ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯಿಂದ ಯಾರ ಪೌರತ್ವವನ್ನೂ ಕಸಿಯುವ ಉದ್ದೇಶವಿಲ್ಲ ಎಂಬುದು ಹಸಿ ಸುಳ್ಳು. ಇದರಿಂದ ಮುಸ್ಲಿಮರಷ್ಟೇ ಅಲ್ಲ, ಎಲ್ಲರೂ ಪೌರತ್ವವನ್ನು ಸಾಬೀತುಪಡಿಸಬೇಕಾಗುತ್ತದೆ ಎಂದು ಐಎಎಸ್ ಅಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ತಿಳಿಸಿದರು.
ದಲಿತ ಸಂಘರ್ಷ ಸಮಿತಿ ಬುಧವಾರ ಗಾಂಧಿಭವನದಲ್ಲಿ ಏರ್ಪಡಿಸಿದ್ದ “ಪೌರತ್ವ ಕಾಯ್ದೆ’ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಚುನಾವಣೆಗಳನ್ನು ಗೆಲ್ಲಲು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಪೌರತ್ವ ಸಾಬೀತು ಪಡಿಸಲು ನಮ್ಮ ತಂದೆ ಹುಟ್ಟಿದ ದಿನಾಂಕವಿರುವ ಪ್ರಮಾಣ ಪತ್ರ ಎಲ್ಲಿಂದ ತರಬೇಕು. ದೇಶದಲ್ಲಿ ನಿರುದ್ಯೋಗ, ಆರ್ಥಿಕ ಹಿಂಜರಿತದಂತಹ ಸಮಸ್ಯೆಗಳು ಕಾಡುತ್ತಿರುವಾಗ ಈ ಪ್ರಕ್ರಿಯೆ ಅನಿವಾರ್ಯವಿದೆಯೇ ಎಂದು ಪ್ರಶ್ನಿಸಿದರು.
ಕೇಂದ್ರ ತನ್ನ ಮೊಂಡುತನ ಬಿಟ್ಟು ಜನರ ಮತ್ತು ವಿದ್ಯಾರ್ಥಿಗಳ ಮಾತನ್ನು ಆಲಿಸಬೇಕು. ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ಜನರೇ ಸ್ವಯಂ ಪ್ರೇರಿತರಾಗಿ ಬೀದಿಗಿಳಿದಿದ್ದಾರೆ. ಇದರಿಂದ ಹತಾಶವಾದ ಕೇಂದ್ರ ಸರ್ಕಾರ ಬಂದೂಕಿನ ಮೂಲಕ ಪ್ರತಿಭಟನೆ ತಡೆಯಲು ಹೊರಟಿದೆ. ಎಲ್ಲರೂ ಇದರ ವಿರುದ್ಧ ಹೋರಾಟ ನಡೆಸಬೇಕಿದೆ ಎಂದರು.
ಸಾಹಿತಿ ದೇವನೂರು ಮಹಾದೇವ ಮಾತ ನಾಡಿ, ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕತೆ ಬಗ್ಗೆ ತಲೆಕೆಡಿಸಿಕೊಳ್ಳದ ಕೇಂದ್ರ ಸರ್ಕಾರ ಪೌರತ್ವದ ಬೆಂಕಿ ಹಚ್ಚಿದೆ. ಪ್ರಧಾನಿ ಮೋದಿ ಅವರ ಆಡಳಿತ ಬಿಜೆಪಿಯನ್ನು ದ್ವಂಸ ಮಾಡುತ್ತಿದೆ. ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿಸುವ ನಾವು ಶೇ.99ರಷ್ಟು ಜನರಿದ್ದೇವೆ. ಕೋಮುವಾದಿಗಳು ಶೇ.1ರಷ್ಟಿದ್ದಾರೆ ಎಂದು ಬಿಜೆಪಿ ಶಾಸಕ ಸೋಮಶೇಖರ್ ವಿರುದ್ಧ ವಾಗ್ಧಾಳಿ ನಡೆಸಿದರು.
ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತ ನಾಡಿದರು. ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ, ಡಿಎಸ್‌ಎಸ್ ಅಂಬೇಡ್ಕರ್ ವಾದ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಡಿಎಸ್‌ಎಸ್ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ದಲಿತ ಮುಖಂಡ ಎನ್. ವೆಂಕಟೇಶ್, ಎನ್. ಮುನಿಸ್ವಾಮಿ, ವಿ. ನಾಗರಾಜ, ಅಣ್ಣಯ್ಯ, ಗೋಪಾಲಕೃಷ್ಣ ಅರಳ ಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿ: ಪೌರತ್ವ ಕಾಯ್ದೆ ಕುರಿತು ನಡೆದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ಜಮೀರ್ ಅಹಮದ್, ಎಚ್.ಆಂಜನೇಯ ಭಾಗವಹಿಸಿದ್ದರು. ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮಾಜಿ ಮುಖ್ಯಮಂತ್ರಿಗಳ ಹೆಸರು ಉಲ್ಲೇಖವಿಲ್ಲದಿದ್ದರೂ, ಸ್ವ ಇಚ್ಛೆಯಿಂದ ಭಾಗವಹಿಸಿದ್ದರು.