ಬೆಂಗಳೂರು: ಬಿಜೆಪಿಯವರು ಬೇಕಾದರೆ ರಾಹುಲ್ ಗಾಂಧಿಯವರ ಟಿ ಶರ್ಟ್ ಬಗ್ಗೆಯಾದರೂ ಮಾತನಾಡಲಿ, ಚಡ್ಡಿ ಬಗ್ಗೆಯಾದರೂ ಮಾತನಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯವರು ಏನು ಬೇಕಾದರೂ ಮಾತನಾಡಲಿ, ನಾವು ಅದರ ಬಗ್ಗೆ ಮಾತನಾಡುವುದಿಲ್ಲ. ರಾಹುಲ್ ಗಾಂಧಿ 46 ಸಾವಿರ ರೂ. ಟೀ ಶರ್ಟ್ ಹಾಕಿದ್ದ ಬಗ್ಗೆ ಮಾತನಾಡುವವರಿಗೆ ಹತ್ತು ಲಕ್ಷ ರೂ. ಕೋಟ್ ಹಾಕಿದ್ದು ಕಾಣುವುದಿಲ್ಲವೇ? ರಾಹುಲ್ ಗಾಂಧಿಯವರಿಗೆ ಅಷ್ಟು ಮೊತ್ತದ ಟೀ ಶರ್ಟ್ ಧರಿಸುವ ಅರ್ಹತೆ ಇಲ್ಲವೇ? ಎಂದು ಪ್ರಶ್ನಿಸಿದರು.
ಒಟ್ಟಿನಲ್ಲಿ ಬಿಜೆಪಿಯವರು ರಾಹುಲ್ ಗಾಂಧಿಯವರ ಪಾದಯಾತ್ರೆಯನ್ನು ಗಮನಿಸುತ್ತಿದ್ದಾರೆ ಎಂಬುದು ಇದರಿಂದ ಸಾಬೀತಾಗಿದೆ. ಬಿಜೆಪಿಯವರು ಕತ್ತರಿ ಇದ್ದಂತೆ. ಅವರು ದೇಶವನ್ನು ವಿಭಜಿಸುತ್ತಾರೆ. ರಾಹುಲ್ ಗಾಂಧಿ ಸೂಜಿ ಇದ್ದಂತೆ. ಅವರು ದೇಶವನ್ನು ಜೋಡಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.
ನನಗೆ ಕೇಳಲಿ: ಬೆಂಗಳೂರು ನಗರದ 28 ಶಾಸಕರ ಪೈಕಿ 26 ಶಾಸಕರು ರಿಯಲ್ ಎಸ್ಟೇಟ್ ನಲ್ಲಿ ಇದ್ದಾರೆ ಎಂಬ ಮಾಜಿ ಸಂಸದೆ ರಮ್ಯಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರು ನಮ್ಮ ಮನೆ ಹೆಣ್ಣು ಮಗಳು, ಪಕ್ಷದ ಮುಖಂಡರು, ಮಾಜಿ ಸಂಸದೆ. ಅವರು ಏನು ಹೇಳಿದ್ದಾರೋ ಗೊತ್ತಿಲ್ಲ. ಅವರ ಟ್ವೀಟ್ ಬಗ್ಗೆ ಅವರನ್ನೇ ಕೇಳಿ. ಬೇಕಿದ್ದರೆ ಅವರು ನನ್ನನ್ನು ಕೇಳಲಿ ಎಂದರು.
ಇದನ್ನೂ ಓದಿ:ರಾಹುಲ್ ಗಾಂಧಿಗೆ ‘ಯೇಸು ಒಬ್ಬನೇ ದೇವರು’ ಎಂದ ಪಾದ್ರಿ: ಭಾರತ ಒಡೆಯುವ ಯಾತ್ರೆ ಎಂದ ಬಿಜೆಪಿ
ಹಗ್ಗವನ್ನೂ ನಾನೇ ಕೊಡ್ತೇನೆ: ಸಚಿವ ಸುನೀಲ್ ಕುಮಾರ್ ಅವರ ” ತನಿಖಾ ಸವಾಲ್ ಸ್ವೀಕಾರ” ದ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ತನಿಖೆ ಮಾಡಲಿ. ಆದರೆ ಏಕೆ ತಡ ಮಾಡುತ್ತಿದ್ದಾರೆ? ಅವರು ಸಿಐಡಿ ತನಿಖೆಯಾದರೂ ನಡೆಸಲಿ, ಸಿಬಿಐ ತನಿಖೆಯಾದರೂ ಮಾಡಲಿ. ಬೇಕಿದ್ದರೆ ನಾನೇ ಹಗ್ಗ ಕಳುಹಿಸಿಕೊಡುತ್ತೇನೆ.ನೇಣಿಗೆ ಬೇಕಾದರೂ ಹಾಕಲಿ ಎಂದು ತಿರುಗೇಟು ನೀಡಿದರು.