ದೇವನಹಳ್ಳಿ: ಗಣಪತಿ ಕೂರಿಸುವುದಕ್ಕೆ ಅನುಮತಿಗಾಗಿ ತಾಲೂಕಿನಲ್ಲಿ ಒಂದೇ ಸೂರಿನಡಿಯಲ್ಲಿ ಅನುಮತಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಬೇಕು ಎಂದು ತಹಶೀಲ್ದಾರ್ ಶಿವರಾಜ್ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ಮತ್ತು ಪುರಸಭಾ ಅಧಿಕಾರಿಗಳೊಂದಿಗೆ ಗೌರಿ-ಗಣೇಶ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಈಗಾಗಲೇ ಸುತ್ತೋಲೆ ಹೊರಡಿಸಿದೆ. ಅದರಂತೆ ಪ್ರತಿ ಅಧಿಕಾರಿಗಳು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಎಲ್ಲಾ ಪರವಾನಗಿಯನ್ನು ಒಂದೇ ಕಚೇರಿಯಲ್ಲಿ ಸಿಗುವಂತೆ ವ್ಯವಸ್ಥೆ ಕಲ್ಪಿಸಿ ಕೊಡಲಾಗಿದೆ ಎಂದರು.
ಎಲ್ಲಾ ಇಲಾಖೆ ಅಧಿಕಾರಿಗಳು ಒಂದೇ ಕಡೆ ಕೂತು ದೇವನಹಳ್ಳಿ, ವಿಜಯಪುರ, ವಿಶ್ವನಾಥಪುರ ಮತ್ತು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಏಕಗವಾಕ್ಷಿ ತೆರೆದು ಕಂದಾಯ, ಪುರಸಭೆ, ಗ್ರಾಪಂ, ಬೆಸ್ಕಾಂ ಮತ್ತು ಇತರೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲೇ ಪರವಾನಗಿಯನ್ನು ನೀಡುವಂತೆ ಮಾಡಲಾಗುತ್ತಿದೆ. ಇದಕ್ಕೆ ಏಕಗವಾಕ್ಷಿ ಕೇಂದ್ರಗಳನ್ನು ತಾಲೂಕಿನ ಪೊಲೀಸ್ ಠಾಣೆಗಳಲ್ಲಿ ತೆರೆಯಲಾಗುತ್ತಿದೆ ಎಂದರು.
ಮಣ್ಣಿನ ಗಣಪನ ಆರಾಧನೆ: ಪಿಒಪಿ ಗಣೇಶ ಮೂರ್ತಿ ತಯಾರಿಸುವುದು ಹಾಗೂ ಮಾರಾಟವನ್ನು ಸರ್ಕಾರ ನಿಷೇಧಿಸಿದೆ. ತಾಲೂಕಿನಲ್ಲಿ ಜನ ಬಣ್ಣರಹಿತ ಮಣ್ಣಿನ ಗಣಪನ ಆರಾಧನೆಯ ಮೂಲಕ ಪರಿಸರ ಸ್ನೇಹಿ ಹಬ್ಬ ಆಚರಿಸಬೇಕು. ಸಾರ್ವಜನಿಕ ಗಣೇಶೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಹ್ವಾನ ಕೊಡಬಾರದು. ಕೆರೆಗಳಲ್ಲಿ ಮಳೆಯಿಂದ ಹೆಚ್ಚು ಕೆರೆ ತುಂಬಿರುವುದರಿಂದ ಜಲ ಜೀವರಾಶಿ ಇರುವುದರಿಂದ ಕೆರೆಗಳಲ್ಲಿ ಗಣಪತಿ ವಿಸರ್ಜನೆಗೆ ನಿರ್ಬಂಧ ಹೇರಲಾಗಿದೆ ಎಂದರು.
ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಿ: ಕಲ್ಯಾಣಿಗಳಲ್ಲಿ ಗಣೇಶ ವಿಸರ್ಜನೆ ಮಾಡಬೇಕು. ಡ್ರಮ್ ಮತ್ತು ಪುರಸಭೆ ಮತ್ತು ಅಧಿಕಾರಿ ವರ್ಗ ಸೂಚಿಸುವ ಜಾಗದಲ್ಲಿ ಗಣಪತಿ ವಿಸರ್ಜನೆ ಮಾಡಬೇಕು. ಸರ್ಕಾರ ಹೊರಡಿಸಿರುವ ಕೆಲವು ಮಾರ್ಗದರ್ಶನಗಳನ್ನು ಪಾಲಿಸಲು ಕಡ್ಡಾಯವಾಗಿ ಅಧಿಕಾರಿಗಳು ಪಾಲಿಸುವಂತೆ ಸೂಚಿಸಬೇಕು. ಪರಿಸರ ಸ್ನೇಹಿ ಗಣೇಶ ಮೂರ್ತಿ ಬಳಸಲು ಸೂಚಿಸಬೇಕು ಎಂದರು.
ಸಿಸಿ ಕ್ಯಾಮೆರಾ ಅಳವಡಿಸಿ: ಧಾರ್ಮಿಕ ನಾಯಕರನ್ನು ಕರೆಸಿ ಸಭೆಯನ್ನು ಈಗಾಗಲೇ ಮಾಡಲಾಗಿದೆ. ಯಾವ ಸೂಕ್ಷ್ಮ ಪ್ರದೇಶಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಕರೇ ಖುದ್ದಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ. ಈ ಬಾರಿಯ ಗಣೇಶ ಚತುರ್ಥಿ ಯಶಸ್ವಿಯಾಗಿ ನಡೆಯುವಂತಾಗಲಿ ಎಂದು ತಿಳಿಸಿದರು.
ಪೊಲೀಸ್ ಇಲಾಖೆ ಅಧಿಕಾರಿ ರಮೇಶ್, ನಾಗಪ್ಪ ಅಂಬಿಕೇರ್, ವಿರೇಂದ್ರ ಪ್ರಸಾದ್, ಪಿಎಸ್‌ಐ ಶಿವಪ್ಪ, ಶರಣಪ್ಪ, ಈರಮ್ಮ, ನಾಗರಾಜ್, ದೇವನಹಳ್ಳಿ ಪುರಸಭಾ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್, ವಿಜಯಪುರ ಮುಖ್ಯಾಧಿಕಾರಿ ಮೋಹನ್‌ಕುಮಾರ್ ಹಾಗೂ ಮತ್ತಿತರರು ಇದ್ದರು.