ಪಡುಪಣಂಬೂರು: ಗ್ರಾಮದ ಪ್ರಗತಿಗೆ ಹಾಗೂ ಮೂಲಸೌಕರ್ಯಕ್ಕೆ ಆದ್ಯತೆ ನೀಡುವ ಕೆಲಸಕ್ಕೆ ಮಕ್ಕಳೇ ಆಧಾರವಾಗಿ ಅವರ ಧ್ವನಿಯು ಮಕ್ಕಳ ಗ್ರಾಮಸಭೆಯಲ್ಲಿ ಮೊಳಗಬೇಕು. ಇದಕ್ಕೆ ಪೂರಕವಾಗಿ ಅವರನ್ನು ಜಾಗೃತಿಗೊಳಿಸುವ ಪ್ರಯತ್ನವನ್ನು ಒಟ್ಟಾಗಿ ಸೇರಿ ಮಾಡೋಣ ಎಂದು ಪಡುಪಣಂಬೂರು ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಅನಿತಾ ಕ್ಯಾಥರಿನ್ ಹೇಳಿದರು.
ಪಡುಪಣಂಬೂರು ಗ್ರಾ.ಪಂ.ನ ಸಂಜೀವಿನಿ ಕಟ್ಟಡದಲ್ಲಿ ನಡೆದ ಮಕ್ಕಳ ಗ್ರಾಮಸಭೆಯ ಪೂರ್ವಭಾವಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಅವ ರು ಮಾತನಾಡಿದರು.
ಕೋವಿಡ್-19 ನಿಯಮಗಳನ್ನು ಪಾಲಿಸಿ ಕೊಂಡು ಫೆ. 20ರಂದು ನಡೆಯಲಿರುವ ಸೀಮಿತ ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳ ಪ್ರತಿಭೆ ಅನಾವರಣಗೊಳಿಸುವುದು, ಗ್ರಾಮದ ಪ್ರತೀ ಶಾಲೆಯಲ್ಲಿ ಚಿತ್ರಕಲೆ, ಭಾಷಣ, ಪ್ರಬಂಧ ಸ್ಪರ್ಧೆಯನ್ನು ನಡೆಸಿಕೊಂಡು ಬಹುಮಾನ ನೀಡಲಾಗುವುದು, ವಿಶೇಷ ಸಂಪನ್ಮೂಲ ವ್ಯಕ್ತಿಯಿಂದ ಮಾಹಿತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಭಾಗವಹಿಸುವಿಕೆಯ ಬಗ್ಗೆ ಚರ್ಚೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆಯಿಂದ ಹಿಡಿದು ಎಲ್ಲ ಸಭಾ ನಿರ್ವಹಣೆಯ ವ್ಯವಸ್ಥೆಯನ್ನು ಮಕ್ಕಳೇ ನಡೆಸುವ ಉದ್ದೇಶದಿಂದ ಸಮಾನವಾಗಿ ಎಲ್ಲ ಶಾಲೆಯ ಮಕ್ಕಳಿಗೆ ಒಂದೊಂದು ಜವಾಬ್ದಾರಿ ಹಂಚಲಾಯಿತು. ಗ್ರಾಮದ ಸಮಸ್ಯೆಗಳ ಬಗ್ಗೆ ಉಲ್ಲೇಖೀಸಿ ಅದರ ಬಗ್ಗೆ ಆಡಳಿತ ವ್ಯವಸ್ಥೆಯೊಂದಿಗೆ ಪರಿಹಾರ ನೀಡುವ ಬಗ್ಗೆ ಚಿಂತನೆ ನಡೆಸಲಾಯಿತು. ಈ ಬಾರಿ ವಿಶಿಷ್ಟ ರೀತಿಯಲ್ಲಿ ಮಕ್ಕಳ ಗ್ರಾಮಸಭೆಯನ್ನು ನಡೆಸುವ ಬಗ್ಗೆ ಸಲಹೆ ಕೇಳಿ ಬಂದಿತು.
ಪಡುಪಣಂಬೂರು ಕ್ಲಸ್ಟರ್‌ನ ಸಿಆರ್‌ಪಿ ಕುಸುಮಾ ಕೆ.ಆರ್. ಅವರು ಸಲಹೆ ನೀಡಿ, ಮಕ್ಕಳ ಬಗ್ಗೆ ಶಿಕ್ಷಕರು ಮುತುವರ್ಜಿ ವಹಿಸಿಕೊಂಡು ಸೀಮಿತ ಮಕ್ಕಳು ಭಾಗವಹಿಸಿದ್ದರು. ಪರಿಣಾಮಕಾರಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ, ಉಳಿದ ಮಕ್ಕಳಿಗೂ ಪ್ರೇರಣೆಯಾಗುವಂತಹ ಸಭೆ ನಡೆಯಬೇಕು ಎಂದರು.
ಸಭೆಯಲ್ಲಿ ಕೆರೆಕಾಡು ಹಿರಿಯ ಪ್ರಾಥಮಿಕ ಶಾಲೆಯ ನವೀನ್ ವೀರಸ್ ಡಿ’ಕೋಸ್ತ, ಪಡುಪಣಂಬೂರು ಹಿರಿಯ ಪ್ರಾಥಮಿಕ ಶಾಲೆಯ ಸುಮತಾ, ತೋಕೂರು ಹಿಂದೂಸ್ಥಾನಿ ಶಾಲೆಯ ಗುಲ್ಶನ್ ಎಸ್., 10ನೇ ತೋಕೂರಿನ ಶ್ರೀ ಸುಬ್ರಹ್ಮಣ್ಯ ಶಾಲೆಯ ಗೌರಿ, ತೋಕೂರು ತಪೋವನದ ಡಾ| ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಉಷಾ ಕೆರೆಕಾಡು ಉಪಸ್ಥಿತರಿದ್ದರು. ಪಂಚಾಯತ್ ಸಿಬಂದಿ ದಿನಕರ್ ವಂದಿಸಿದರು.