ಜಮ್ಮು-ಕಾಶ್ಮೀರ:ಜಮ್ಮು-ಕಾಶ್ಮೀರದ ಕುಲ್ಗಾಂನಲ್ಲಿ ಮೂವರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆಗೈದ ಘಟನೆಯ ಹಿಂದೆ ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆ ಇದ್ದಿರುವುದಾಗಿ ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ ವಿಜಯ್ ಕುಮಾರ್ ತಿಳಿಸಿದ್ದಾರೆ.
ಕಾಶ್ಮೀರ ವಲಯದ ಐಜಿಪಿ ಕುಮಾರ್ ಶುಕ್ರವಾರ(ಅಕ್ಟೋಬರ್ 30, 2020) ಖಚಿತಪಡಿಸಿದ್ದಾರೆ. ಕುಲ್ಗಾಮ್ ನಲ್ಲಿ ಮೂವರು ಬಿಜೆಪಿ ಕಾರ್ಯಕರ್ತರನ್ನು ರೆಸಿಸ್ಟೆನ್ಸ್ ಫ್ರಂಟ್(ಟಿಆರ್ ಎಫ್) ಹತ್ಯೆಗೈದಿದ್ದು, ಈ ಸಂಘಟನೆ ಲಷ್ಕರ್ ಎ ತೊಯ್ಬಾದ ಅಣತಿಯಂತೆ ಕಾರ್ಯಾಚರಿಸುತ್ತಿದೆ ಎಂದು ಶಂಕಿಸಲಾಗಿದೆ.
ಗುರುವಾರ ರಾತ್ರಿ(ಅಕ್ಟೋಬರ್ 29,2020) ಭಾರತೀಯ ಜನತಾ ಪಕ್ಷದ ಸ್ಥಳೀಯ ಮುಖಂಡ ಫಿದಾ ಹುಸೇನ್ ಯಾತೋ, ಕಾರ್ಯಕರ್ತರಾದ ಉಮರ್ ರಂಜಾನ್ ಹಾಜನ್ ಮತ್ತು ಉಮರ್ ರಶೀದ್ ಬೇಗ್ ಅವರನ್ನು ಕುಲ್ಗಾಮ್ ನಲ್ಲಿ ಉಗ್ರರು ಗುಂಡಿಟ್ಟು ಹತ್ಯೆಗೈದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಕಾಪು: ಕಸದ ಜೊತೆಗೆ ಸಿಕ್ಕಿದ ಚಿನ್ನವನ್ನು ಮರಳಿಸಿ, ಪ್ರಾಮಾಣಿತೆ ಮೆರೆದ ಪೌರಕಾರ್ಮಿಕರು
ಮೂವರು ಕಾರಿನಲ್ಲಿ ತೆರಳುತ್ತಿದ್ದಾಗ ರಾತ್ರಿ 8.20ರ ಹೊತ್ತಿಗೆ ಉಗ್ರರು ಯದ್ವಾತದ್ವಾ ಗುಂಡಿನ ದಾಳಿ ನಡೆಸಿದ್ದರು. ಕೂಡಲೇ ಮೂವರನ್ನು ಖ್ವಾಜಿಗುಂಡ್ ನಲ್ಲಿರುವ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು. ಈ ಹತ್ಯೆಯನ್ನು ತಾವೇ ಮಾಡಿರುವುದಾಗಿ ರೆಸಿಸ್ಟೆನ್ಸ್ ಫ್ರಂಟ್(ಟಿಆರ್ ಎಫ್) ಹೊಣೆ ಹೊತ್ತುಕೊಂಡಿರುವುದಾಗಿ ಪಿಟಿಐ ನ್ಯೂಸ್ ಏಜೆನ್ಸಿ ವರದಿ ಮಾಡಿತ್ತು.