ಉಡುಪಿ: ರಾಜ್ಯದ ಜನತೆಯ ಹಿತದೃಷ್ಟಿಯಿಂದ, ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ಸಲುವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ತಕ್ಷಣವೇ ರಾಜೀನಾಮೇ ನೀಡಬೇಕೆಂದು ಬಿಜೆಪಿ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಪ್ರಿಂಕೋರ್ಟ್ ಆದೇಶವನ್ನು ಸ್ಪೀಕರ್ ರಮೇಶ್ ಕುಮಾರ್ ಪ್ರಶ್ನೆ ಮಾಡಿದ್ದಾರೆ. ರಮೇಶ್ ಕುಮಾರ್ ಅವರ ಹಿರಿತನದ ಬಗ್ಗೆ ಗೌರವವಿದೆ. ಆದರೆ, ಯಡಿಯೂರಪ್ಪ ವಿಶ್ವಾಸಮತ ಕೇಳುವ ಸಂದರ್ಭದಲ್ಲಿ ತಡರಾತ್ರಿ ಸುಪ್ರೀಂಕೋರ್ಟ್ ಬಾಗಿಲು ಬಡಿದು 48 ಗಂಟೆಗಳಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರಿಗೆ ಸೂಚಿಸಲಾಗಿತ್ತು.
ಆ ಆದೇಶವನ್ನು ಅಂದು ಪಾಲನೆ ಮಾಡಲಾಗಿತ್ತು. ಆದರೆ, ಈಗ ಸುಪ್ರೀಂ ಮಧ್ಯ ಪ್ರವೇಶಿಸುವ ಅಗತ್ಯವಿಲ್ಲ, ಸ್ವೀಕರ್ ಪರಮಾಧಿಕಾರ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಈ ಮಾತುಗಳು ಆಶ್ಚರ್ಯ ಮೂಡಿಸುತ್ತಿವೆ ಎಂದರು.
ಈಗಿನ ಸರಕಾರದ ಮೇಲೆ ವಿಶ್ವಾಸ ಇಲ್ಲದ ಕಾರಣ ಅದೇ ಪಕ್ಷದ ಶಾಸಕರು ರಾಜೀನಾಮೆ ನೀಡುತ್ತಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಶಾಸಕರೇ ತಮ್ಮ ಸರಕಾರ ಹೋದರೆ ಸಾಕು ಎನ್ನುತ್ತಿದ್ದಾರೆ. ಜೆಡಿಎಸ್ ಪಕ್ಷ ಕಾಂಗ್ರೆಸ್ ಪಕ್ಷವನ್ನು ನಡು ನೀರಿನಲ್ಲಿ ಕೈಬಿಡುತ್ತದೆ ಎಂದು ಅಂದು ಯಡಿಯೂರಪ್ಪ ಹೇಳಿದ ಮಾತು ನಿಜವಾಗಿದೆ. ಅವರದೇ ಶಾಸಕರು ಮುಂಬೈಗೆ ಹೋದಾಗ ಡಿಕೆಶಿ ಅಸಹಾಯಕರಾಗಿದ್ದರು ಎಂದು ಹೇಳಿದರು.
ಶಾಸಕರ ಮೇಲೆ ಎಸಿಬಿ ದಾಳಿ ಮಾಡಿ ಅವರ ಮೇಲೆ ಒತ್ತಡ ಹೇರುವ ಕೆಲಸ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಎಸಿಬಿ ಮುಖ್ಯಸ್ಥರನ್ನಾಗಿ ನಿಂಬಾರ್ ಅವರನ್ನು ನೇಮಕ ಮಾಡಲಾಗಿದೆ. ಆ ಮೂಲಕ ರಾಜೀನಾಮೆ ನೀಡಿದ ಶಾಸಕರ ಮೇಲೆ ಒತ್ತಡ ಹೇರಲು ಇದನ್ನು ಬಳಸಲಾಗುತ್ತಿದೆ. ಇದು ರಾಜ್ಯದ ದುರಂತ ರಾಜಕಾರಣ. ಇಂತಹ ರಾಜಕಾರಣ ಖಂಡನೀಯ ಎಂದು ಹೇಳಿದರು.