕು ಅಂದರೆ ನಾವೂ ಹೋರಾಟ ಮಾಡುತ್ತೇವೆ. ಅಗತ್ಯ ಬಿದ್ದರೆ ಜೈಲ್ ಭರೋ ಚಳುವಳಿಗೂ ಸಿದ್ಧ ಎಂದು ಎಚ್ಚರಿಸಿದರು.

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಪೊಲೀಸರು ಕರೆಯುವ ಶಾಂತಿ ಸಭೆಗೆ ಯಾರೂ ಹೋಗುವ ಅಗತ್ಯವಿಲ್ಲ ಎಂದ ಬಿಜೆಪಿ ಹಿರಿಯ ಶಾಸಕ ಯತ್ನಾಳ, ಅನ್ಯ ಧರ್ಮೀಯರ ಹಬ್ಬಗಳ ಸಂದರ್ಭದಲ್ಲಿ ಇಲ್ಲದ ಶಾಂತಿ ಸಭೆ ಗಣೇಶೋತ್ಸವದ ಸಂದರ್ಭದಲ್ಲಿ ಮಾತ್ರ ಏಕೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next