Advertisement

ಕಾಂಗ್ರೆಸ್‌ ನಾಯಕರು ಬಹಿರಂಗ ಕ್ಷಮೆ ಯಾಚಿಸಲಿ: ಎನ್‌.ರವಿಕುಮಾರ್‌

09:03 PM May 24, 2020 | Sriram |

ಬೆಂಗಳೂರು: ಪ್ರಧಾನಮಂತ್ರಿ ಪರಿಹಾರ ನಿಧಿಯ ಹಣವನ್ನು ವೈಯಕ್ತಿಕ ಉದ್ದೇಶಕ್ಕೆ ಬಳಸಿದ್ದಾರೆ ಎಂದು ಜನರಿಗೆ ಸುಳ್ಳು ಮಾಹಿತಿ ನೀಡಿದ ಕಾಂಗ್ರೆಸ್‌ ಮತ್ತು ಅದರ ನಾಯಕರು ಬಹಿರಂಗ ಕ್ಷಮೆ ಯಾಚಿಸಬೇಕು. ಸರ್ಕಾರದ ಈ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಷಿ ಎನ್‌. ರವಿಕುಮಾರ್‌ ಆಗ್ರಹಿಸಿದ್ದಾರೆ.

Advertisement

ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹಾಗೂ ಪಿಎಂ ಕೇರ್‌ ನಿಧಿಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿರುವ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ರಾಜ್ಯದಲ್ಲಿ ದಾಖಲಾಗಿರುವ ದೂರನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಹಿಂಪಡೆಯಬಾರದು. ಸೋನಿಯಾ ಗಾಂಧಿ ಅವರ ಹೇಳಿಕೆ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ದೇಶಕ್ಕೊಂದು ಕಾನೂನು, ಕಾಂಗ್ರೆಸ್‌ ನವರಿಗೊಂದು ಕಾನೂನು ಇದೆಯೇ ಅಥವಾ ಕಾಂಗ್ರೆಸ್‌ ನವರು ಸಂವಿಧಾನವನ್ನು ಮೀರಿದವರೇ ಎಂದು ಪ್ರಶ್ನಿಸಿದ್ದಾರೆ.
ಸಂವಿಧಾನದ ಬಗ್ಗೆ ಅಪಾರ ನಂಬಿಕೆ ಮತ್ತು ಶ್ರದ್ಧೆಇದೆ ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್‌ ನಾಯಕರು, ಈಗ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ವಿರುದ್ಧ ದೂರು ದಾಖಲಾಗುತ್ತಿದಂತೆ ಪಲಾಯನವಾದಿಗಳಾಗುತ್ತಿದ್ದಾರೆ. ಈ ನೆಲೆದ ಕಾನೂನಿನ ಮೇಲೆ ಗೌರವವಿರಿಸಿ, ಕಾನೂನು ಮೂಲಕ ಹೋರಾಟ ಮಾಡುವುದನ್ನು ಬಿಟ್ಟು ಬ್ಲಾಕ್‌ ಮೇಲ್‌ ರಾಜಕಾರಣ ಮಾಡುತ್ತಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಹಲವು ಸುಳ್ಳು ಮೊಕದ್ದಮೆ ದಾಖಲಿಸಿ, ಕೀಳು ಮಟ್ಟದ ರಾಜಕೀಯ ಮಾಡಿದ್ದರು. ಈಗ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ವಿರುದ್ಧ ದಾಖಲಾಗಿರುವ ದೂರು ವಾಪಾಸ್‌ ಪಡೆಯಿರಿ ಎಂದು ಆಗ್ರಹಿಸುವುದು ಯಾವ ನ್ಯಾಯ? ಹಾಗಾದರೆ, ಕಾಂಗ್ರಸ್ನಿಂದ ಪತ್ರಕರ್ತ ಅರ್ನಾಬ್‌ ಗೋಸ್ವಾಮಿ ವಿರುದ್ಧ ದಾಖಲಾದ ದೂರುಗಳನ್ನು ಹಿಂದಕ್ಕೆ ಪಡೆಯುತ್ತಾರೇ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next